ಶಿಗ್ಗಾಂವಿ | ನನ್ನ ಮೇಲಿದ್ದ ಪ್ರಕರಣಗಳು ಹೈಕೋರ್ಟ್ ನಲ್ಲಿ ರದ್ದಾಗಿದೆ: ಬೊಮ್ಮಾಯಿಯ ʼರೌಡಿಶೀಟರ್ʼ ಆರೋಪಕ್ಕೆ ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಪಠಾಣ್ ಪ್ರತಿಕ್ರಿಯೆ
"ಸೋಲಿನ ಭಯದಿಂದ ಬೊಮ್ಮಾಯಿ ಸುಳ್ಳು ಆರೋಪ"
ಯಾಸಿರ್ ಪಠಾಣ್
ಶಿಗ್ಗಾಂವಿ: ರೌಡಿ ಪಟ್ಟಿಯಲ್ಲಿದ್ದ ನನ್ನ ಹೆಸರನ್ನು ತೆಗೆದು ಹಾಕಿರುವ ಪತ್ರ ನನ್ನ ಬಳಿಯಿದೆ. ಅಲ್ಲದೇ, 2016ರಲ್ಲಿ ನನ್ನ ಮೇಲೆ ದಾಖಲಿಸಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ. ಈ ಚುನಾವಣೆಯಲ್ಲಿ ಸೋಲಿನ ಭಯದಿಂದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನನ್ನ ಬಗ್ಗೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಅಹ್ಮದ್ ಖಾನ್ ಪಠಾಣ್ ವಾಗ್ದಾಳಿ ನಡೆಸಿದರು.
ಸೋಮವಾರ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಅವರು, ನನ್ನ ಮೇಲಿದ್ದ ಎಲ್ಲ ಪ್ರಕರಣಗಳು ಅಂತ್ಯವಾಗಿವೆ. ಆದರೂ, ಬಸವರಾಜ ಬೊಮ್ಮಾಯಿ ನನ್ನ ವಿರುದ್ಧ ಅಕ್ರಮ ಲೇಔಟ್ ಮಾಡಿರುವ ಆರೋಪ ಮಾಡಿದ್ದಾರೆ. 20 ವರ್ಷದಿಂದ ಶಾಸಕರಾಗಿದ್ದು, ಮುಖ್ಯಮಂತ್ರಿ ಆಗಿದ್ದ ಬಸವರಾಜ ಬೊಮ್ಮಾಯಿ ನನ್ನ ವಿರುದ್ಧ ಕ್ರಮ ಕೈಗೊಳ್ಳಬಹುದಿತ್ತಲ್ಲ ಎಂದು ಪ್ರಶ್ನಿಸಿದರು.
ಕೈಲಾಗದ ಶತ್ರುವಿನ ಅಂತಿಮ ಅಸ್ತ್ರ ಅಪಪ್ರಚಾರ ಎಂಬಂತೆ, ಈ ಬಾರಿ ಚುನಾವಣೆಯಲ್ಲಿ ತಮ್ಮ ಪುತ್ರನ ಸೋಲಿನ ಭಯದಿಂದ ನನ್ನ ಸುಳ್ಳು ಆರೋಪ ಮಾಡುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿಯೂ ಇದೇ ರೀತಿ ನನ್ನ ವಿರುದ್ಧ ಅಪ ಪ್ರಚಾರ ಮಾಡಿದ್ದರು. ಆದರೆ, ಈ ಬಾರಿ ಅವರ ಗಿಮಿಕ್ ನಡೆಯೋದಿಲ್ಲ. ಶಿಗ್ಗಾಂವಿ ಕ್ಷೇತ್ರಕ್ಕೆ ಹಾಗೂ ಬಿಜೆಪಿ ಪಕ್ಷಕ್ಕೆ ಬಸವರಾಜ ಬೊಮ್ಮಾಯಿ ದ್ರೋಹ ಮಾಡಿದ್ದಾರೆ ಎಂದು ಅವರು ಟೀಕಿಸಿದರು.
ತಮ್ಮ ವಿರುದ್ಧ ಸುದ್ದಿ ವಾಹಿನಿಗಳು ಯಾವುದೇ ವಿಡಿಯೋ ಪ್ರಸಾರ ಮಾಡಬಾರದು ಎಂದು ಬಸವರಾಜ ಬೊಮ್ಮಾಯಿ ನ್ಯಾಯಾಲಯದಿಂದ ಯಾಕೆ ತಡೆಯಾಜ್ಞೆ ತಂದಿದ್ದಾರೆ? ತಪ್ಪು ಮಾಡದೇ ಇದ್ದಲ್ಲಿ ತಡೆಯಾಜ್ಞೆ ಯಾಕೆ? ಅವರ ಮಗನ ವಿರುದ್ಧ ಬಿಟ್ ಕಾಯಿನ್ ಹಗರಣದ ಆರೋಪವಿದೆ. ನಮ್ಮ ವಿರುದ್ಧ ಆರೋಪಗಳನ್ನು ಮಾಡುವ ಮುನ್ನ ಸತ್ಯಾಸತ್ಯತೆಯನ್ನು ಜನರ ಮುಂದಿಡಿ ಎಂದು ಅವರು ಆಗ್ರಹಿಸಿದರು.
ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಮಾತನಾಡಿ, ಈ ರೀತಿ ಆರೋಪಗಳನ್ನು ಮಾಡುವುದರಲ್ಲಿ ಬಸವರಾಜ ಬೊಮ್ಮಾಯಿ ನಿಸ್ಸೀಮರು. ಅವರಿಗೆ ಸೋಲಿ ಭಯ ಕಾಡುತ್ತಿದೆ. ಆದುದರಿಂದಲೇ, ಯಾಸಿರ್ ಖಾನ್ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಈ ಚುನಾವಣೆಯಲ್ಲಿ ನಮ್ಮ ಗೆಲುವು ಖಚಿತ, ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಸೋಲು ಖಚಿತ ಎಂದು ಹೇಳಿದರು.
ಬಸವರಾಜ ಬೊಮ್ಮಾಯಿ ಈ ರೀತಿಯ ಯಾವುದಾದರೂ ಹೇಳಿಕೆಗಳನ್ನು ಕೊಡುತ್ತಾರೆ ಅನ್ನೋದು ನಮಗೆ ಗೊತ್ತಿತ್ತು. ಚುನಾವಣೆಯಲ್ಲಿ ನಮ್ಮನ್ನು ಸೋಲಿಸಲು ವಾಮ ಮಾರ್ಗಗಳನ್ನು ಹುಡುಕುತ್ತಾರೆ ಅನ್ನೋದು ಗೊತ್ತಿತ್ತು. ಈಗ ಅದು ಸತ್ಯವಾಗಿದೆ. ಅವರು ಏನೇ ದೂರು ಕೊಡಲಿ, ಎದುರಿಸಲು ಸಿದ್ಧವಿದ್ದೇವೆ ಎಂದು ಅಜ್ಜಂಪೀರ್ ಖಾದ್ರಿ ತಿಳಿಸಿದರು.