ಸಿದ್ದರಾಮಯ್ಯ ನಾಮಬಲದ ಮೇಲೆ ‘ಮುಡಾ’ ಅಕ್ರಮ : ಬಿ.ವೈ.ವಿಜಯೇಂದ್ರ
ವಿಜಯೇಂದ್ರ(PC:x/@BYVijayendra)
ಬೆಂಗಳೂರು : ಅತ್ಯಂತ ಕಡಿಮೆ ಅವಧಿಯಲ್ಲಿ ಕಾಂಗ್ರೆಸ್ ಸರಕಾರವು ರಾಜ್ಯದ ಜನರ ವಿಶ್ವಾಸ, ಜನಪ್ರಿಯತೆಯನ್ನು ಕಳೆದುಕೊಂಡಿದೆ. ಎರಡು ತಿಂಗಳುಗಳಿಂದ ರಾಜ್ಯದ ಆಡಳಿತ ಪಕ್ಷ ಇದೆ ಎಂಬುದನ್ನು ಜನರೇ ಮರೆತುಹೋಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ಷೇಪಿಸಿದ್ದಾರೆ.
ರವಿವಾರ ಇಲ್ಲಿನ ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಕಾನೂನು ಪ್ರಕೋಷ್ಠದ ಕಾರ್ಯಕಾರಿಣಿ ಉದ್ಘಾಟಿಸಿ ಮಾತನಾಡಿದ ಅವರು, ಮುಡಾದಲ್ಲಿ ಪ್ರತಿ ಹಂತದಲ್ಲೂ ಸಿದ್ದರಾಮಯ್ಯರ ನಾಮಬಲದ ಮೇಲೆ ಎಲ್ಲವೂ ಅಕ್ರಮವಾಗಿ ನಡೆದುಕೊಂಡು ಹೋಗಿದೆ. ಅಲ್ಲದೆ, 50ಃ50 ಅನುಪಾತದಲ್ಲೆ ತಮ್ಮ ಪತ್ನಿಗೆ ನಿವೇಶನಗಳು ಲಭಿಸಿವೆ ಎಂದರು.
‘ಬಿಜೆಪಿ ಸರಕಾರ ಇದ್ದಾಗ 50ಃ50 ಅನುಪಾತದಲ್ಲಿ ನಿವೇಶನ ನೀಡಲು ಒಪ್ಪಿಗೆ ಕೊಟ್ಟಿರಲಿಲ್ಲ, ಕೆಲವು ಅಧಿಕಾರಿಗಳು ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡು ಸಿದ್ದರಾಮಯ್ಯನವರ ಕುಟುಂಬಕ್ಕೆ ಖುಷಿ ಪಡಿಸಲು ಅಕ್ರಮವಾಗಿ ಇದೆಲ್ಲವನ್ನೂ ಮಾಡಿದ್ದಾರೆ ಎಂದ ಅವರು, ರಾಜ್ಯದಲ್ಲಿ ಒಂದು ಕಡೆ ಆಡಳಿತ ಸಂಪೂರ್ಣ ಕುಸಿದುಬಿದ್ದಿದೆ. ಜೊತೆಗೆ ಹಗರಣಗಳೂ ನಡೆದಿವೆ ಎಂದು ದೂರಿದರು.
ನಮ್ಮದು ಕಾಟಾಚಾರದ ಹೋರಾಟವಲ್ಲ, ಒಂದು ವಿರೋಧ ಪಕ್ಷವಾಗಿ ಆಡಳಿತ ಪಕ್ಷವನ್ನು ಕೇವಲ ವಿರೋಧಿಸಲು ಹೋರಾಟ ಕೈಗೆತ್ತಿಕೊಂಡಿಲ್ಲ. ಹೊಸ ಸರಕಾರ ಬಂದಾಗ ಒಂದು ವರ್ಷ ಕಾಲಾವಕಾಶ ಕೊಡಬೇಕಾಗುತ್ತದೆ. ಎಷ್ಟೇ ಅನುಭವವಿದ್ದರೂ ಸರಕಾರ ಸರಿಯಾದ ಹಾದಿಯಲ್ಲಿ ನಡೆಯಲು ಸಮಯ ಬೇಕಾಗುತ್ತದೆ. ಅದರರ್ಥ ಭ್ರಷ್ಟಾಚಾರದಲ್ಲಿ ಮುಳುಗಬೇಕೆಂದಲ್ಲ ಎಂದು ಅವರು ವಿಶ್ಲೇಷಿಸಿದರು.
ಬಿಜೆಪಿಯಲ್ಲಿ ಅನೇಕ ಪ್ರಕೋಷ್ಠಗಳಿವೆ. ಎಲ್ಲ ಪ್ರಕೋಷ್ಠಗಳಿಗೂ ಅದರದ್ದೇ ಆದ ಜವಾಬ್ದಾರಿಗಳಿವೆ. ಕಾನೂನು ಪ್ರಕೋಷ್ಠದ ಮೊದಲ ರಾಜ್ಯ ಕಾರ್ಯಕಾರಿಣಿ ಇದಾಗಿದೆ. ಕಾನೂನು ಪ್ರಕೋಷ್ಠವು ಪಕ್ಷದ ವಿಚಾರದಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ವಿಜಯೇಂದ್ರ ಮೆಚ್ಚುಗೆ ಸೂಚಿಸಿದರು.