ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಸಚಿವ ಸಂಪುಟ ಪುನರ್ ರಚನೆ ಆಗಲ್ಲ : ಸಿಎಂ ಸಿದ್ದರಾಮಯ್ಯ
ಬೆಂಗಳೂರು : ಲೋಕಸಭಾ ಚುನಾವಣಾ ಫಲಿತಾಂಶ ಏನೇ ಬರಲಿ, ಯಾವುದೇ ಕಾರಣಕ್ಕೂ ಸಚಿವ ಸಂಪುಟ ಪುನರ್ ರಚನೆ ಆಗಲ್ಲ. ಒಂದು ವೇಳೆ ಹೈಕಮಾಂಡ್ ಏನಾದರೂ ಬದಲಾವಣೆ ಬಯಸಿದರೆ, ಕೊಂಚ ಮಟ್ಟಿಗೆ ಆಗಬಹುದು. ಅವರ ಮಾತಿನಂತೆ ಪಕ್ಷ ನಡೆಯಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರಕ್ಕೆ ಒಂದು ವರ್ಷ ತುಂಬಿರುವ ಹಿನ್ನೆಲೆ ನಗರದಲ್ಲಿಂದು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, "ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಕನಿಷ್ಠ 15ರಿಂದ 20ಸ್ಥಾನಗಳನ್ನು ಗೆಲ್ಲಲಿದೆ. ನಾನು ಬಿಜೆಪಿ ಹಾಗೂ ಬಿ.ಎಸ್.ಯಡಿಯೂರಪ್ಪ ಅವರಂತೆ 28ಕ್ಕೆ 28 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಹೇಳಲ್ಲ. ನನಗೆ ಗೊತ್ತಿರುವ ಮಾಹಿತಿ ಪ್ರಕಾರ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವೂ 15ರಿಂದ 20 ಸ್ಥಾನಗಳನ್ನು ಗೆಲ್ಲಲಿದೆ ಎಂದು ನುಡಿದರು.
ಬಜೆಟ್ ನಲ್ಲಿ ಹೇಳಿದ್ದಕ್ಕಿಂತ ಹೆಚ್ಚು ಖರ್ಚು ಮಾಡಿದ್ದೇವೆ :
"ವಿಜಯೇಂದ್ರ, ಆರ್.ಅಶೋಕ್ ಗೆ ಆರ್ಥಿಕತೆ ಅರ್ಥ ಆಗಲ್ಲ. ಹೀಗಾಗಿ ಖಜಾನೆ ಖಾಲಿ ಆಗಿದೆ ಎಂದು ಪರಮ ಸುಳ್ಳು ಹೇಳುತ್ತಿದ್ದಾರೆ. ನಾವು ಗ್ಯಾರಂಟಿಯೇತರ ಅಭಿವೃದ್ಧಿ ಕಾರ್ಯಗಳಿಗೆ 54374 ಕೋಟಿ ಖರ್ಚು ಮಾಡುವುದಾಗಿ ಬಜೆಟ್ ನಲ್ಲಿ ಹೇಳಿದ್ದೆವು. ಆದರೆ 56274 ಕೋಟಿ ಖರ್ಚು ಮಾಡಿದೆವು. ಅಂದರೆ ಬಜೆಟ್ ನಲ್ಲಿ ಹೇಳಿದ್ದಕ್ಕಿಂತ ಹೆಚ್ಚು ಖರ್ಚು ಮಾಡಿದ್ದೇವೆ" ಎಂದು ಅಂಕಿ ಅಂಶಗಳ ಸಮೇತ ವಿವರಿಸಿದರು.
ನೀರಾವರಿಗೆ 16360 ಕೋಟಿ ಖರ್ಚು ಮಾಡುವುದಾಗಿ ಬಜೆಟ್ ನಲ್ಲಿ ಹೇಳಿದ್ದೆವು. ಆದರೆ 18198 ಕೋಟಿ ಖರ್ಚು ಮಾಡಿದ್ದೇವೆ. ಲೋಕೋಪಯೋಗಿ ಇಲಾಖೆಗೂ 9661 ಕೋಟಿ ಖರ್ಚು ಮಾಡಿದ್ದೇವೆ. ಬಿಜೆಪಿಯವರ ಹೇಳಿಕೆಯಂತೆ ಖಜಾನೆ ಖಾಲಿ ಆಗಿದ್ದರೆ ಇಷ್ಟೆಲ್ಲಾ ಖರ್ಚು ಮಾಡಲು ಸಾಧ್ಯವಿತ್ತೇ? ಎಂದು ಪ್ರಶ್ನಿಸಿದರು.
ಮೋದಿ ಹೇಳುತ್ತಿರುವುದು ಅಪ್ಪಟ ಸುಳ್ಳು :
ಹಿಂದುಳಿದವರ ಮೀಸಲಾತಿ ಕಿತ್ತು ಮುಸ್ಲಿಮರಿಗೆ ಕೊಡುತ್ತಾರೆ ಎಂದು ಪ್ರಧಾನಿ ಮೋದಿ ಸುಳ್ಳು ಹೇಳುತ್ತಿದ್ದಾರೆ. ಇದು ಅಪ್ಪಟ ಸುಳ್ಳು. ಚಿನ್ನಪ್ಪರೆಡ್ಡಿ ಆಯೋಗದ ವರದಿಯಂತೆ 30 ವರ್ಷದಿಂದ ರಾಜ್ಯದಲ್ಲಿ ಮುಸ್ಲಿಂ ಮೀಸಲಾತಿ ಜಾರಿಯಲ್ಲಿದೆ. ಬೊಮ್ಮಾಯಿ ಸರ್ಕಾರ ಕೂಡ ಸುಪ್ರೀಂಕೋರ್ಟ್ ನಲ್ಲಿ ಅಫಿಡವಿಟ್ ಸಲ್ಲಿಸಿ ಮುಸ್ಲಿಮರ ಮೀಸಲಾತಿ ರದ್ದು ಮಾಡುವುದಿಲ್ಲ ಎಂದು ಒಪ್ಪಿಕೊಂಡಿದೆ. ಆದರೂ ಮೋದಿ ಭಾಷಣಗಳಲ್ಲಿ ಸುಳ್ಳು ಹೇಳುತ್ತಾ ತಿರುಗುತ್ತಿದ್ದಾರೆ. ನಾವು ಯಾರ ಮೀಸಲಾತಿಯನ್ನೂ ಕಿತ್ತುಕೊಂಡಿಲ್ಲ. ಹೀಗಾಗಿ ಮೋದಿ ಹೇಳುತ್ತಿರುವುದು ಅಪ್ಪಟ ಸುಳ್ಳು ಎಂದರು.