ವೈದ್ಯಕೀಯ ಸಿಬ್ಬಂದಿ ಮೇಲಿನ ಹಲ್ಲೆ ಪ್ರಕರಣ | ವರದಿ ನೀಡಲು ಕಾರ್ಯಪಡೆ ರಚನೆ : ಡಾ.ಶಾಲಿನಿ ರಜನೀಶ್
ಶಾಲಿನಿ ರಜನೀಶ್
ಬೆಂಗಳೂರು : ವೈದ್ಯರು ಹಾಗೂ ವೈದ್ಯೇತರ ಸಿಬ್ಬಂದಿಗಳ ಸುರಕ್ಷತೆ ಮತ್ತು ಹಲ್ಲೆ ಪ್ರಕರಣಗಳ ಸಂಬಂಧ ಜಿಲ್ಲಾ ಮಟ್ಟದಲ್ಲಿ ಕಾರ್ಯಪಡೆಯನ್ನು ರಚಿಸಲಾಗಿದ್ದು, ತ್ವರಿತವಾಗಿ ಕ್ರಮ ವಹಿಸಿ ಸರಕಾರಕ್ಕೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ತಿಳಿಸಿದ್ದಾರೆ.
ಮಂಗಳವಾರ ನಗರದಲ್ಲಿ ನಡೆದ ರಾಜ್ಯ ಕಾರ್ಯಪಡೆ ಸಮಿತಿಯ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಬಗ್ಗೆ ಮಾಧ್ಯಮ ಪ್ರಕಟನೆ ನೀಡಿರುವ ಅವರು, ಜಿಲ್ಲಾ ಕಾರ್ಯಪಡೆಯು ಕಾಲಕಾಲಕ್ಕೆ ಸಭೆಯನ್ನು ನಡೆಸಿ ಜಿಲ್ಲೆಯಲ್ಲಿ ಆಗುವಂತಹ ಪ್ರಕರಣಗಳಿಗೆ ತ್ವರಿತವಾಗಿ ಕ್ರಮ ಕೈಗೊಂಡು ಸರಕಾರಕ್ಕೆ ವರದಿಯನ್ನು ನೀಡುವಂತೆ ಸೂಚಿಸಲಾಗಿದೆ ಎಂದಿದ್ದಾರೆ.
ಆಸ್ಪತ್ರೆಗಳಲ್ಲಿ ಭದ್ರತಾ ಸಿಬ್ಬಂದಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಿಸಿಕೊಳ್ಳಬೇಕು. ವೈದ್ಯರಿಗೆ ಹಾಗೂ ವೈದ್ಯೇತರ ಸಿಬ್ಬಂದಿಗಳಿಗೆ ವೃತ್ತಿಪರ ತರಬೇತಿಯಲ್ಲಿ ರೋಗಿ ಮತ್ತು ರೋಗಿಯ ಸಂಬಂಧಿಕರಿಗೆ ಸಮಾಲೋಚನೆ ನೀಡುವ ಬಗ್ಗೆ ಸೂಕ್ತ ಕ್ರಮವಹಿಸಬೇಕು. ಕಾನೂನು ಮತ್ತು ವ್ಯವಸ್ಥೆ ಸುಭದ್ರಗೊಳಿಸಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಡಾ.ಶಾಲಿನಿ ರಜನೀಶ್ ಹೇಳಿದ್ದಾರೆ.
ಲೈಂಗಿಕ ದೌರ್ಜನ್ಯ ತಡೆಗಟ್ಟುವ ಬಗ್ಗೆ ಕ್ರಮ ಕೈಗೊಳ್ಳುವ ಕುರಿತು ಚರ್ಚಿಸಲಾಯಿತು. ಆಸ್ಪತ್ರೆಗಳಲ್ಲಿ ತುರ್ತು ಎಚ್ಚರಿಕೆಯ ಘಂಟೆಯನ್ನು ಅಳವಡಿಸುವ ಬಗ್ಗೆ ತಿಳಿಸಲಾಯಿತು. ಎಲ್ಲ ಆಸ್ಪತ್ರೆಗಳ ಆವರಣದಲ್ಲಿ ಪೊಲೀಸ್ ಚೌಕಿ ಹಾಗೂ ಪೊಲೀಸ್ ಗಸ್ತು ಕಡ್ಡಾಯಗೊಳಿಸುವುದರ ಬಗ್ಗೆ ಗೃಹ ಇಲಾಖೆಯು ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ನಿರ್ಣಯಿಸಲಾಯಿತು ಎಂದು ಡಾ.ಶಾಲಿನಿ ರಜನೀಶ್ ತಿಳಿಸಿದ್ದಾರೆ.
ರಾಜ್ಯದ ಎಲ್ಲ ಆಸ್ಪತ್ರೆಯ ಆವರಣಗಳಲ್ಲಿ ಕಡ್ಡಾಯವಾಗಿ 2009ರ ಕರ್ನಾಟಕ ಅಧಿನಿಯಮ-1ರ ತಿದ್ದುಪಡಿ ಕಾಯ್ದೆಯ ಸೂಚನಾ ಫಲಕಗಳನ್ನು ಪ್ರಕಟಿಸಲು ಸೂಚಿಸಲಾಗಿದೆ ಎಂದು ಡಾ.ಶಾಲಿನಿ ರಜನೀಶ್ ಹೇಳಿದ್ದಾರೆ.