ಶೆಟ್ಟರ್ ರಾಜಿನಾಮೆಯಿಂದ ತೆರವಾಗಿದ್ದ ಪರಿಷತ್ ಸ್ಥಾನಕ್ಕೆ ಜುಲೈ.12ರಂದು ಉಪ ಚುನಾವಣೆ
ಸಾಂದರ್ಭಿಕ ಚಿತ್ರ (PTI)
ಬೆಂಗಳೂರು : ಸಂಸದ ಜಗದೀಶ್ ಶೆಟ್ಟರ್ ಅವರ ರಾಜಿನಾಮೆಯಿಂದ ತೆರವಾಗಿರುವ ವಿಧಾನ ಪರಿಷತ್ ಸ್ಥಾನಕ್ಕೆ ಜುಲೈ.12ರಂದು ಮತದಾನ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಜಗದೀಶ್ ಶೆಟ್ಟರ್ ಅವರು 2023ರಲ್ಲಿ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಈ ವೇಳೆ ಶೆಟ್ಟರ್ ಅವರನ್ನು ಕಾಂಗ್ರೆಸ್, ವಿಧಾನ ಪರಿಷತ್ ಸದಸ್ಯರನ್ನಾಗಿ ನೇಮಕ ಮಾಡಿತ್ತು. ಬದಲಾದ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಶೆಟ್ಟರ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು.
ಅನಂತರ ವಿಧಾನ ಪರಿಷತ್ ಸದಸ್ಯತ್ವ ಸ್ಥಾನಕ್ಕೆ ಅವರು ರಾಜೀನಾಮೆ ನೀಡಿದ್ದರು. ಸದ್ಯ ಅವರು ಬಿಜೆಪಿಯಿಂದ ಬೆಳಗಾವಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಆ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಜೂ.25ಕ್ಕೆ ಅಧಿಸೂಚನೆ ಪ್ರಕಟಿಸಲಿದ್ದು, ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ.
ನಾಮಪತ್ರ ಸಲ್ಲಿಸಲು ಜುಲೈ 2 ಕೊನೆಯ ದಿನ. ಜುಲೈ 3ಕ್ಕೆ ನಾಮಪತ್ರ ಪರಿಶೀಲನೆ, ಉಮೇದುವಾರಿಕೆ ವಾಪಸ್ ಪಡೆಯಲು ಜುಲೈ 5ಕ್ಕೆ ಕೊನೆಯ ದಿನವಾಗಿದೆ. ಜುಲೈ 12ರ ಬೆಳಗ್ಗೆ 9ರಿಂದ ಸಂಜೆ 4ಗಂಟೆಯ ವರೆಗೆ ಮತದಾನ. ಅಂದು ಸಂಜೆ 5ಗಂಟೆಗೆ ಮತ ಎಣಿಕೆ ಕಾರ್ಯ ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟಿಸುವ ಸಾಧ್ಯತೆಗಳಿವೆ ಎಂದು ಆಯೋಗ ತಿಳಿಸಿದೆ.