ಬಿ.ವೈ.ವಿಜಯೇಂದ್ರ ವಿರುದ್ಧ ಹೋರಾಟ ನಿರಂತರ : ಯತ್ನಾಳ್
"ಕೇಂದ್ರ ಸಮಿತಿಯಿಂದ ಅಧಿಕೃತವಾಗಿ ನೋಟಿಸ್ ಬಂದಿಲ್ಲ, ವಿಜಯೇಂದ್ರ ಕಳುಹಿಸಿರುವ ಸಾಧ್ಯತೆ ಇದೆ"
ಬಸನಗೌಡ ಪಾಟೀಲ್ ಯತ್ನಾಳ್
ಹೊಸದಿಲ್ಲಿ: "ಯಡಿಯೂರಪ್ಪನವರ ಬೆದರಿಕೆಯಿಂದ ವಿಜಯೇಂದ್ರ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಅಲ್ಲದೆ, ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಕೆಲಸ ಮಾಡುತ್ತಿಲ್ಲ. ಅವರ ವಿರುದ್ಧದ ಹೋರಾಟ ನಿರಂತರವಾಗಿರುತ್ತದೆ" ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಸೋಮವಾರ ಹೊಸದಿಲ್ಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ನಮ್ಮಲ್ಲಿ ಹೊಂದಾಣಿಕೆ ರಾಜಕಾರಣ ಇರಬಾರದೆಂದು ಹೈಕಮಾಂಡ್ ನಾಯಕರೇ ಹೇಳಿದ್ದಾರೆ. ಇದು ಜನಪರ ಹೋರಾಟ, ಅವರದ್ದು ಕುಟುಂಬಶಾಹಿ ಹೋರಾಟ. ಅವರದ್ದು ಹೋರಾಟ ಅಲ್ಲ, ಪತ್ರಿಕಾಗೋಷ್ಠಿ ಅಷ್ಟೇ. ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರು ನಮ್ಮ ಜೊತೆ ಇದ್ದಾರೆ" ಎಂದು ಹೇಳಿದರು.
ನೋಟಿಸ್ ಬಂದಿಲ್ಲ :
"ನನಗೆ ಅಧಿಕೃತವಾಗಿ ಕೇಂದ್ರ ಸಮಿತಿಯಿಂದ ನೋಟಿಸ್ ಬಂದಿಲ್ಲ. ಇದುವರೆಗೆ ಮೂರು ನೋಟಿಸ್ ಬಂದಿತ್ತು. ಎರಡು ನೋಟಿಸ್ಗೆ ಉತ್ತರಿಸಿದ್ದೇನೆ. ಮತ್ತೊಂದು ನೋಟಿಸ್ ಫೇಕ್ ಎಂಬ ಅನುಮಾನ ಬಂದಿತ್ತು. ಹೀಗಾಗಿ ಮೂರನೇ ನೋಟಿಸ್ಗೆ ನಾನು ಯಾವುದೇ ಉತ್ತರ ನೀಡಲಿಲ್ಲ. ಬಿ.ವೈ.ವಿಜಯೇಂದ್ರ ಅವರು ನೋಟಿಸ್ ಕಳುಹಿಸಿರುವ ಸಾಧ್ಯತೆ ಇದೆ. ಹೀಗಾಗಿ ಉತ್ತರಿಸಲಿಲ್ಲ. ಇ-ಮೇಲ್ ಅಥವಾ ರಿಜಿಸ್ಟರ್ ಪೋಸ್ಟ್ ಮೂಲಕ ನೋಟಿಸ್ ಬರಬೇಕು. ಪಕ್ಷದಿಂದ ಅಧಿಕೃತವಾಗಿ ನೋಟಿಸ್ ಬಂದ ಮೇಲೆ ಉತ್ತರಿಸುತ್ತೇನೆ" ಎಂದರು.