ಜಾತಿ ಗಣತಿ ವಿಚಾರದಲ್ಲಿ ಮುಖ್ಯಮಂತ್ರಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು: ಡಿ.ಕೆ. ಸುರೇಶ್
ಬೆಂಗಳೂರು: ಜಾತಿ ಗಣತಿ ವಿಚಾರದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂದು ಮುಖ್ಯಮಂತ್ರಿ ಬಳಿ ಮನವಿ ಮಾಡುತ್ತೇನೆ. ಕೇಂದ್ರ ಸರಕಾರ ಜನಗಣತಿ ಘೋಷಣೆ ಮಾಡಿದ್ದು, ಈ ಸಮಯದಲ್ಲೇ ಅಗತ್ಯ ಮಾನದಂಡ ಬಳಸಿ ಸಮೀಕ್ಷೆ ಮಾಡಿದರೆ ಯಾವುದೇ ಗೊಂದಲ ಇರುವುದಿಲ್ಲ. ಹೀಗಾಗಿ ಜನಗಣತಿವರೆಗೂ ಕಾಯುವುದು ಉತ್ತಮ ಎಂದು ಹೇಳುತ್ತೇನೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ತಿಳಿಸಿದರು.
ಶುಕ್ರವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ನಮ್ಮ ನಾಯಕರು. ಈ ಅವಧಿಯ 5 ವರ್ಷಗಳ ಕಾಲ ಅವರೇ ಮುಖ್ಯಮಂತ್ರಿಯಾಗಿ ಇರಬೇಕು ಎಂಬುದು ನಮ್ಮ ಬಯಕೆ. ತಾಯಿ ಚಾಮುಂಡಿ ಆಶೀರ್ವಾದದೊಂದಿಗೆ ಸಿದ್ದರಾಮಯ್ಯ ಎಲ್ಲ ಆರೋಪಗಳಿಂದ ಮುಕ್ತರಾಗುತ್ತಾರೆ. ಅವರನ್ನು ಯಾರೂ ಅಲ್ಲಾಡಿಸಲು ಆಗುವುದಿಲ್ಲ ಎಂದು ತಿಳಿಸಿದರು.
ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳು ರಾಜ್ಯದ ಹಿತಕ್ಕೆ ಪೂರಕವಾಗಿಲ್ಲ. ಜನರಿಗೆ ಅಸಹ್ಯವಾಗುತ್ತಿದ್ದು, ಅವರು ಬೀದಿಯಲ್ಲಿ ಕಲ್ಲು ಹೊಡೆಯುವ ಮುನ್ನ ಎಲ್ಲ ಪಕ್ಷಗಳ ನಾಯಕರು ಎಚ್ಚೆತ್ತುಕೊಳ್ಳಬೇಕು. ಅಭಿವೃದ್ಧಿ ಮಾಡಲಿ ಎಂದು ಜನ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ, ದೇಶದಲ್ಲಿ ಎನ್‍ಡಿಎ ಮೈತ್ರಿಕೂಟಕ್ಕೆ ಅಧಿಕಾರ ನೀಡಿದ್ದಾರೆ. ಆದರೆ ಜನರಿಂದ ಆಯ್ಕೆಯಾದ ನಾಯಕರು ಆರೋಪ, ಪ್ರತ್ಯಾರೋಪ, ದೂಷಣೆ ಮಾಡುತ್ತಾ ಕನ್ನಡಿಗರಿಗೆ ಅಪಮಾನ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವುದು ರಾಜ್ಯ ಮತ್ತು ಕೇಂದ್ರ ಸರಕಾರದ ಜವಾಬ್ದಾರಿ. ಅದನ್ನು ಮರೆತು ಈ ರೀತಿ ಕಿತ್ತಾಡುತ್ತಿರುವುದು ಸರಿಯೇ? ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ಚುನಾವಣೆಗೆ ಇನ್ನು ಸಾಕಷ್ಟು ಸಮಯವಿದೆ. ಈ ಹೊತ್ತಿನಲ್ಲಿ ಜನ ಅಭಿವೃದ್ಧಿ, ಯುವಕರು, ರೈತರ ಸಮಸ್ಯೆ ಬಗೆಹರಿಸುವ ಕಾರ್ಯಗಳನ್ನು ಎದುರು ನೋಡುತ್ತಿದ್ದಾರೆ. ಈ ಆರೋಪಗಳು ರಾಜ್ಯದ ಜನರಿಗೆ ಎಳ್ಳಷ್ಟೂ ಇಷ್ಟವಿಲ್ಲ. ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ ಜನ ಬೀದಿಯಲ್ಲಿ ಕಲ್ಲು ಹೊಡೆಯುವ ಪರಿಸ್ಥಿತಿ ಎದುರಾಗಲಿದೆ ಎಂದು ಅವರು ಎಚ್ಚರಿಸಿದರು.
ಪರಿಸ್ಥಿತಿ ಹೀಗೆ ಮುಂದಿವರಿದರೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಯಾವುದೇ ಪಕ್ಷವಾಗಿರಲಿ ಈ ಪರಿಸ್ಥಿತಿ ಬರಬಹುದು. ಆರೋಪ ಪ್ರತ್ಯಾರೋಪಗಳನ್ನು ತೀರ್ಮಾನ ಮಾಡಲು ನ್ಯಾಯಾಲಯ ಇದೆ ಎಂದು ಸುರೇಶ್ ತಿಳಿಸಿದರು.
ಶಾಸಕರಾದ ಎಸ್.ಟಿ.ಸೋಮಶೇಖರ್ ಹಾಗೂ ಜಿ.ಟಿ.ದೇವೇಗೌಡ ಒಟ್ಟಾಗಿ ಸಿದ್ದರಾಮಯ್ಯ ಪರ ಹೇಳಿಕೆ ನೀಡುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸುರೇಶ್, ದೂರು ಕೊಟ್ಟವರು ತಮ್ಮ ಕೆಲಸ ಮಾಡಿದ್ದಾರೆ. ನ್ಯಾಯಾಲಯ ಅವರ ಮನವಿ ಪುರಸ್ಕರಿಸಿ ತನಿಖೆಗೆ ಆದೇಶ ನೀಡಿದೆ. ತನಿಖೆ ಮುಗಿಯುವವರೆಗೂ ಎಲ್ಲರೂ ತಾಳ್ಮೆಯಿಂದ ಇರಬೇಕು. ಸರಿ ಯಾವುದು, ತಪ್ಪು ಯಾವುದು ಎಂಬುದನ್ನು ತನಿಖಾಧಿಕಾರಿಗಳು ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದರು.
ಈ ಪ್ರಕರಣ ತಲೆ ತಗ್ಗಿಸುವಂತಹದ್ದು: ಬಿಜೆಪಿ ಶಾಸಕ ಮುನಿರತ್ನ ಪ್ರಕರಣದ ತನಿಖೆ ಹಿಂದುಳಿಯುತ್ತಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ವಿಚಾರವಾಗಿ ಮಾಹಿತಿ ಇಲ್ಲ. ಇದು ಅಸಹ್ಯವಾದ ವಾತಾವರಣ. ರಾಜ್ಯದ ಬೆಳವಣಿಗೆಗೆ ಒಳ್ಳೆಯದಲ್ಲ. ಕರ್ನಾಟಕ ಉತ್ತಮ ಆಡಳಿತ, ಬೆಳವಣಿಗೆ ಹಾಗೂ ಪ್ರಗತಿ ಸಾಧಿಸುತ್ತದೆ ಎಂದು ಎಲ್ಲ ಕಡೆ ಹೇಳಲಾಗುತ್ತಿತ್ತು. ಆದರೆ ಇತ್ತೀಚಿನ ಬೆಳವಣಿಗೆ ತಲೆತಗ್ಗಿಸುವಂತಿದೆ ಎಂದು ತಿಳಿಸಿದರು.
ಝಮೀರ್ ಪ್ರೀತಿ, ಅಭಿಮಾನಕ್ಕೆ ನಮನ: ಚನ್ನಪಟ್ಟಣ ಉಪ ಚುನಾವಣೆಗೆ ಡಿ.ಕೆ.ಸುರೇಶ್ ಅವರೇ ಅಭ್ಯರ್ಥಿಯಾಗಬೇಕು ಎಂದು ಸಚಿವ ಝಮೀರ್ ಅಹ್ಮದ್ ಖಾನ್ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಝಮೀರ್ ಅವರ ಅಭಿಮಾನಕ್ಕೆ, ಪ್ರೀತಿ ವಿಶ್ವಾಸಕ್ಕೆ ಸಾಷ್ಟಾಂಗ ನಮಸ್ಕಾರಗಳು. ಚುನಾವಣೆ ಘೋಷಣೆ ನಂತರ ನಮ್ಮ ಪಕ್ಷ ಉತ್ತಮ ಅಭ್ಯರ್ಥಿಯನ್ನು ನಿರ್ಧರಿಸಲಿದೆ ಎಂದು ತಿಳಿಸಿದರು.
ದಲಿತ ಮುಖಂಡರು ಪ್ರತ್ಯೇಕ ಸಭೆ ಮಾಡುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಸಮಾಜದ ನಾಯಕರು ಸೇರಿ ಅನೇಕ ವಿಚಾರ ಚರ್ಚೆ ಮಾಡುತ್ತೇವೆ. ಪರಮೇಶ್ವರ್ 8 ವರ್ಷ ಕೆಪಿಸಿಸಿ ಅಧ್ಯಕ್ಷರಾಗಿದ್ದರು, ಸತೀಶ್ ಜಾರಕಿಹೊಳಿ ಕಾರ್ಯಾಧ್ಯಕ್ಷರಾಗಿದ್ದವರು. ಆ ಸಮಾಜದ ಕಷ್ಟ ಸುಖ ಕೇಳಿ, ಏಳಿಗೆ ಬಯಸುವುದು, ರಾಜ್ಯದ ವಿದ್ಯಮಾನಗಳನ್ನು ಯಾವ ರೀತಿ ಎದುರಿಸಬೇಕು ಎಂದು ಚರ್ಚೆ ಮಾಡುವುದು ಸಹಜ. ಅದರಲ್ಲಿ ತಪ್ಪೇನಿಲ್ಲ ಎಂದು ತಿಳಿಸಿದರು.