ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಮುಂದುವರಿಸಲು ಬಿಎಸ್‍ವೈ ಆಪ್ತರ ಬಣ ಒತ್ತಾಯ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಬಿ.ವೈ.ವಿಜಯೇಂದ್ರರನ್ನು ಮುಂದುವರಿಸಬೇಕು ಎಂದು ಪಕ್ಷದ ವರಿಷ್ಠರಲ್ಲಿ ಮನವಿ ಮಾಡಲು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಪ್ತರ ಬಣ ನಿರ್ಧರಿಸಿರುವುದಾಗಿ ತಿಳಿಸಿದೆ.
ಮಂಗಳವಾರ ಇಲ್ಲಿನ ಸದಾಶಿವನಗರದಲ್ಲಿನ ಮಾಜಿ ಶಾಸಕ ಕಟ್ಟಾ ಸುಬ್ರಮಣ್ಯ ನಾಯ್ಡು ನಿವಾಸದಲ್ಲಿ ಯಡಿಯೂರಪ್ಪ ಆಪ್ತರು ಆಂತರಿಕ ಸಭೆ ನಡೆಸಿ ಬಿ.ವೈವಿಜಯೇಂದ್ರರನ್ನು ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯಲ್ಲಿ ಮುಂದುವರಿಸಬೇಕೆಂದು ತೀರ್ಮಾನ ಕೈಗೊಂಡಿದ್ದಾರೆ ಎಂದು ಗೊತ್ತಾಗಿದೆ.
ಈ ಸಭೆಯಲ್ಲಿ ಮಾಜಿ ಸಚಿವರಾದ ಎಂ.ಪಿ.ರೇಣುಕಾಚಾರ್ಯ, ಕಟ್ಟಾ ಸುಬ್ರಮಣ್ಯ ನಾಯ್ಡು, ಬಿ.ಸಿ. ಪಾಟೀಲ್, ಮಾಜಿ ಶಾಸಕರಾದ ಬಸವರಾಜ್ ದಡೆಸಗೂರು, ಬಸವರಾಜ್ ನಾಯ್ಕ್, ಹರತಾಳ್ ಹಾಲಪ್ಪ, ಜೀವರಾಜ್, ಅರುಣ್ ಕುಮಾರ್, ರೂಪಾಲಿ ನಾಯಕ್, ಹರ್ಷವರ್ಧನ್, ವೈ.ಸಂಪಂಗಿ ಸೇರಿದಂತೆ ಹಲವು ಬಿಜೆಪಿ ನಾಯಕರು ಭಾಗಿಯಾಗಿದ್ದರು.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆಗೆ ಸಂಬಂಧಿಸಿದಂತೆ ಶಾಸಕರ ಹಾಗೂ ಸಂಸದರ ಅಭಿಪ್ರಾಯ ಪಡೆಯಲಿರುವ ಹೈಕಮಾಂಡ್‍ಗೆ ವಿಜಯೇಂದ್ರ ಪರ ರಾಜ್ಯಾದ್ಯಂತ ಬೂತ್ ಮಟ್ಟದಲ್ಲಿ ಅಭಿಪ್ರಾಯ ರೂಪಿಸಲು ಮಾಜಿ ಶಾಸಕರ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.