‘ಮತಾಂತರ ನಿಷೇಧ ಕಾಯ್ದೆ’ಯಲ್ಲಿ ಸಂವಿಧಾನ ವಿರೋಧಿ ತಿದ್ದುಪಡಿ ರದ್ದು: ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಜೂ.30: ಹಿಂದಿನ ಬಿಜೆಪಿ ಸರಕಾರ ಜಾರಿಗೆ ತಂದಿದ್ದ ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಕಾಯ್ದೆ’(ಮತಾಂತರ ನಿಷೇಧ)ಗೆ ತರಲಾಗಿದ್ದ ಸಂವಿಧಾನ ವಿರೋಧಿ ತಿದ್ದುಪಡಿಯನ್ನು ರದ್ದುಮಾಡಲು ನಿರ್ಧರಿಸಲಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಶುಕ್ರವಾರ ಗೃಹ ಕಚೇರಿ ಕೃಷ್ಣಾದಲ್ಲಿ ಇಂಡಿಯನ್ ಕ್ರಿಶ್ಚಿಯನ್ ಯೂನಿಟಿ ಫೋರಂ ವತಿಯಿಂದ ಕ್ರೈಸ್ತ ಪಾದ್ರಿಗಳು ಮತ್ತು ಕ್ರೈಸ್ತ ಸಂಘಟನೆಗಳ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ವಿವಿಧ ವಿಷಯಗಳ ಕುರಿತು ಚರ್ಚಿಸಿದರು.
ಈ ವೇಳೆ ಮಾತನಾಡಿದ ಸಿದ್ದರಾಮಯ್ಯ ಅವರು, ‘ರಾಜ್ಯದಲ್ಲಿ ಕ್ರೈಸ್ತರು ಸೇರಿದಂತೆ ಎಲ್ಲ ಜನ ಸಮುದಾಯಗಳ ಸಂವಿಧಾನ ಬದ್ದ ಹಕ್ಕುಗಳನ್ನು ರಕ್ಷಿಸಿ ಅಗತ್ಯ ರಕ್ಷಣೆ ನೀಡಲಾಗುವುದು. ಮತಾಂತರ ನಿμÉೀಧ ಕಾಯ್ದೆಗೆ ತರಲಾಗಿದ್ದ ಸಂವಿಧಾನ ವಿರೋಧಿ ತಿದ್ದುಪಡಿಯನ್ನು ರದ್ದುಮಾಡಲು ನಿರ್ಧರಿಸಲಾಗಿದೆ ಎಂದು ಉಲ್ಲೇಖಿಸಿದರು.
ಇನ್ನೂ, ಮತಾಂತರ ನಿಷೇಧ ಕಾಯ್ದೆಯಡಿ ಪಾದ್ರಿಗಳ ಮೇಲೆ ದಾಖಲಾಗಿರುವ ಎಲ್ಲ ಸುಳ್ಳು ಪ್ರಕರಣಗಳ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಜತೆಗೆ, ಮುಂದಿನ ಆಯವ್ಯಯದಲ್ಲಿ ಸಮುದಾಯದ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ಒದಗಿಸಲಾಗುವುದು ಎಂದು ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು, ನಸೀರ್ ಅಹ್ಮದ್, ಇಂಡಿಯನ್ ಕ್ರಿಶ್ಚಿಯನ್ ಯೂನಿಟಿ ಫೋರಂ ಅಂಥೋನಿ ವಿಕ್ರಂ, ಡಾ.ಮನೋಹರ್ ಚಂದ್ರಪ್ರಸಾದ್, ಫಾ.ಮಹಿಮಾದಾಸ್, ವಕೀಲರಾದ ಜಾನ್ ಪೀಟರ್, ಮನೋರಂಜಿನಿ, ವೆಂಕಟೇಶ್, ಜೋಸೆಫ್ ಮಹದೇವ್ ಸೇರಿದಂತೆ ಪ್ರಮುಖರಿದ್ದರು.