ಕಾಂಗ್ರೆಸ್ ಬಣ ರಾಜಕೀಯದ ಕಿತ್ತಾಟದ ಬಣ್ಣ ಶೀಘ್ರದಲ್ಲೇ ಬಯಲಿಗೆ ಬರಲಿದೆ : ಬಿ.ವೈ.ವಿಜಯೇಂದ್ರ
"ಅಧಿಕಾರಕ್ಕಾಗಿ ಹಪಾಹಪಿಸುವ ಕಳ್ಳಿ ಗಿಡಗಳಾವುವೂ ಬಿಜೆಪಿಯಲ್ಲಿ ತಲೆಯೆತ್ತಲು ಸಾಧ್ಯವಿಲ್ಲ"
ಬೆಂಗಳೂರು : ಭಾರತೀಯ ಜನತಾ ಪಾರ್ಟಿ ತತ್ವ, ಸಿದ್ದಾಂತ ಆಧರಿಸಿದ ಶಿಸ್ತಿನ ಪಕ್ಷ. ಕಳೆಯಿಲ್ಲದೆ ಬೆಳೆದು ನಿಂತಿರುವ ಸಮೃದ್ಧ ತೋಟ, ನಿಮ್ಮ ಕಾಂಗ್ರೆಸ್ ನಲ್ಲಿರುವ ಪಾರ್ಥೇನಿಯಂ ಗಿಡಗಳು ನಮ್ಮಲ್ಲಿಲ್ಲ. ಕಾಂಗ್ರೆಸ್ ಬಣ ರಾಜಕೀಯದ ಕಿತ್ತಾಟದ ಬಣ್ಣ ಶೀಘ್ರದಲ್ಲೇ ಬಯಲಿಗೆ ಬರಲಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬರೆದುಕೊಂಡಿರುವ ಅವರು, "ಅಧಿಕಾರಕ್ಕಾಗಿ ಹಪಾಹಪಿಸುವ ಕಳ್ಳಿ ಗಿಡಗಳಾವುವೂ ನಮ್ಮ ಪಕ್ಷದಲ್ಲಿ ತಲೆಯೆತ್ತಲು ಸಾಧ್ಯವಿಲ್ಲ. ತಲೆ ಎತ್ತಲು ಹೋದರೆ ಅದಕ್ಕೆ ಮದ್ದು ನೀಡುವಷ್ಟು ನಮ್ಮ ವರಿಷ್ಠ ಮಂಡಳಿಯು ಸಶಕ್ತವಾಗಿದೆ. ಭಾರತದ ರಾಜಕೀಯ ಭೂಪಟದಲ್ಲಿ ಮಾಸಿ ಹೋಗುತ್ತಿರುವ ನಿಮ್ಮ ಕಾಂಗ್ರೆಸ್ ಪಕ್ಷ ಅಧಿಕಾರ ಕಬಳಿಸುವುದನ್ನಷ್ಟೇ ಕೇಂದ್ರೀಕರಿಸಿ ಸುಳ್ಳು ಭರವಸೆಗಳು ಹಾಗೂ ಆಮಿಷಗಳ ಬಲೆ ಹೆಣೆದು ಕರ್ನಾಟಕದಲ್ಲಿ ಅಧಿಕಾರ ದಕ್ಕಿಸಿಕೊಂಡಿದೆ. ಲೋಕಸಭಾ ಚುನಾವಣೆಯ ನಂತರ ಈ ಟೊಳ್ಳು ಬಲೆಯನ್ನು ಜನರೇ ತುಂಡರಿಸಲಿದ್ದಾರೆ" ಎಂದು ಹೇಳಿದರು.
"ದೀಪ ಆರುವ ಮುನ್ನ ಜೋರಾಗಿ ಹೊತ್ತಿ ಉರಿಯುತ್ತದೆ, ಕಾಲವೇ ನಿಮಗೆ ಉತ್ತರ ಹೇಳಲಿದೆ. ಯಾರು ಯಾರ ವಿರುದ್ಧ ಮುಗಿ ಬೀಳುತ್ತಾರೆ? ಯಾರು ಎಲ್ಲಿರುತ್ತಾರೆ? ಎಂಬುದನ್ನು ಕೆಲವೇ ದಿನಗಳು ಕಾದುನೋಡಿ ನಿಮ್ಮ ಕಾಂಗ್ರೆಸ್ ಪಡಸಾಲೆಯಲ್ಲೇ ನಿಮಗೆ ಉತ್ತರ ಸಿಗಲಿದೆ" ಎಂದು ತಿಳಿಸಿದರು.
"ನೀವು ಮುಖ್ಯಮಂತ್ರಿಯಾಗುವ ವೇಳೆ ಡಿಕೆಶಿ ಅವರೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆ ಬದಿಗೊತ್ತಿ ಹೈಕಮಾಂಡ್ ಸೂತ್ರ ಧಿಕ್ಕರಿಸುವ ನಿಮ್ಮ ತಂತ್ರದ ಜಾಡು ಹಿಡಿದಿರುವ ನಿಮ್ಮ ವಿರೋಧಿ ಬಣ ಸುಮ್ಮನೆ ಕುಳಿತಿಲ್ಲ, ಮುಖ್ಯಮಂತ್ರಿ ಅಧಿಕಾರ ಹಂಚಿಕೆಯ ಕಾಲ ಸನ್ನಿಹಿತವಾಗುವುದರೊಳಗೇ ಪರಿಸ್ಥಿತಿ ಯಾವ ರೀತಿ ಬಿಗಡಾಯಿಸುತ್ತದೆ ಎನ್ನುವುದನ್ನು ಕಾಂಗ್ರೆಸ್ ನಲ್ಲಿ ವ್ಯೂಹ ರಚಿಸುವ ಬಂಡೆಯೊಂದು ಈಗಾಗಲೇ ಸದ್ದು ಮಾಡುತ್ತಿದೆ" ಎಂದು ಎಚ್ಚರಿಸಿದರು.