‘ಜಾತಿ ಗಣತಿ ವರದಿ ಬಿಡುಗಡೆ’ಗೆ ಅಹಿಂದ ಚಳವಳಿ ಒತ್ತಾಯ
ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು : ಎಚ್.ಕಾಂತರಾಜ್ ನೇತೃತ್ವದ ಕರ್ನಾಟಕ ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷಾ (ಜಾತಿ ಗಣತಿ) ವರದಿ ಬಿಡುಗಡೆ ಮಾಡಬೇಕು ಎಂದು ‘ಅಹಿಂದ ಚಳವಳಿ’ ರಾಜ್ಯ ಸರಕಾರವನ್ನು ಒತ್ತಾಯಿಸಿದೆ.
ಮಂಗಳವಾರ ಈ ಕುರಿತು ಪ್ರಕಟನೆ ನೀಡಿದ ಚಳವಳಿ ಮುಖ್ಯ ಸಂಚಾಲಕ ಎಸ್.ಮೂರ್ತಿ, ‘ಜಾತಿ ಗಣತಿ ಸಮೀಕ್ಷಾ ವರದಿ ಬಿಡುಗಡೆ ವಿಳಂಬವಾದರೆ ಅಹಿಂದ ಸಮುದಾಯಗಳಿಗೆ ಅದರಲ್ಲೂ ಹಿಂದುಳಿದ ವರ್ಗಗಳಿಗೆ ಬಾರಿ ಅನ್ಯಾಯ ಮುಂದುವರೆಯುತ್ತದೆ’ ಎಂದು ತಿಳಿಸಿದ್ದಾರೆ.
‘ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು, ಸಂವಿಧಾನ ರಚನೆಯಾಗಿ 75 ವರ್ಷ ಕಳೆದಿವೆ. ಈವರೆಗೂ ಸಂವಿಧಾನದ ಹಕ್ಕುಗಳು ಹಿಂದುಳಿದ ವರ್ಗದೊಳಗಿನ ಕೆಲವು ಸಮುದಾಯಗಳಲ್ಲಿ ಒಬ್ಬರೂ ಸರಕಾರಿ ಹುದ್ದೆಯಲ್ಲಿಲ್ಲ. ಅಸಮಾನತೆಯಲ್ಲಿ ಹಿಂದುಳಿದ ವರ್ಗ ಬಳಲುತ್ತಿದೆ ಎಂದು ಎಸ್.ಮೂರ್ತಿ ಗಮನ ಸೆಳೆದಿದ್ದಾರೆ.
ಕೇಂದ್ರ ಸರಕಾರ ಆರ್ಥಿಕವಾಗಿ ಹಿಂದುಳಿದವರಿಗೆ(ಇಡಬ್ಲ್ಯೂಎಸ್) ಶೇ.10ರಷ್ಟು ಮೀಸಲಾತಿ ಜಾರಿಗೆ ತಂದಿದೆ. ಮೀಸಲಾತಿ ಪ್ರಮಾಣ ಶೇ.50ರಷ್ಟು ಮೀರಬಾರದೆಂಬ ಸುಪ್ರೀಂ ಕೋರ್ಟ್ ತೀರ್ಪು ನಗಣ್ಯವಾಗಿದೆ. ಹೀಗಾಗಿ ಅನ್ಯಾಯಕ್ಕೆ ಗುರಿಯಾಗಿರುವವರಿಗೆ ಸಾಮಾಜಿಕ ನ್ಯಾಯ ಒದಗಿಸುವ ದೃಷ್ಟಿಯಿಂದ ಜಾತಿ ಗಣತಿ ವರದಿಯನ್ನು ಅನುಷ್ಟಾನಕ್ಕೆ ತರಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಜ.18ಕ್ಕೆ ಸಭೆ: ಭಾರತ ದೇಶವನ್ನು ಸಮಾನತೆಯ ರಾಷ್ಟ್ರವನ್ನಾಗಿ ನಿರ್ಮಾಣ ಮಾಡಲು ಹಿಂದುಳಿದ ವರ್ಗಗಳನ್ನು ಕೈಹಿಡಿದು ಮೇಲೆತ್ತಬೇಕು. ನಮ್ಮ ಮನವಿಯನ್ನು ಪರಿಗಣಿಸದಿದ್ದರೆ ರಾಜ್ಯ ವ್ಯಾಪಿ ಜನಾಂದೋಲನ ರೂಪಿಸಲಾಗುವುದು. ಅದಕ್ಕಾಗಿ ಎಲ್ಲ ಜಿಲ್ಲಾ ಪದಾಧಿಕಾರಿಗಳನ್ನು ಜ.18ಕ್ಕೆ ಬೆಂಗಳೂರಿನಲ್ಲಿ ಸಭೆ ಕರೆಯಲಾಗಿದೆ’ ಎಂದು ಎಸ್.ಮೂರ್ತಿ ಮಾಹಿತಿ ನೀಡಿದ್ದಾರೆ.