ಜಾತಿ, ಧರ್ಮದ ಹೆಸರಲ್ಲಿ ಜನರನ್ನು ದ್ವೇಷಿಸುವವರು ದೇಶಭಕ್ತರಾಗಲು ಸಾಧ್ಯವೇ: ಸಿಎಂ ಸಿದ್ದರಾಮಯ್ಯ ಪ್ರಶ್ನೆ
ಬೆಳಗಾವಿ: ದೇಶಭಕ್ತಿ ಎಂದರೆ ದೇಶದ ಜನರನ್ನು ಪ್ರೀತಿಸುವುದು. ಜಾತಿ-ಧರ್ಮದ ಹೆಸರಲ್ಲಿ ದೇಶದ ಜನರನ್ನೆ ದ್ವೇಷಿಸುವವರು ದೇಶಭಕ್ತರಾಗಿರಲು ಸಾಧ್ಯವೇ ಇಲ್ಲ. ಶರಣಶ್ರೇಷ್ಠ ಬಸವಣ್ಣನವರು, ಸಂವಿಧಾನ ರಚಿಸಿದ ಅಂಬೇಡ್ಕರ್ ಅವರು ಕೂಡ ಜಾತಿ ತಾರತಮ್ಯ ಇಲ್ಲದ ಮನುಷ್ಯ ಪ್ರೇಮವನ್ನು ಸಾರಿದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಬುಧವಾರ ಬೆಳಗಾವಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬ್ರಿಟೀಷರ ವಿರುದ್ಧ ಹೋರಾಡಿ ಈ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದು ಮಹಾತ್ಮ ಗಾಂಧೀಜಿ ನೇತೃತ್ವದ ಕಾಂಗ್ರೆಸ್. ಆದರೆ ಇಂದು ದೇಶಭಕ್ತರಂತೆ ಬಿಂಬಿಸಿಕೊಳ್ಳುತ್ತಿರುವವರು ಬ್ರಿಟೀಷರ ವಿರುದ್ಧ ಏಕೆ ಹೋರಾಡಲಿಲ್ಲ. ಮನುಷ್ಯ ದ್ವೇಷ ಹರಡಿ, ಮಸೀದಿ ದ್ವಂಸ ಮಾಡಲು ಕರೆಕೊಟ್ಟ ಮೂರ್ಖರು ಈಗಲೂ ಇದ್ದಾರೆ. ಆ ಮೂರ್ಖರಿಗೆ ಚಪ್ಪಾಳೆ ತಟ್ಟಬೇಡಿ. ರಾಯಣ್ಣನ ತ್ಯಾಗ ಬಲಿದಾನಕ್ಕೆ ಚಪ್ಪಾಳೆ ತಟ್ಟೋಣ ಎಂದು ಅವರು ಕರೆ ನೀಡಿದರು.
ರಾಯಣ್ಣನ ಹುಟ್ಟೂರು ಸಂಗೊಳ್ಳಿ ಮತ್ತು ನೇಣುಗಂಬಕ್ಕೇರಿದ ಖಾನಾಪುರ ತಾಲೂಕಿನ ನಂದಗಡದ ಸಮಗ್ರ ಅಭಿವೃದ್ಧಿಗೆ ಸರಕಾರ ಬದ್ಧವಿದ್ದು, ಮುಂಬರುವ ದಿನಗಳಲ್ಲಿ ಹೆಚ್ಚಿನ ಅನುದಾನ ನೀಡಲಾಗುವುದು. ರಾಯಣ್ಣನ ಹೆಸರು ಚಿರಸ್ಥಾಯಿಯಾಗಿಸಲು ಸಂಗೊಳ್ಳಿ ಮತ್ತು ನಂದಗಡ ಅಭಿವೃದ್ಧಿಗಾಗಿ 2016-17ರಲ್ಲಿ ಪ್ರಾಧಿಕಾರ ರಚನೆ ಮಾಡಲಾಯಿತು ಎಂದು ಅವರು ಹೇಳಿದರು.
ಈ ಪ್ರಾಧಿಕಾರಕ್ಕೆ ನೂರು ಎಕರೆ ಜಮೀನು ನೀಡಲಾಯಿತು. ಅಪ್ಪಟ ದೇಶಭಕ್ತ ರಾಯಣ್ಣ, ಯುವಕರಿಗೆ ಸ್ಫೂರ್ತಿಯಾಗಬೇಕು ಎಂಬ ಕಾರಣಕ್ಕ 267 ಕೋಟಿ ರೂ.ವೆಚ್ಚದಲ್ಲಿ ಸೈನಿಕ ಶಾಲೆ, ಶಿಲ್ಪವನ ನಿರ್ಮಿಸಲಾಗಿದೆ. ಬಾಲಕಿಯರು ಸೇರಿದಂತೆ 230 ವಿದ್ಯಾರ್ಥಿಗಳು ಸೈನಿಕ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ದೇಶಪ್ರೇಮ ಬೆಳೆಸಲು ಈ ಶಾಲೆ ಪ್ರೇರಣೆಯಾಗಿದೆ ಎಂದು ಅವರು ಹೇಳಿದರು.
ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿರುವುದು ಮಹಾತ್ಮ ಗಾಂಧೀಜಿ ನೇತೃತ್ವದ ಕಾಂಗ್ರೆಸ್ ಎಂಬುದನ್ನು ಮರೆಯುವಂತಿಲ್ಲ. ಸುರಪುರದ ವೆಂಕಟಪ್ಪನಾಯಕ, ಹಲಗಲಿ ಬೇಡರು, ಟಿಪ್ಪು ಸುಲ್ತಾನ್, ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಹೀಗೆ ಅನೇಕ ಜನರು ಬ್ರಿಟೀಷರ ವಿರುದ್ಧ ಹೋರಾಡಿದವರು. ಇವರ ದೇಶಪ್ರೇಮ ಸ್ಮರಣೀಯವಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಬ್ರಿಟೀಷರು-ಫ್ರೆಂಚರು-ಮೊಘಲರು ನಮ್ಮ ದೇಶ ಆಳಿದ್ದು ನಮ್ಮ ನಮ್ಮನ್ನೇ ಒಡೆದು ಆಳುವ ನೀತಿಯಿಂದ ಮಾತ್ರ. ಬ್ರಿಟಿಷರ ವಿರುದ್ಧ ವಿರೋಚಿತವಾಗಿ ಹೋರಾಡಿದ ಸಂಗೊಳ್ಳಿ ರಾಯಣ್ಣನನ್ನು ಬ್ರಿಟಿಷರಿಗೆ ಮೋಸದಿಂದ ಹಿಡಿದು ಕೊಟ್ಟವರು ಕೂಡ ನಮ್ಮವರೇ. ರಾಯಣ್ಣ ದೇಶಭಕ್ತಿಗೆ ಮಾದರಿಯಾದರೆ, ರಾಯಣ್ಣನನ್ನು ಮೋಸದಿಂದ ಬ್ರಿಟಿಷರಿಗೆ ಹಿಡಿದುಕೊಟ್ಟವರು ದೇಶದ್ರೋಹಿಗಳು ಎಂದು ಅವರು ಹೇಳಿದರು.
ಶಾಸಕ ಮಹಾಂತೇಶ್ ಕೌಜಲಗಿ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಶ್ರೀ ಗುರುಲಿಂಗ ಶಿವಾಚಾರ್ಯ ಸ್ವಾಮಿ, ಶ್ರೀ ಮಡಿವಾಳ ರಾಜಯೋಗೀಂದ್ರ ಸ್ವಾಮಿ ಮತ್ತು ಶ್ರೀ ನಿರಂಜನಾನಂದಪುರಿ ಸ್ವಾಮಿ, ಸಚಿವರಾದ ಸತೀಶ್ ಜಾರಕಿಹೊಳಿ, ಬೈರತಿ ಸುರೇಶ್, ಶಿವರಾಜ್ ತಂಗಡಗಿ, ಶಾಸಕರಾದ ಎಚ್.ವೈ.ಮೇಟಿ, ಅಶೋಕ್ ಪಟ್ಟಣ್, ಪ್ರಕಾಶ್ ಹುಕ್ಕೇರಿ, ಮಾಜಿ ಸಚಿವ ಎಚ್.ಎಂ.ರೇವಣ್ಣ, ಮಾಜಿ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.