ಜಾತಿ ನಿಂದನೆ ಆರೋಪ: ನಟ ಉಪೇಂದ್ರ ವಿರುದ್ಧದ ಮತ್ತೊಂದು ಎಫ್ಐಆರ್ಗೆ ಹೈಕೋರ್ಟ್ ಮಧ್ಯಂತರ ತಡೆ
ಬೆಂಗಳೂರು, ಆ.17: ‘ಎಸ್ಸಿ ಮತ್ತು ಎಸ್ಟಿ ಸಮುದಾಯದವರಿಗೆ ಅವಮಾನ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ನಟ ಉಪೇಂದ್ರ ವಿರುದ್ಧ ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ಗೆ ಗುರುವಾರ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಕೇವಲ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಎಫ್ಐಆರ್ ಗೆ ಮಾತ್ರ ಹೈಕೋರ್ಟ್ ಈ ಹಿಂದೆ ತಡೆ ನೀಡಿದ್ದ ಹಿನ್ನೆಲೆಯಲ್ಲಿ ಹಲಸೂರು ಗೇಟ್ ಸೇರಿ ಉಳಿದ ಠಾಣೆಗಳ ಎಫ್ಐಆರ್ ರದ್ದು ಕೋರಿ ಹಿರಿಯ ವಕೀಲ ಉದಯ್ ಹೊಳ್ಳ ಮೂಲಕ ಉಪೇಂದ್ರ ಅರ್ಜಿ ಸಲ್ಲಿಸಿದ್ದರು.
ಘಟನೆ ವಿವರ:
ನಟ ಉಪೇಂದ್ರ ಸಾಮಾಜಿಕ ಜಾಲತಾಣದಲ್ಲಿ ಮಾತನಾಡುತ್ತಾ, ‘ಊರು ಎಂದ ಮೇಲೆ ಹೊಲಗೇರಿ ಇರುತ್ತದೆ’ ಎಂಬ ಹೇಳಿಕೆ ನೀಡಿದ್ದರು. ಇದು ದಲಿತ ಸಮಾಜದ ಜಾತಿ ಭಾವನೆಗಳಿಗೆ ಘಾಸಿ ಉಂಟು ಮಾಡಿದೆ. ಆದ್ದರಿಂದ ಉಪೇಂದ್ರ ವಿರುದ್ಧ ದೌರ್ಜನ್ಯ ಕಾಯ್ದೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಮಧುಸೂದನ್ ದೂರಿನಲ್ಲಿ ಪೊಲೀಸ್ ದೂರಿನಲ್ಲಿ ಒತ್ತಾಯಿಸಿದ್ದರು. ಅದರಂತೆ ಉಪೇಂದ್ರ ವಿರುದ್ಧ ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣೆ ಹಾಗೂ ಹಲಸೂರು ಗೇಟ್ ಠಾಣೆಯಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಾಗಿತ್ತು.
ಉಪೇಂದ್ರ ಬಂಧನಕ್ಕೆ ಒತ್ತಾಯ, ಪ್ರತಿಭಟನೆ
ನಟ ಉಪೇಂದ್ರರನ್ನು ಬಂಧಿಸದೆ ಪೊಲೀಸರ ವಿಳಂಬ ನೀತಿ ಖಂಡಿಸಿ ಭೀಮ್ ಆರ್ಮಿ ಸಂಘಟನೆಯ ಮುಖಂಡರು ನಗರದ ಟೌನ್ಹಾಲ್ ಸಮೀಪದ ಹಲಸೂರು ಗೇಟ್ ಪೊಲೀಸ್ ಠಾಣೆಯ ಬಳಿ ಬುಧವಾರ ಪ್ರತಿಭಟನೆ ನಡೆಸಿದ್ದರು.