‘ಜಾತಿ ಗಣತಿ’ ವರದಿ ಅವೈಜ್ಞಾನಿಕ: ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ
ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಜಾತಿ ಗಣತಿ ವರದಿ ಅವೈಜ್ಞಾನಿಕವಾಗಿದ್ದು, ಈ ಸಂಬಂಧ ಮತ್ತೊಮ್ಮೆ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸುವ ಅಗತ್ಯತೆ ಇದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಆಗ್ರಹಿಸಿದ್ದಾರೆ.
ಶನಿವಾರ ಅರಮನೆ ರಸ್ತೆಯ ಅಖಿಲ ಭಾರತ ವೀರಶೈವ ಮಹಾಸಭಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸಿದ ಜಾತಿ ಜನಗಣತಿ ವರದಿ ಸರಿ ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
‘ಜಾತಿ ಗಣತಿ ಲೋಪದಿಂದ ಕೂಡಿದೆ ಎಂದು ನಾವು ವಿರೋಧ ಮಾಡುತ್ತಿದ್ದೇವೆ. ವರದಿಯಲ್ಲಿ ಏನಿದೆ ಎನ್ನವುದು ಬಹಿರಂಗವಾಗಿದೆ. ಅಲ್ಲದೆ, ಸಮೀಕ್ಷೆ ವೇಳೆ ಲಿಂಗಾಯತ, ವೀರಶೈವ ಎಂದು ಬರೆದುಕೊಂಡೇ ಇಲ್ಲ. ಅನೇಕ ಲೋಪದೋಷಗಳಿರುವ ಈ ಸಮಿಕ್ಷಾ ವರದಿಗೆ ಎಲ್ಲರ ವಿರೋಧವಿದೆ ಎಂದು ಅವರು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಿಎಂ ಭೇಟಿ ಮಾಡುತ್ತೇವೆ. ಒಕ್ಕಲಿಗರ ಸಮುದಾಯದ ರೀತಿಯೇ ಸಹಿ ಮಾಡಿ ವಿರೋಧ ವ್ಯಕ್ತಪಡಿಸುತ್ತೇವೆ ಎಂದ ಅವರು, ಪ್ರತ್ಯೇಕ ಲಿಂಗಾಯತ ಧರ್ಮ ಎಂದು ಹೋದವರೆಲ್ಲ ಸೋತರು, ಬರೀ ಲಿಂಗಾಯತ ಎಂದು ಕೂಗಿದರವರು ಮಣ್ಣು ಕಚ್ಚಿದರು ಎಂದು ವ್ಯಂಗ್ಯವಾಡಿದರು.
ಜಾತಿ ವಿಚಾರ ಮಾತನಾಡಿದ್ದು ತಪ್ಪು ಎಂದು ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ಅವರ ಹೇಳಿಕೆಗೆ ಉತ್ತರಿಸಿದ ಅವರು, ಅವನು ಹಿಂದೆಯೂ ಹೀಗೆ ಏನೇನೊ ಮಾತನಾಡಿದ್ದ. ಸಚಿವ ಸಂಪುಟ ಸೇರಲು ಏನೇನೊ ಮಾತನಾಡುತ್ತಿದ್ದಾನೆ ಎಂದು ವಾಗ್ದಾಳಿ ನಡೆಸಿದರು.