ವಿರಾಟ್ ಕೊಹ್ಲಿ ಮಾಲಕತ್ವದ ಪಬ್ ವಿರುದ್ಧ ಪ್ರಕರಣ ದಾಖಲಿಸಿದ ಬೆಂಗಳೂರು ಪೊಲೀಸರು
Photo:X
ಬೆಂಗಳೂರು: ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿ ನಿಗದಿತ ಅವಧಿ ಮೀರಿ ಕಾರ್ಯಾಚರಣೆ ನಡೆಸುತ್ತಿದ್ದ ವಿರಾಟ್ ಕೊಹ್ಲಿ ಮಾಲಕತ್ವದ ಒನ್8 ಕಮ್ಯೂನ್ ಪಬ್ ಸೇರಿದಂತೆ ಹಲವು ಮದ್ಯದಂಗಡಿಗಳ ವಿರುದ್ಧ ಬೆಂಗಳೂರು ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಕೇಂದ್ರ ವಲಯದ ಉಪ ಪೊಲೀಸ್ ಆಯುಕ್ತರ ಪ್ರಕಾರ, ಸದರಿ ಪಬ್ಗಳು ರಾತ್ರಿ 1.30ರವರೆಗೆ ಕಾರ್ಯಾಚರಣೆ ನಡೆಸುತ್ತಿದ್ದವು. ಈ ಪಬ್ಗಳಿಗೆ ತಮ್ಮ ಕಾರ್ಯಾಚರಣೆ ನಡೆಸಲು ರಾತ್ರಿ 1 ಗಂಟೆಯವರೆಗೆ ಮಾತ್ರ ಅನುಮತಿ ನೀಡಲಾಗಿತ್ತು ಎನ್ನಲಾಗಿದೆ.
ಮಹಾತ್ಮ ಗಾಂಧಿ ರಸ್ತೆಯಲ್ಲಿ ತಡ ರಾತ್ರಿವರೆಗೆ ಅಬ್ಬರದ ಸಂಗೀತ ಹಾಕಲಾಗಿರುತ್ತದೆ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ನಿಯಮಗಳನ್ನು ಉಲ್ಲಂಘಿಸಿದ ಆರೋಪದಡಿ ಪ್ರಕರಣ ದಾಖಲಾಗಿರುವ ಮದ್ಯದಂಗಡಿಗಳ ಪೈಕಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಇರುವ ಒನ್8 ಕಮ್ಯೂನ್ ಪಬ್ ಕೂಡಾ ಸೇರಿದೆ.
ವಿರಾಟ್ ಕೊಹ್ಲಿ ಮಾಲಕತ್ವದ ಒನ್8 ಕಮ್ಯೂನ್ ಪಬ್ ಶಾಖೆಗಳು ದಿಲ್ಲಿ, ಮುಂಬೈ, ಪುಣೆ ಹಾಗೂ ಕೋಲ್ಕತ್ತಾದಂತಹ ಮಹಾನಗರಗಳಲ್ಲಿವೆ. ಬೆಂಗಳೂರು ಶಾಖೆಯನ್ನು ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ಪ್ರಾರಂಭಿಸಲಾಗಿತ್ತು. ಈ ಶಾಖೆಯು ರತ್ನಂ ವಾಣಿಜ್ಯ ಸಂಕೀರ್ಣದ ಆರನೆಯ ಮಹಡಿಯಲ್ಲಿದೆ.