ಪಕ್ಷ ವಿರೋಧಿ ಚಟುವಟಿಕೆ | ರಾಜ್ಯ ಕೋರ್ ಕಮಿಟಿಯಲ್ಲಿ ಚರ್ಚಿಸಿ ವರಿಷ್ಠರಿಗೆ ವರದಿ : ವಿಜಯೇಂದ್ರ
"ರೈತರನ್ನು ಬೀದಿಗೆ ತರಲು ರಾಜ್ಯ ಸರಕಾರದಿಂದ ಕುಮ್ಮಕ್ಕು"
ಬಿ.ವೈ.ವಿಜಯೇಂದ್ರ
ಕಲಬುರಗಿ : ವಕ್ಫ್ ವಿಷಯ ಮುಂದಿಟ್ಟು ರೈತರನ್ನು ಬೀದಿಗೆ ತರಲು ರಾಜ್ಯ ಸರಕಾರ ಕುಮ್ಮಕ್ಕು ಕೊಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಕ್ಫ್ ಮೂಲಕ ರೈತರ, ಮಠ, ಮಂದಿರಗಳ ಜಾಗ ಒತ್ತುವರಿಯ ವಿರುದ್ಧ ಬಿಜೆಪಿ ನಿರಂತರ ಹೋರಾಟ ಮಾಡಿದೆ. ಬೀದರ್ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಇವತ್ತು ಪ್ರವಾಸ ನಡೆಯುತ್ತಿದೆ ಎಂದು ಅವರು ವಿವರಿಸಿದರು. ಡಾ.ಅಶ್ವತ್ಥನಾರಾಯಣ್, ರೇಣುಕಾಚಾರ್ಯ, ಬಿ.ಶ್ರೀರಾಮುಲು, ಖೂಬಾ, ಬೈರತಿ ಬಸವರಾಜ್ ಮೊದಲಾದ ನಾಯಕರು ತಮ್ಮ ಜೊತೆಗಿದ್ದಾರೆ ಎಂದು ತಿಳಿಸಿದರು.
ತೊಗರಿ ಬೆಳೆ ಸಂಪೂರ್ಣ ನಾಶ :
ತೊಗರಿ ಬೆಳೆ ರೋಗಕ್ಕೆ ಸಿಲುಕಿದ್ದು, 2 ರಿಂದ 3 ಲಕ್ಷ ಎಕರೆ ತೊಗರಿ ಬೆಳೆ ಸಂಪೂರ್ಣ ನಾಶವಾಗಿದೆ. ರಾಜ್ಯ ಸರಕಾರವು ಗ್ಯಾರಂಟಿಯಿಂದ ಜನರು ಸಂತೋಷವಾಗಿದ್ದಾರೆ ಎಂದು ರೈತರನ್ನು ಮರೆತಿದೆ ಎಂದು ಟೀಕಿಸಿದರು. ಕೃಷಿ ಸಚಿವರಿಗೆ ಸಮಯ ಸಿಕ್ಕಿದರೆ ಈ ಭಾಗಕ್ಕೆ ಬಂದು ರೈತರ ಸಮಸ್ಯೆ ಅರ್ಥ ಮಾಡಿಕೊಳ್ಳಲಿ. ಎಕರೆಗೆ 25 ಸಾವಿರದಿಂದ 30 ಸಾವಿರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ರೈತರಿಗೆ ಅನ್ಯಾಯ ಆಗದಂತೆ ತಡೆಯಲು ಪ್ರಧಾನಿ ಕ್ರಮ :
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಕ್ಫ್ ವಿಷಯದಲ್ಲಿ ದೇಶದ ಯಾವುದೇ ರೈತರಿಗೆ ಅನ್ಯಾಯ ಆಗಬಾರದು. ವಕ್ಫ್ ಕಾಯಿದೆಗೆ ಸಮಗ್ರ ತಿದ್ದುಪಡಿ ಆಗಬೇಕೆಂಬ ಉದ್ದೇಶ ಹೊಂದಿದ್ದಾರೆ. ಅವರ ಆದೇಶದಂತೆ ಸಂಸತ್ತಿನ ಸಮಿತಿ ರಚಿಸಲಾಗಿದೆ. ಯತ್ನಾಳ್ ಸೇರಿ ಯಾರು ಬೇಕಾದರೂ ವಕ್ಫ್ ವಿಚಾರದಲ್ಲಿ ತೆರಳಿ ಅಹವಾಲು ಸಲ್ಲಿಸಬಹುದು ಎಂದು ಬಿ.ವೈ.ವಿಜಯೇಂದ್ರ ಅವರು ಪ್ರಶ್ನೆಗೆ ಉತ್ತರ ನೀಡಿದರು.
14 ನಿವೇಶನ ನೀಡಿಕೆಗಷ್ಟೇ ಸೀಮಿತವಾಗಿಲ್ಲ :
ಈಡಿ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಯನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂಬ ಹೇಳಿಕೆಯನ್ನು ಇವತ್ತು ಅಥವಾ ನಾಳೆ ಮುಖ್ಯಮಂತ್ರಿಗಳಿಂದ ಅಥವಾ ಡಿಕೆ.ಶಿವಕುಮಾರರಿಂದ ನಿರೀಕ್ಷಿಸಬಹುದು. ಮುಡಾ ಹಗರಣ ಕುರಿತು ಬಿಜೆಪಿ ಸದನದಲ್ಲಿ ಚರ್ಚಿಸಲು ಮುಂದಾಗಿತ್ತು. ದೇಸಾಯಿ ಕಮಿಟಿ ರಚಿಸಿದ್ದು, ಚರ್ಚೆಗೆ ಅವಕಾಶ ಕೊಡುವುದಿಲ್ಲ ಎಂದು ಕಾನೂನು ಸಚಿವ ಎಚ್ಕೆ ಪಾಟೀಲರು ಸದನದಲ್ಲಿ ಹೇಳಿ, ಚರ್ಚೆಗೆ ಅವಕಾಶ ಕೊಡಲಿಲ್ಲ ಎಂದರು.
ಮೈಸೂರು ಮುಡಾ ಹಗರಣವು ಕೇವಲ ಮುಖ್ಯಮಂತ್ರಿಗಳ ಕುಟುಂಬಕ್ಕೆ 14 ನಿವೇಶನ ನೀಡಿಕೆಗಷ್ಟೇ ಸೀಮಿತವಾಗಿಲ್ಲ ಎಂದು ಬಿಜೆಪಿ ಆರಂಭದಲ್ಲೇ ತಿಳಿಸಿದೆ. 14 ನಿವೇಶನ ವಾಪಸಾತಿಗೆ 62 ಕೋಟಿ ಪರಿಹಾರ ಕೊಡಬೇಕೆಂದೂ ಮುಖ್ಯಮಂತ್ರಿಯವರು ಹೇಳಿದ್ದರು. ಬಡವರಿಗೆ ಕೊಡಬೇಕಿದ್ದ ಸಾವಿರಾರು ಕೋಟಿ ಮೊತ್ತದ ನಿವೇಶನಗಳು ಬ್ರೋಕರ್ಗಳ, ರಿಯಲ್ ಎಸ್ಟೇಟ್ನವರ ಪಾಲಾಗಿದೆ ಎಂದು ನಾನು ಹೇಳಿದ್ದೆ ಎಂದು ಗಮನಕ್ಕೆ ತಂದರು.
ಪಕ್ಷ ವಿರೋಧಿ ಚಟುವಟಿಕೆ- ಕೋರ್ ಕಮಿಟಿಯಲ್ಲಿ ಚರ್ಚಿಸಿ ವರಿಷ್ಠರಿಗೆ ವರದಿ :
ಇದೇ 7ರಂದು ರಾಜ್ಯ ಕೋರ್ ಕಮಿಟಿ ಸಭೆ ನಡೆಯಲಿದೆ. ಎಸ್.ಟಿ.ಸೋಮಶೇಖರ್ ವಿಚಾರವೂ ಸೇರಿ ಎಲ್ಲ ವಿಚಾರಗಳನ್ನು ಚರ್ಚಿಸಿ ನಿರ್ಧರಿಸುತ್ತೇವೆ. ಪಕ್ಷದಲ್ಲಿ ಯಾರೆಷ್ಟೇ ದೊಡ್ಡ ಮುಖಂಡರಿದ್ದರೂ ಪಕ್ಷವಿರೋಧಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂಬ ಅಪೇಕ್ಷೆ ಹಿರಿಯರದ್ದು, ಡಿ.7ರಂದು ಚರ್ಚಿಸಿ ಹೈಕಮಾಂಡ್ಗೆ ವರದಿ ನೀಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಯತ್ನಾಳ್ ಅವರ ಕುರಿತ ಪ್ರಶ್ನೆಗೆ ಉತ್ತರಿಸಿ, ಹೈಕಮಾಂಡ್ ಗಮನಕ್ಕೆ ಎಲ್ಲವೂ ಬಂದಿದೆ. ನೋಟಿಸನ್ನು ಕೂಡ ಕೊಟ್ಟಿದ್ದಾರೆ. ಕೇಂದ್ರದ ವರಿಷ್ಠರ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಿರಬೇಕಾಗುತ್ತದೆ ಎಂದು ತಿಳಿಸಿದರು.