ಹೆಬ್ಬಾಳದಿಂದ ಸಿಲ್ಕ್ ಬೋರ್ಡ್‌ವರೆಗೆ 18 ಕಿ.ಮೀ. ಸುರಂಗ ರಸ್ತೆ ನಿರ್ಮಾಣಕ್ಕೆ ಸಂಪುಟ ಅಸ್ತು
ಬೆಂಗಳೂರು : ಇಲ್ಲಿನ ಹೆಬ್ಬಾಳ ಸಮೀಪದ ಎಸ್ಟೀಮ್ ಮಾಲ್‍ನಿಂದ ಹೊಸೂರು ರಸ್ತೆಯಲ್ಲಿನ ಸಿಲ್ಕ್ ಬೋರ್ಡ್ ವರೆಗೆ 12,690 ಕೋಟಿ ವೆಚ್ಚದಲ್ಲಿ ಸುಮಾರು 18 ಕಿಮೀ ಉದ್ದದ ಸುರಂಗ ಮಾರ್ಗವನ್ನು ನಿರ್ಮಾಣ ಮಾಡಲು ಸಚಿವ ಸಂಪುಟ ಸಭೆಯಲ್ಲಿ ತಾತ್ವಿಕ ಒಪ್ಪಿಗೆ ನೀಡಲಾಗಿದೆ.
ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ನಡೆದ ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್.ಕೆ.ಪಾಟೀಲ್, ‘12,690 ಕೋಟಿ ಮೊತ್ತದಲ್ಲಿ ಸುರಂಗ ಮಾರ್ಗ ನಿರ್ಮಾಣ ಮಾಡಲು ತಾತ್ವಿಕ ಅನುಮೋದನೆ ನೀಡಲಾಗಿದೆ. ಈ ಸಂಬಂಧಿಸಿದಂತೆ ವಿಸ್ತೃತ ಯೋಜನಾ ವರದಿ(ಡಿಪಿಆರ್)ಆಗಿಲ್ಲ ಎಂದರು.
ಬೆಂಗಳೂರಿನಲ್ಲಿ ಪ್ರವಾಸೋದ್ಯಮ ಸೆಳೆಯುವ ನಿಟ್ಟಿನಲ್ಲಿ ಸ್ಕೈಡೆಕ್ ನಿರ್ಮಾಣಕ್ಕೆ ಸಂಪುಟ ಒಪ್ಪಿಗೆ ನೀಡಿದೆ. ಉದ್ಯಾನ ನಗರಿಯ ಸೌಂದರ್ಯವನ್ನು ಬಾನೆತ್ತರದಲ್ಲಿ ನಿಂತು ನೋಡುವ ಅಪೂರ್ವ ಅವಕಾಶ ಜನರಿಗೆ ಒದಗಿಸಲು ಅವಕಾಶ ನೀಡುವ ಯೋಜನೆ ಇದಾಗಿದೆ. ಸದ್ಯಕ್ಕೆ 500 ಕೋಟಿ ಅಂದಾಜಿನಲ್ಲಿ ನಿರ್ಮಾಣ ಮಾಡಲು ಸಂಪುಟ ಅನುಮತಿ ನೀಡಿದ್ದು, ಸ್ಕೈ ಡಕ್ ನಿರ್ಮಾಣದ ಸ್ಥಳ ನಿಗದಿ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಮಾಹಿತಿ ನೀಡಿದರು.