ಮೂಲಸೌಕರ್ಯ ಯೋಜನೆಗಳಿಗೆ ಖಾಸಗಿ ಸಹಭಾಗಿತ್ವ ಕಾರ್ಯನೀತಿ : ಸಂಪುಟ ಅನುಮೋದನೆ

ಎಚ್.ಕೆ.ಪಾಟೀಲ್
ಬೆಂಗಳೂರು : ರಾಜ್ಯ ಮೂಲಸೌಕರ್ಯ ಯೋಜನೆಗಳಿಗೆ ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಕಾರ್ಯನೀತಿ-2025ಕ್ಕೆ ಸಚಿವ ಸಂಪುಟವು ಅನುಮೋದನೆ ನೀಡಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸುಸ್ಥಿರ ಅಭಿವೃದ್ಧಿಯೊಂದಿಗೆ ಹೆಚ್ಚಿನ ಬೆಳವಣಿಗೆ ಮತ್ತು ಸಮಾನತೆಯನ್ನು ಸಾಧಿಸುವ ಸಾಧನವಾಗಿ ಮೂಲಸೌಕರ್ಯದಲ್ಲಿ ಖಾಸಗಿ ಹೂಡಿಕೆಯನ್ನು ವಿಸ್ತರಿಸಿ ಮತ್ತು ಅಭಿವೃದ್ಧಿಪಡಿಸುವುದು ಮತ್ತು ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಕರ್ನಾಟಕವನ್ನು ಮಾದರಿಯಾಗಿ ಸ್ಥಾಪಿಸುವುದು ಈ ಕಾರ್ಯನೀತಿಯ ಉದ್ದೇಶವಾಗಿದೆ ಎಂದು ಹೇಳಿದರು.
ಕಿರು ಬಂದರುಗಳಲ್ಲಿ ಶುಲ್ಕ ಪರಿಷ್ಕರಣೆ: ರಾಜ್ಯದ ಚಿಕ್ಕ ಬಂದರುಗಳಾದ ಕಾರವಾರ, ಹೊನ್ನಾವರ, ಮಲ್ಪೆ, ಬೇಲೇಕೇರಿ, ಮಂಕಿ, ಪಡುಬಿದ್ರಿ, ಕೇಣಿ, ಭಟ್ಕಳ, ಹಳೇ ಮಂಗಳೂರು, ತದಡಿ, ಕುಂದಾಪುರ, ಪಾವಿನಕುರ್ವೆ ಮತ್ತು ಹಂಗಾರಕಟ್ಟಾಗಳಲ್ಲಿ ವಿಧಿಸಲಾಗುತ್ತಿರುವ ಬಂದರು ಶುಲ್ಕ, ಪೈಲಟೇಜ್ ಮತ್ತು ಟಗ್ ಬಾಡಿಗೆ ಶುಲ್ಕಗಳ ಪರಿಷ್ಕರಣೆ ಹಾಗೂ ಹಾರ್ಬರ್ ಕ್ರಾಫ್ಟ್ ಸರ್ವೆ ಮತ್ತು ನೋಂದಣಿ ಶುಲ್ಕ ಹಾಗೂ ಇನ್ಲ್ಯಾಂಡ್ ವೆಸೆಲ್ಸ್ ನಾವೆಗಳ ಸರ್ವೆ ಮತ್ತು ನೋಂದಣಿ ಶುಲ್ಕಗಳನ್ನು ಪರಿಷ್ಕರಿಸಲು ಸಚಿವ ಸಂಪುಟ ನಿರ್ಧರಿಸಿದೆ ಎಂದು ಅವರು ತಿಳಿಸಿದರು.
ರೈಲ್ವೆ ಕ್ರಾಸಿಂಗ್ ಬದಲು ಮೇಲ್ಸೇತುವೆ: ಹಾಸನ-ಹೊಳೆನರಸೀಪುರ ರೈಲು ಮಾರ್ಗದ ನಡುವಿನ ಕಿ.ಮೀ 1/600-700 ರಲ್ಲಿ ಬರುವ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ:3 ರ ಬದಲಿಗೆ ರಸ್ತೆ ಮೇಲ್ಸೇತುವೆ ಹಾಗೂ ಕೂಡು ರಸ್ತೆ ನಿರ್ಮಾಣ ಕಾಮಗಾರಿಯನ್ನು 83.72 ಕೋಟಿ ರೂ.ಗಳ ಪರಿಷ್ಕೃತ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಚಿತ್ರದುರ್ಗ ಜಿಲ್ಲೆಯಲ್ಲಿ ತರಕಾರಿ, ಹಣ್ಣು-ಹಂಪಲು ಹಾಗೂ ಇತರೆ ದವಸ ಧಾನ್ಯಗಳನ್ನು ಶೇಖರಿಸಲು ಹಿರಿಯೂರು ನಗರದಿಂದ ಸುಮಾರು 3 ಕಿ.ಮೀ ದೂರದಲ್ಲಿ ದಾಸ್ತಾನು ಮಾಡಲು 107 ಎಕರೆ ವಿಸ್ತೀರ್ಣದಲ್ಲಿ ಸ್ಥಾಪಿಸಿರುವ ಅಕ್ಷಯ ಫುಡ್ ಪಾರ್ಕ್ ಸಂಪರ್ಕಿಸಲು 4 ಪಥಗಳ ರಸ್ತೆಯನ್ನು 20 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.
ಸಾರ್ವಜನಿಕ ಉದ್ಯಮಗಳ ವಿಲೀನಕ್ಕೆ ಅನುಮೋದನೆ: ವಾಣಿಜ್ಯ ಚಟುವಟಿಕೆಗಳಿಗೆ ಸ್ಥಾಪಿಸಲಾದ ಮತ್ತು ದೀರ್ಘಕಾಲದವರೆಗೆ ನಿಷ್ಕ್ರೀಯವಾದ ಅಥವಾ ಪುನಶ್ಚೇತನಕ್ಕೆ ಆರ್ಥಿಕವಾಗಿ ಕಾರ್ಯಸಾಧ್ಯವಲ್ಲದ ರಾಜ್ಯ ಸರಕಾರದ ಒಡೆತನದ ಕಂಪನಿಗಳನ್ನು ಸಮಾಪನಗೊಳಿಸಬಹುದು ಅಥವಾ ಮತ್ತೊಂದು ಕಂಪನಿಯೊಂದಿಗೆ ವಿಲೀನಗೊಳಿಸಲು ಸಚಿವ ಸಂಪುಟ ಅನುಮೋದಿಸಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ 125 ಸಾರ್ವಜನಿಕ ವಲಯದ ಉದ್ದಿಮೆಗಳಿದ್ದು, ಅವುಗಳಲ್ಲಿ 34 ಕಂಪನಿಗಳು ನಿಶ್ಚಿತವಾಗಿ ಲಾಭದಲ್ಲಿವೆ. 33 ವಾಣಿಜ್ಯ ಕಂಪನಿಗಳು ನಷ್ಟದಲ್ಲಿವೆ. 32 ಕಂಪನಿಗಳು ಸಾಮಾಜಿಕ ವಲಯದ ಕಂಪನಿಗಳಾಗಿವೆ. 16 ಕಂಪನಿಗಳು ನಿಷ್ಕ್ರೀಯವಾಗಿವೆ ಮತ್ತು ಸ್ಥಗಿತಗೊಂಡಿವೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ಕೃಷಿ ಮಾರುಕಟ್ಟೆಗಳ ಬಳಕೆದಾರರ ಶುಲ್ಕ ಮರುನಿಗದಿ: ರಾಜ್ಯದಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು ಆಕರಿಸುತ್ತಿರುವ ಮಾರುಕಟ್ಟೆ ಶುಲ್ಕ, ಬಳಕೆದಾರರ ಶುಲ್ಕ ದರವನ್ನು ಮರು ನಿಗದಿಪಡಿಸಲು ಸಚಿವ ಸಂಪುಟ ಅನುಮೋದಿಸಿದೆ. ಅದರಂತೆ, ಆವರ್ತ ನಿಧಿಗೆ 10 ಪೈಸೆ, ರಾಜ್ಯ ಕೃಷಿ ಮಾರಾಟ ಮಂಡಳಿಗೆ ವಂತಿಗೆ 5 ಪೈಸೆ, ಪ್ರಾಂಗಣದಲ್ಲಿ ಮೂಲಭೂತ ಸೌಕರ್ಯ, ಪ್ರಾಂಗಣ ನಿರ್ವಹಣೆ ಮತ್ತು ಸಮಿತಿ ಆಡಳಿತ ವೆಚ್ಚ ಮತ್ತು ರೆಮ್ಸ್ ಸಂಸ್ಥೆಗೆ ವಹಿವಾಟು ಶುಲ್ಕ 42 ಪೈಸೆ, ಮಾರುಕಟ್ಟೆ ಅಭಿವೃದ್ಧಿ ನೆರವು ನಿಧಿಗೆ ವಂತಿಗೆ 3 ಪೈಸೆ. ಹೀಗೆ ಒಟ್ಟಾರೆ 60 ಪೈಸೆ ಶುಲ್ಕದರವನ್ನು ಮರು ನಿಗದಿಪಡಿಸಲಾಗಿದೆ ಎಂದು ಅವರು ಹೇಳಿದರು.
ಹೆಸರಘಟ್ಟ ಹುಲ್ಲುಗಾವಲು ಸಂರಕ್ಷಣೆ: ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲೂಕಿನ ಒಟ್ಟು 5678 ಎಕರೆ 32 ಗುಂಟೆ (2298.18 ಹೆಕ್ಟೇರ್) ಪ್ರದೇಶಗಳನ್ನು ವನ್ಯಜೀವಿ (ಸಂರಕ್ಷಣಾ) ಅಧಿನಿಯಮ, 1972ರ ಕಲಂ 36(ಎ) ರನ್ವಯ ‘ಗ್ರೇಟರ್ ಹೆಸರಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು ಪ್ರದೇಶ’ ಎಂದು ಘೋಷಿಸಲು ಸಚಿವ ಸಂಪುಟ ಅನುಮೋದಿಸಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ವಿಶ್ವ ಬ್ಯಾಂಕ್ ನೆರವಿನ ವಿಪತ್ತು ನಿರೋಧಕ ಕಾರ್ಯಕ್ರಮ ಅನುಷ್ಠಾನ: ವಿಶ್ವ ಬ್ಯಾಂಕ್ ನೆರವಿನ ಕರ್ನಾಟಕ ಜಲ ಭದ್ರತೆ ಮತ್ತು ವಿಪತ್ತು ನಿರೋಧಕ ಕಾರ್ಯಕ್ರಮವನ್ನು 5 ಸಾವಿರ ಕೋಟಿ ರೂ.ಗಳ(ವಿಶ್ವಬ್ಯಾಂಕ್ ಸಾಲ-3500 ಕೋಟಿ, ರಾಜ್ಯ ಸರಕಾರ–1500 ಕೋಟಿ) ಅಂದಾಜು ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಸಚಿವ ಸಂಪುಟ ಅನುಮೋದಿಸಿದೆ.
ಎಲ್.ಕೆ.ಅತೀಕ್ ಮರುನೇಮಕ: ‘ಐಎಎಸ್ ಅಧಿಕಾರಿ ಎಲ್.ಕೆ.ಅತೀಕ್ ಅವರನ್ನು ನಿವೃತ್ತಿ ನಂತರ ಮುಖ್ಯಮಂತ್ರಿಯ ಅಪರ ಮುಖ್ಯ ಕಾರ್ಯದರ್ಶಿ ಹುದ್ದೆಯಲ್ಲಿ ಗುತ್ತಿಗೆ ಆಧಾರದಲ್ಲಿ ಮುಂದುವರೆಸಲು ಜ.20ರಂದು ಅಧಿಸೂಚನೆ ಹೊರಡಿಸಿರುವ ಕ್ರಮಕ್ಕೆ ಸಚಿವ ಸಂಪುಟ ಘಟನೋತ್ತರ ಅನುಮೋದನೆ ನೀಡಿದೆ’
-ಎಚ್.ಕೆ.ಪಾಟೀಲ್, ಕಾನೂನು ಸಚಿವ