ರಾಜ್ಯ ರಾಜಕೀಯದಲ್ಲಿ ಕ್ಷಿಪ್ರ ಬೆಳವಣಿಗೆ ಖಚಿತ : ಬಿ.ವೈ.ವಿಜಯೇಂದ್ರ

ಬಿ.ವೈ. ವಿಜಯೇಂದ್ರ
ಬೆಂಗಳೂರು : ಮುಂದಿನ ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಿ ಕ್ಷಿಪ್ರ ಬೆಳವಣಿಗೆ ಆಗಲಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಗಾದಿಗೆ ಪೈಪೋಟಿ ನಡೆಯುತ್ತಿದ್ದು, ದಿನೇದಿನೇ ಅದು ದೊಡ್ಡದಾಗುತ್ತಿದೆ. ಸಿದ್ದರಾಮಯ್ಯರ ಪರ, ಡಿ.ಕೆ.ಶಿವಕುಮಾರ್ ಪರ-ವಿರುದ್ಧ ಶಾಸಕರು ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹಾಗೂ ಕಾಂಗ್ರೆಸ್ ಶಾಸಕರು ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುವ ಕುರಿತು ಹೇಳಿಕೆ ನೀಡಿದ್ದಾರೆ. ‘ಅಧಿಕಾರ ಸಿಗದೆ ಇದ್ದಲ್ಲಿ ಅದನ್ನು ಒದ್ದು ಕಿತ್ತುಕೊಳ್ಳಬೇಕೆಂದು’ ಡಿ.ಕೆ.ಶಿವಕುಮಾರ್ಗೆ ಅವರ ಗುರು ಹೇಳಿದ್ದರಂತೆ. ಅದನ್ನು ಕಳೆದ ಬೆಳಗಾವಿ ಅಧಿವೇಶನದಲ್ಲಿ ಶಿವಕುಮಾರ್ ನೆನಪು ಮಾಡಿಕೊಂಡಿದ್ದರು ಎಂದು ವಿಜಯೇಂದ್ರ ಗಮನ ಸೆಳೆದರು.
ಮತ್ತೊಂದೆಡೆ ಮೊನ್ನೆ ನಡೆದ ಅಂತರ್ರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಭಾಷಣ ಮಾಡುತ್ತಾ ಡಿ.ಕೆ.ಶಿವಕುಮಾರ್ ‘ನಟ್ ಮತ್ತು ಬೋಲ್ಟ್’ ಟೈಟ್ ಮಾಡೋದು ಗೊತ್ತು ಎಂದು ಅಹಂನಿಂದ ಕೂಡಿದ ಹೇಳಿಕೆ ಕೊಟ್ಟಿದ್ದರು. ಅದು ಚಿತ್ರರಂಗದ ಬಗ್ಗೆ ನೀಡಿದ್ದ ಹೇಳಿಕೆಯಲ್ಲ, ಯಾರು ತಮ್ಮನ್ನು ಮುಖ್ಯಮಂತ್ರಿ ಆಗಲು ಅವಕಾಶ ನೀಡುತ್ತಿಲ್ಲವೋ ಅವರಿಗೆ ನೀಡಿದ ಎಚ್ಚರಿಕೆಯಂತ್ತಿತ್ತು ಎಂದು ಚರ್ಚೆಗಳು ನಡೆಯುತ್ತಿವೆ ಎಂದು ವಿಜಯೇಂದ್ರ ತಿಳಿಸಿದರು.