ಶೀಘ್ರವೇ ಸಂಪುಟ ಸಭೆಗೆ ಜಾತಿಗಣತಿ ವರದಿ : ಶಿವರಾಜ್ ತಂಗಡಗಿ
‘ಮಾಧ್ಯಮಗಳಲ್ಲಿ ಬರುತ್ತಿರುವ ಜಾತಿಗಣತಿ ಅಂಕಿ-ಅಂಶಗಳು ಸುಳ್ಳು’

ಸಚಿವ ಶಿವರಾಜ್ ತಂಗಡಗಿ
ಬೆಂಗಳೂರು: ಸಾಮಾಜಿಕ-ಆರ್ಥಿಕ ಸಮೀಕ್ಷಾ (ಜಾತಿ ಗಣತಿ) ವರದಿಯನ್ನು ಶೀಘ್ರವೇ ಸಂಪುಟ ಸಭೆಗೆ ತರಲಾಗುವುದು. ಇಲ್ಲಿಯ ವರೆಗೆ ನಾವು ವರದಿಯನ್ನು ನೋಡಿಲ್ಲ. ಆದರೆ, ಮಾಧ್ಯಮಗಳಲ್ಲಿ ಬರುತ್ತಿರುವ ಅಂಕಿ-ಅಂಶಗಳು ಸುಳ್ಳು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ.
ಶುಕ್ರವಾರ ವಿಕಾಸಸೌಧದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜಾತಿ ಗಣತಿ ಸಮೀಕ್ಷಾ ವರದಿ ಬಗ್ಗೆ ಅನಗತ್ಯವಾಗಿ ಸುಳ್ಳು ಅಂಕಿ ಅಂಶವನ್ನು ಹೇಳಲಾಗುತ್ತಿದೆ. ಅದರ ವರದಿಯನ್ನು ಖಜಾನೆಯಲ್ಲೇ ಇಟ್ಟಿದ್ದೇವೆ. ಅದರ ಬಿಡುಗಡೆಗೂ ಮುನ್ನವೇ ವಿರೋಧ ಬೇಡ ಎಂದರು.
ಜಾತಿ ಗಣತಿಗಾಗಿ 166 ಕೋಟಿ ರೂ.ಗಳಿಗೂ ಅಧಿಕ ಹಣ ಖರ್ಚು ಮಾಡಲಾಗಿದೆ. ಜಾತಿ ಗಣತಿ ವರದಿ ಬಿಡುಗಡೆಗೆ ಸರಕಾರಕ್ಕೆ ಯಾವುದೇ, ಯಾರದೇ ಭಯ, ಆತಂಕವೂ ಇಲ್ಲ. ಈ ಹಿಂದೆ ವರದಿಯನ್ನು ಸ್ವೀಕಾರ ಮಾಡಿಲ್ಲ ಎಂದು ಹೇಳುತ್ತಿದ್ದರು. ಇದೀಗ ಸರಕಾರ ವರದಿಯನ್ನು ಸ್ವೀಕರಿಸಿದೆ. ಮುಂದಿನ ಸಂಪುಟದಲ್ಲಿ ಚರ್ಚೆ ತೆಗೆದುಕೊಳ್ಳಲಾಗುವುದು ಎಂದು ಶಿವರಾಜ್ ತಂಗಡಗಿ ಹೇಳಿದರು.