‘ಜಾತಿ ಗಣತಿ’ ಸಮಾನ ಅವಕಾಶಗಳ ಕೀಲಿಕೈ: ಸಚಿವ ಡಾ.ಎಚ್.ಸಿ.ಮಹದೇವಪ್ಪ
ಸಚಿವ ಡಾ.ಎಚ್.ಸಿ.ಮಹದೇವಪ್ಪ
ಬೆಂಗಳೂರು: ‘ಜಾತಿ ಗಣತಿಗೆ ಸಂಬಂಧಿಸಿದಂತೆ ಇದೀಗ ದೇಶದಲ್ಲಿ ಚರ್ಚೆಗಳು ಮೊದಲಾಗಿದ್ದು, ಜಾತಿ ಗಣತಿಯಿಂದ ಜಾತಿ-ಜಾತಿಗಳ ನಡುವೆ ಒಡಕು ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂಬುದು ಅತ್ಯಂತ ತಪ್ಪಾದ ಮತ್ತು ವಾಸ್ತವಕ್ಕೆ ದೂರವಾದ ಸಂಗತಿಯನ್ನು ಹರಡಲಾಗುತ್ತಿದೆ’ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.
ಸೋಮವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ‘ಭಾರತವು ಸಂವಿಧಾನಾತ್ಮಕ ದೇಶವಾಗಿದ್ದರೂ ಇಲ್ಲಿ ಜಾತಿಯ ಮೇಲರಿಮೆ ಪ್ರಜ್ಞೆಯೇ ಮೇಲುಗೈ ಸಾಧಿಸಿರುವುದು ಅತಿದೊಡ್ಡ ವಾಸ್ತವವಾಗಿದ್ದು, ತುಳಿತಕ್ಕೆ ಒಳಪಟ್ಟ ವರ್ಗಗಳು ಅದೇ ರೀತಿ ಇರಬೇಕು ಎಂಬ ಮನಸ್ಥಿತಿಯು ಇವರ ಮಾತುಗಳಲ್ಲಿ ವ್ಯಕ್ತವಾಗುತ್ತಿದೆ’ ಎಂದು ದೂರಿದ್ದಾರೆ.
‘ಸಾಮಾಜಿಕ ಅಸಮಾನತೆಗಳ ಸಂದರ್ಭದಲ್ಲಿ ಸಮಾನ ಅವಕಾಶಗಳ ಸೃಷ್ಟಿ ಮಾಡುವುದು ಸಂವಿಧಾನದ ಆಶಯ. ಅದರಲ್ಲೂ ಸಾಮಾಜಿಕವಾಗಿ ಹಲವಾರು ಜಾತಿಯ ಅಸಮಾನತೆಗಳನ್ನು ಈಗಲೂ ಎದುರಿಸುತ್ತಿರುವ ಭಾರತದಲ್ಲಿ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಯಾವ ಜಾತಿಯ ಜನರ ಪರಿಸ್ಥಿತಿ ಏನಾಗಿದೆ, ಅವರ ಬದುಕಿನ ಸ್ಥಿತಿ ಗತಿ ಏನು? ಸಮಾನ ಮತ್ತು ಘನತೆಯ ಬದುಕಿಗಾಗಿ ಸರ್ಕಾರ ಅವರಿಗೆ ಯಾವ ರೀತಿಯಲ್ಲಿ ನೆರವಾಗಬಹುದು? ಜನರ ಹಕ್ಕುಗಳು ಮತ್ತು ಅವಕಾಶಗಳು ಅವರಿಗೆ ಸರಿಯಾದ ರೀತಿಯಲ್ಲಿ ಹಂಚಿಕೆ ಆಗಿದೆಯಾ ಎಂಬುದನ್ನು ತಿಳಿದುಕೊಳ್ಳುವ ಸಲುವಾಗಿ ಮಾಡುತ್ತಿರುವುದೇ ಈ ಜಾತಿ ಗಣತಿ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
‘ಈ ಜಾತಿ ಗಣತಿಯಿಂದಾಗಿ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕವಾಗಿ ಮತ್ತು ಔದ್ಯೋಗಿಕವಾಗಿ ತುಳಿತಕ್ಕೆ ಒಳಪಟ್ಟ ಸಮುದಾಯಗಳ ಸ್ಥೂಲವಾದ ಚಿತ್ರಣವು ಸಿಗಲಿದೆ. ಆದರೆ, ಜಾತಿಯೇ ರಾಜಕೀಯಕ್ಕೆ ಪ್ರಬಲ ಅಸ್ತ್ರ ಆಗಿರುವ ಈ ವೇಳೆ, ತಳ ವರ್ಗಗಳ ಏಳಿಗೆಯ ಕುರಿತು ಆರೋಗ್ಯಕರವಾಗಿ ಚಿಂತಿಸದ ಕೆಲವು ಕುತ್ಸಿತ ಮನಸುಗಳು ಜಾತಿ ಗಣತಿಯ ಕುರಿತು ತಪ್ಪಾಗಿ ಬಿಂಬಿಸಲು ಹೊರಟಿದ್ದು ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ’ ಎಂದು ಅವರು ತಿಳಿಸಿದ್ದಾರೆ.
‘ಉತ್ತಮ ಉದ್ದೇಶ ಹೊಂದಿರುವ ಜಾತಿ ಗಣತಿಯನ್ನು ಮಾಡುವುದರಿಂದ ಜಾತಿಗಳ ನಡುವೆ ಕಂದರ ಹೆಚ್ಚಾಗುತ್ತದೆ ಎಂದು ಹೇಳುತ್ತಿರುವ ಜನರು ದಲಿತರ ಮೇಲೆ ದೌರ್ಜನ್ಯಗಳು ಆಗುವಾಗ, ಸಾಮಾಜಿಕ ಶೋಷಣೆಯ ಕಾರಣಕ್ಕೆ ಅವರ ಘನತೆಯ ಬದುಕುವ ವಾತಾವರಣ ಹಾಳಾದಾಗ ಎಲ್ಲಿರುತ್ತಾರೆ? ಎಂದು ಪ್ರಶ್ನಿಸಿದ್ದಾರೆ.
‘ರಾಜಕೀಯದ ಕಾರಣಕ್ಕಾಗಿ ಯಾರು ಏನೇ ಹೇಳಿದರೂ ಜಾತಿ ಗಣತಿ ಎಂಬುದು ನಮ್ಮ ಸಮುದಾಯಗಳ ಸಾಮಾಜಿಕ ಆರ್ಥಿಕ, ರಾಜಕೀಯ ಹಾಗೂ ಔದ್ಯೋಗಿಕ ಸ್ಥಿತಿಗತಿಯನ್ನು ತಿಳಿದು ಅವರಿಗೆ ನೆರವಾಗಲು ಇರುವ ಸಮಾನ ಅವಕಾಶಗಳ ಕೀಲಿಕೈಯೇ ಹೊರತು, ಸಾಮಾಜಿಕ ವಿಭಜನೆಯ ಸಂಗತಿ ಅಲ್ಲ. ಇದನ್ನು ನಮ್ಮ ಜನ ಸಮುದಾಯಗಳು ಅರ್ಥ ಮಾಡಿಕೊಂಡು ಹೆಚ್ಚು ಗಟ್ಟಿಯಾದ ದನಿಯಲ್ಲಿ ಇದರ ಬಗ್ಗೆ ಮಾತನಾಡಬೇಕು’ ಎಂದು ಮಹದೇವಪ್ಪ ತಿಳಿಸಿದ್ದಾರೆ.