ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಾತಿಗಣತಿ ಗ್ಯಾರಂಟಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
ಬೆಂಗಳೂರು: ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಕಡಿಮೆ ಮಾಡುವುದು ಜಾತಿಗಣತಿ ಉದ್ದೇಶ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶಾದ್ಯಂತ ಜಾತಿಗಣತಿ ಮಾಡುವುದು ಗ್ಯಾರಂಟಿ ಎಂದು ಮಲ್ಲಿಕಾರ್ಜುನ ಖರ್ಗೆ ಘೋಷಿಸಿದ್ದಾರೆ.
ಶನಿವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ಗ್ಯಾರಂಟಿ ಯೋಜನೆಗಳ ಘೋಷಣೆಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿಗಣತಿಯಿಂದ ಸಮುದಾಯಗಳ ಅಭಿವೃದ್ಧಿ ವಿಚಾರಕ್ಕೆ ಅನುಕೂಲ ಆಗಲಿದೆ. ಶಿಕ್ಷಣ ಮತ್ತು ಸಾಮಾಜಿಕ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅನುಕೂಲವಾಗಲಿದೆ ಎಂದು ನುಡಿದರು.
ಕರ್ನಾಟಕ ಈಗಾಗಲೇ ಜಾತಿಗಣತಿ ವರದಿಯನ್ನು ಸ್ವೀಕರಿಸಿದೆ. ಆದರೆ, ದೇಶದಲ್ಲಿ ಪ್ರಧಾನಿ ಮೋದಿ ಮಾತ್ರ ಜಾತಿಗಣತಿಗೆ ವಿರೋಧ ಮಾಡುತ್ತಿದ್ದಾರೆ. ಜಾತಿಯಿಂದ ಹೊರಬರುವುದು ಮೋದಿಗೆ ಇಷ್ಟವಿಲ್ಲ. ಮೋದಿ ಒಬ್ಬ ಹಿಂದುಳಿದ ಸಮುದಾಯಕ್ಕೆ ಸೇರಿದವರಾಗಿದ್ದರೂ ಜಾತಿಗಣತಿಯನ್ನು ವಿರೋಧಿಸುತ್ತಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದರು.
ಜಾತಿಗಣತಿಗೆ ರಾಜ್ಯ ನಾಯಕರಿಂದ ವಿರೋಧ ವ್ಯಕ್ತವಾಗುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಖರ್ಗೆ, ‘ನಾನು ಎಐಸಿಸಿ ಮಟ್ಟದಿಂದ ಹೇಳುತ್ತೇನೆ. ಪಕ್ಷದ ನಿರ್ಣಯವನ್ನು ಎಲ್ಲರೂ ಅನುಸರಿಸಬೇಕು. ನಾವು ಹೇಳುವುದನ್ನು ಸಿದ್ದರಾಮಯ್ಯ ಅವರೂ ಕೇಳಬೇಕು. ಕೆ.ಜೆ.ಜಾರ್ಜ್ ಪಾಲಿಸಬೇಕು. ಡಿ.ಕೆ.ಶಿವಕುಮಾರ್ ಪಕ್ಷದ ನಿರ್ಧಾರಗಳನ್ನು ಅನುಸರಿಸಬೇಕು’ ಎಂದು ಜಾತಿಗಣತಿ ಬಗ್ಗೆ ಪಕ್ಷದ ನಿಲುವನ್ನು ಸ್ಪಷ್ಟಪಡಿಸಿದರು.
ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ನಾನು ಸ್ವರ್ಧಿಸಬೇಕಾ ಬೇಡವೇ ಎಂಬುದು ಸ್ಥಳೀಯ ನಾಯಕರು ತೀರ್ಮಾನ ಕೈಗೊಳ್ಳುತ್ತಾರೆ. ಅದರ ಬಗ್ಗೆ ಆಮೇಲೆ ನೋಡೋಣ ಎಂದು ತಿಳಿಸಿದರು.
ಐಎನ್‍ಡಿಐಎ ಮೈತ್ರಿಕೂಟದಡಿ ನಾವು ಸ್ಪರ್ಧಿಸುತ್ತೇವೆ. ಕೆಲವು ರಾಜ್ಯಗಳಲ್ಲಿ ಸ್ಥಾನ ಹಂಚಿಕೆಯಾಗಿದೆ. ತಮಿಳುನಾಡಿನಲ್ಲಿ 10 ಸ್ಥಾನ ಪಡೆದಿದ್ದೇವೆ. ಹೊಸದಿಲ್ಲಿಯಲ್ಲಿ ಆಪ್ ಜೊತೆ ಒಪ್ಪಂದವಾಗಿದೆ. ಉತ್ತರಪ್ರದೇಶದಲ್ಲೂ ನಾವು ಒಪ್ಪಂದ ಮಾಡಿಕೊಂಡಿದ್ದೇವೆ. ಮಹಾರಾಷ್ಟ್ರದಲ್ಲೂ 17 ರಿಂದ 19 ಸ್ಥಾನಗಳು ಸಿಗುವ ವಿಶ್ವಾಸವಿದೆ. ಎಲ್ಲ ಕಡೆಗಳಲ್ಲೂ ಬಹುತೇಕ ಹೊಂದಾಣಿಕೆಯಾಗಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.