ಉಪ ಚುನಾವಣೆ : ಮೂರು ಕ್ಷೇತ್ರಗಳಲ್ಲಿ 45 ನಾಮಪತ್ರಗಳು ಅಂಗೀಕಾರ
ಸಾಂದರ್ಭಿಕ ಚಿತ್ರ
ಬೆಂಗಳೂರು : ಬಳ್ಳಾರಿ ಜಿಲ್ಲೆಯ ಸಂಡೂರು, ಹಾವೇರಿ ಜಿಲ್ಲೆಯ ಶಿಗ್ಗಾಂವಿ ಹಾಗೂ ರಾಮನಗರ ಜಿಲ್ಲೆಯ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳಿಗೆ ನ.13ರಂದು ಉಪಚುನಾವಣೆ ನಡೆಯುತ್ತಿದ್ದು, ಈ ಕ್ಷೇತ್ರಗಳಿಗೆ ಒಟ್ಟು 45 ನಾಮಪತ್ರಗಳು ಅಂಗೀಕಾರಗೊಂಡಿವೆ.
ಈ ಮೂರೂ ಕ್ಷೇತ್ರಗಳಲ್ಲಿ ಒಟ್ಟು 19 ನಾಮಪತ್ರಗಳನ್ನು ಹಿಂಪಡೆಯಲಾಗಿದೆ. ನಾಮಪತ್ರಗಳ ಪರಿಶೀಲನೆಯ ವೇಳೆಯಲ್ಲಿಯೇ 24 ನಾಮಪತ್ರಗಳು ತಿರಸ್ಕೃತಗೊಂಡಿದ್ದವು.
ಸಂಡೂರು ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಬಂಗಾರು ಹನುಮಂತು ಮತ್ತು ಕಾಂಗ್ರೆಸ್ ಅಭ್ಯರ್ಥಿಯಾಗಿ ಅನ್ನಪೂರ್ಣ, ಶಿಗ್ಗಾಂವಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಭರತ್ ಬೊಮ್ಮಾಯಿ ಮತ್ತು ಕಾಂಗ್ರೆಸ್ ಅಭ್ಯರ್ಥಿಯಾಗಿ ಯಾಸೀರ್ ಅಹ್ಮದ್ ಖಾನ್ ಪಠಾಣ್, ಚನ್ನಪಟ್ಟಣ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿ.ಪಿ.ಯೋಗೇಶ್ವರ್ ಸ್ಪರ್ಧಿಸಿದ್ದಾರೆ.
ಸಂಡೂರು ಕ್ಷೇತ್ರದಲ್ಲಿ-4, ಶಿಗ್ಗಾಂವಿ ಕ್ಷೇತ್ರದಲ್ಲಿ 6, ಚನ್ನಪಟ್ಟಣದಲ್ಲಿ 29 ಮಂದಿ ಪಕ್ಷೇತರ ಹಾಗೂ ಮಾನ್ಯತೆ ಪಡೆಯದ ನೋಂದಾಯಿತ ಪಕ್ಷಗಳ ಅಭ್ಯರ್ಥಿಗಳಾಗಿ ಚುನಾವಣಾ ಕಣದಲ್ಲಿದ್ದಾರೆ. ಇದೀಗ ಉಪಚುನಾವಣಾ ಅಖಾಡ ರಂಗೇರಿಸಿದ್ದು, ನಾಳೆ(ಅ.31) ಚುನಾವಣಾ ಪ್ರಚಾರ ಮತ್ತಷ್ಟು ಕಾವು ಪಡೆದುಕೊಳ್ಳಲಿದೆ.