ಮೈಸೂರು, ಮಂಗಳೂರು, ಹುಬ್ಬಳ್ಳಿಯಲ್ಲಿ ನವೋದ್ಯಮಗಳಿಗೆ 75 ಕೋಟಿ ರೂ. ಕ್ಲಸ್ಟರ್ ಸೀಡ್ ಫಂಡ್ : ಸಚಿವ ಸಂಪುಟ ಅನುಮೋದನೆ

ಬೆಂಗಳೂರು : ಮೈಸೂರು, ಮಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ 75 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ನವೋದ್ಯಮಗಳಿಗೆ ‘ಬಿಯಾಂಡ್ ಬೆಂಗಳೂರು ಕ್ಲಸ್ಟರ್ ಸೀಡ್ ಫಂಡ್ʼ ಸ್ಥಾಪಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ನಿಧಿಯಲ್ಲಿ ರಾಜ್ಯ ಸರಕಾರದ ಕೊಡುಗೆ 2024-25ನೆ ಸಾಲಿನಲ್ಲಿ 10 ಕೋಟಿ ರೂ. ಹಾಗೂ 2025-26ನೆ ಸಾಲಿನಲ್ಲಿ 55 ಕೋಟಿ ರೂ.ಇರಲಿದೆ. ಈ ನಿಧಿಯು ನವೋದ್ಯಮಗಳಿಗೆ ಆರಂಭಿಕ ಹಂತಗಳಲ್ಲಿ ನಿರ್ಣಾಯಕ ಬೆಂಬಲವನ್ನು ನೀಡುವ ಮೂಲಕ ಉದ್ಯಮ ಶೀಲತೆಯನ್ನು ಉತ್ತೇಜಿಸುತ್ತದೆ ಎಂದರು.
2030ರ ವೇಳೆಗೆ ಕನಿಷ್ಟ 10 ಸಾವಿರ ನವೋದ್ಯಮಗಳನ್ನು ಹೊಂದುವ ಗುರಿಯಿದೆ. 2022-23ರ ಕರ್ನಾಟಕ ಆರ್ಥಿಕ ಸಮಿಕ್ಷೆ ಪ್ರಕಾರ ರಾಜ್ಯದ ಶೇ.80ಕ್ಕಿಂತ ಹೆಚ್ಚು ನವೋದ್ಯಮಗಳು ಬೆಂಗಳೂರಿನಲ್ಲಿ ಕೇಂದ್ರೀಕೃತವಾಗಿವೆ. ಬೆಂಗಳೂರು ಹೊರಗಿನ ಅನೇಕ ನವೋದ್ಯಮಗಳು ಪ್ರಾರಂಭಿಕ ಹಂತದ ನಿಧಿಯ ಕೊರತೆ, ಮಾರ್ಗದರ್ಶನಕ್ಕೆ ಸಿಮಿತ ಪ್ರವೇಶ ಮತ್ತು ಅಸರ್ಮಕ ಮೂಲಸೌಕರ್ಯದಂತಹ ಸವಾಲುಗಳನ್ನು ಎದುರಿಸುತ್ತೀವೆ. ಅವುಗಳಿಗೆ ಬೆಂಬಲಿಸಲು ಈ ಉಪಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಬೆಳಗಾವಿ ಜಿಲ್ಲೆಯ ಅಥಣಿ ಮತ್ತು ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕುಗಳಲ್ಲಿ 50 ಹಾಸಿಗೆಗಳ ಸಾಮರ್ಥ್ಯದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ನಿರ್ಮಾಣ ಕಾಮಗಾರಿಯ 37.98 ಕೋಟಿ ರೂ.ಗಳ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಜೊತೆಗೆ, ಹುನಗುಂದದಲ್ಲಿಯೂ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮುರುಗಮಲ್ಲಾ ಗ್ರಾಮದಲ್ಲಿರುವ ಹಝ್ರತ್ ಫಖಿ ಶಾ ವಲಿ ಅಮ್ಮಾಜಾನ್ ಬಾವಾಜಾನ್ ದರ್ಗಾದ ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕಾಮಗಾರಿಗಳನ್ನು 31.99 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.
ಕಲಬುರಗಿ ಜಿಲ್ಲೆಯ ಚಿಂಚೋಳಿಯಲ್ಲಿ ತಾಲೂಕು ಆಡಳಿತ ಕೇಂದ್ರ ಕಟ್ಟಡ ‘ಪ್ರಜಾಸೌಧ’ ನಿರ್ಮಾಣದ 10.91 ಕೋಟಿ ರೂ.ಗಳ ಪರಿಷ್ಕೃತ ಅಂದಾಜಿಗೆ ಹಾಗೂ ಗದಗ ತಾಲೂಕಿನಲ್ಲಿ ‘ಪ್ರಜಾಸೌಧ’ ನಿರ್ಮಾಣ ಕಾಮಗಾರಿಯನ್ನು 16 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಭೂಮಾಪನ ಕಾರ್ಯಕ್ಕಾಗಿ ಆಧುನಿಕ ಸರ್ವೆ ಉಪಕರಣಗಳನ್ನು ಒದಗಿಸುವ ನಿಟ್ಟಿನಲ್ಲಿ 5 ಸಾವಿರ ಜಿಎನ್‍ಎಸ್‍ಎಸ್ ರೋವರ್ಸ್ ಗಳನ್ನು 175 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆಯು ಕಲಬುರಗಿಯಲ್ಲಿ 16 ಕೋಟಿ ರೂ.ವೆಚ್ಚದಲ್ಲಿ ಟೆಂಡರ್ ಮೂಲಕ ಆಯ್ಕೆಯಾಗುವ ಖಾಸಗಿ ಕಂಪನಿಯ ಸಹಯೋಗದೊಂದಿಗೆ ಸಿಎನ್‍ಸಿ ಮಶಿನಿಂಗ್ ಟೆಕ್ನಾಲಜಿ ಕ್ಷೇತ್ರದ ಶ್ರೇಷ್ಠತಾ ಕೇಂದ್ರವನ್ನು ಸ್ಥಾಪಿಸಲು ಅನುಮೋದನೆ ನೀಡಲಾಗಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.
ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಹಳೆಯ ಕಟ್ಟಡವನ್ನು ಕೆಡವಿ ಅದೇ ಜಾಗದಲ್ಲಿ ಹೊಸ ವಸತಿ ಶಾಲಾ ಕಟ್ಟಡವನ್ನು 25 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ನಡೆಸಲಾಗುತ್ತಿರುವ ನಿವೇಶನ ಲಭ್ಯವಿರುವ 61 ವಸತಿ ಶಾಲೆಗಳಿಗೆ ವಸತಿ ಶಾಲಾ ಸಂಕೀರ್ಣಗಳ ನಿರ್ಮಾಣದ ಕಾಮಗಾರಿಯನ್ನು 1292.50 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಧಾರವಾಡ ಜಿಲ್ಲಾ ಕಾಂಗ್ರೆಸ್ ಸಮಿತಿಗೆ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯ ನಿರ್ಮಿಸಲು ಹುಬ್ಬಳ್ಳಿಯಲ್ಲಿ ಸಿಟಿಎಸ್ ನಂ.4553/ಬಿ ರಲ್ಲಿನ ಪಾಲಿಕೆಗೆ ಸೇರಿದ 2988.29 ಚ.ಮೀ. ವಿಸ್ತೀರ್ಣದ ಜಾಗವನ್ನು ಪ್ರಸಕ್ತ ಮಾರ್ಗಸೂಚಿ ದರ ಶೇ.5ರಷ್ಟು ದರ ವಿಧಿಸಿ ಮಂಜೂರು ಮಾಡಲು ನಿರ್ಧರಿಸಲಾಗಿದೆ. ‘ಕರ್ನಾಟಕ ಕೈಗಾರಿಕಾ ನೀತಿ 2025-30’ಕ್ಕೆ ಸಂಬಂಧಿಸಿದಂತೆ ಫೆ.8ರಂದು ಹಾಗೂ ‘ಕರ್ನಾಟಕ ಕ್ಲೀನ್ ಮೊಬಿಲಿಟಿ ನೀತಿ 2025-30’ಕ್ಕೆ ಸಂಬಂಧಿಸಿದಂತೆ ಫೆ.11ರಂದು ಸರಕಾರಿ ಆದೇಶ ಹೊರಡಿಸಿರುವ ಕ್ರಮಕ್ಕೆ ಘಟನೋತ್ತರ ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿದರು.
ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ-ಬೆಂಗಳೂರು(ಐಐಐಟಿ-ಬಿ)ಸಂಸ್ಥೆಯ ಮೂಲಸೌಕರ್ಯ ವಿಸ್ತರಣಾ ಯೋಜನೆಯನ್ನು 817 ಕೋಟಿ ರೂ. ಹಾಗೂ ಸೆಮಿಕಂಡಕ್ಟರ್ ಫ್ಯೂಚರ್ ಆಕ್ಸಿಲರೇಟರ್ ಲ್ಯಾಬ್ 2.0 ಅನ್ನು 79.80 ಕೊಟಿ ರೂ.ಗಳ ಅಂದಾಜು ಮೊತ್ತದಲ್ಲಿ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ವಿಜಯಪುರ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ವಿಜಯಪುರ ಕಿರು ತಾರಾಲಯ ಸ್ಥಾಪನೆಗೆ 12.89 ಕೋಟಿ ರೂ. ಹಾಗೂ ಹಾವೇರಿ ಜಿಲ್ಲೆಯ ಶಿಗ್ಗಾಂವಿ ಪಟ್ಟಣದ ಹಳೆ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಸರಕಾರಿ ಕಚೇರಿಗಳ ಸಂಕೀರ್ಣ ನಿರ್ಮಾಣ ಕಾಮಗಾರಿಯ 12.48 ಕೋಟಿ ರೂ.ಗಳ ಪರಿಷ್ಕೃತ ಅಂದಾಜಿಗೆ ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿದರು.
ಕಲ್ಯಾಣ ಕರ್ನಾಟಕ ಪ್ರದೇಶದ 306 ಪ್ರೌಢ ಶಾಲೆಗಳ ವಿದ್ಯಾರ್ಥಿಗಳಿಗೆ ವೃತ್ತಿ ಕೌಶಲಗಳನ್ನು ಬೋಧಿಸಲು ಅವಶ್ಯಕವಿರುವ ವೃತ್ತಿ ಶಿಕ್ಷಣ ಸಂಯೋಜಕರು, ತರಬೇತುದಾರರನ್ನು 15.30 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ 3 ವರ್ಷಗಳ ಅವಧಿಗೆ ಹೊರಗುತ್ತಿಗೆ ಆಧಾರದ ಮೇಲೆ ಪಡೆಯಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಬಾಣಾವರ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಿಎಲ್‍ಆರ್, ಜಾನ್ಸನ್ ಮಾರ್ಕೆಟ್, ದೊಮ್ಮಲೂರು, ಮಚಲಿಬೆಟ್ಟ, ಹಲಸೂರು ಸೇವಾ ಠಾಣೆಗಳ ಪ್ರದೇಶವಾರು ನೀರು ಸರಬರಾಜು ವ್ಯವಸ್ಥೆಗಳ ಆಧುನೀಕರಣ ಮತ್ತು ಮರು ರೂಪಿಸುವ 199 ಕೋಟಿ ರೂ.ಗಳ ಅಂದಾಜು ಮೊತ್ತದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ಎಂದು ಅವರು ತಿಳಿಸಿದರು.
ರಾಜ್ಯ ಲೋಕಾಯುಕ್ತ ಸಂಸ್ಥೆಯ 2023-24ನೇ ಸಾಲಿನ 38ನೇ ಸಂಚಿತ ವಾರ್ಷಿಕ ವರದಿಯನ್ನು ವಿವರಣಾತ್ಮಕ ಜ್ಞಾಪನದೊಂದಿಗೆ ವಿಧಾನಮಂಡಲದ ಉಭಯ ಸದನಗಳಲ್ಲಿ ಮಂಡಿಸಲು ರಾಜ್ಯಪಾಲರಿಗೆ ಸಲ್ಲಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.
ಸರಕಾರದ ಹಲವು ಇಲಾಖೆಗಳಲ್ಲಿನ ಸಿವಿಲ್ ಕಾಮಗಾರಿಗಳ ಹಲವಾರು ಅಂದಾಜುಗಳ ಅಧಿಕ ಹೆಚ್ಚುವರಿಗಳಿಂದ ಪರಿಷ್ಕೃತಗೊಳ್ಳುತ್ತಿರುವ ಕುರಿತು ಅಧ್ಯಯನಕ್ಕಾಗಿ ನಿವೃತ್ತ ಪ್ರಧಾನ ಅಭಿಯಂತರ ಬಿ.ಗುರುಪ್ರಸಾದ್ ಅಧ್ಯಕ್ಷತೆಯಲ್ಲಿ ರಚಿಸಲಾದ ‘ಕಾಮಗಾರಿ ಅಂದಾಜುಗಳ ತಯಾರಿಕಾ ಅಧ್ಯಯನ ಸಮಿತಿ’ಯು ಮಾಡಿರುವ ಶಿಫಾರಸ್ಸುಗಳನ್ನು ಪರಿಶೀಲಿಸಲು ಡಿಸಿಎಂ ಅಧ್ಯಕ್ಷತೆಯಲ್ಲಿ ಲೋಕೋಪಯೋಗಿ, ಜಲಸಂಪನ್ಮೂಲ, ಗ್ರಾಮೀಣಾಭಿವೃದ್ಧಿ ಸಚಿವರು ಹಾಗೂ ಕಾರ್ಯದರ್ಶಿಗಳು ಸಭೆ ಸೇರಿ ಚರ್ಚಿಸಿ, ಮುಂದಿನ ಸಚಿವ ಸಂಪುಟಕ್ಕೆ ವರದಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.
ಮಾ.3ರಿಂದ ವಿಧಾನಮಂಡಲದ ಉಭಯ ಸದನಗಳ ಅಧಿವೇಶನವನ್ನು ಕರೆಯುವ ಸಂಬಂಧ ಹೊರಡಿರುವ ಆದೇಶಕ್ಕೆ ಸಚಿವ ಸಂಪುಟ ಘಟನೋತ್ತರ ಅನುಮೋದನೆ ನೀಡಿದೆ.