ಜಾತಿ ಪ್ರಭಾವ ಆರ್ಥಿಕ ಅವಕಾಶಗಳನ್ನು ಆವರಿಸಿಕೊಳ್ಳಲಿದೆ: ಡಿ.ವೈ.ಚಂದ್ರಚೂಡ್
ಬೆಂಗಳೂರು: ಜಾತಿ ತನ್ನ ಪ್ರಭಾವ ಮುಂದುವರೆಸಿದ್ದು, ವಿಭಿನ್ನ ಜಾತಿ ಗುಂಪುಗಳ ಆರ್ಥಿಕ ಅವಕಾಶಗಳನ್ನು ಆವರಿಸಿಕೊಳ್ಳುತ್ತಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ.ಚಂದ್ರಚೂಡ್ ಕಳವಳ ವ್ಯಕ್ತಪಡಿಸಿದರು.
ಶನಿವಾರ ಖಾಸಗಿ ಹೋಟೆಲ್‍ನಲ್ಲಿ ಏಷಿಯಾ ಮತ್ತು ಪೆಸಿಫಿಕ್ ಕಾನೂನು ಸಂಘದ ವತಿಯಿಂದ ನಾಲ್ಕು ದಿನಗಳ ಕಾಲ ನಡೆಯುತ್ತಿರುವ 36ನೆ ಲಾ ಏಷಿಯಾ ಸಮಾವೇಶದಲ್ಲಿ ‘ಅಸ್ಮಿತೆ, ವ್ಯಕ್ತಿ ಮತ್ತು ಪ್ರಭುತ್ವ: ಸ್ವಾತಂತ್ರ್ಯದ ಹೊಸ ಮಾರ್ಗಗಳು' ಕುರಿತು ವರ್ಚುವಲ್ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಜಾತಿ ವ್ಯವಸ್ಥೆ ಎಂಬುದು ಚಾರಿತ್ರಿಕ ಅಸಮಾನತೆಗಳಲ್ಲಿ ಮಾತ್ರವಲ್ಲದೆ ಇಂದಿನ ಸಂಕೀರ್ಣ ವಾಸ್ತವಗಳಲ್ಲಿಯೂ ಬೇರೂರಿದ್ದು ಕಾನೂನಿನೊಳಗಿರುವ ಸಂಕೀರ್ಣತೆ ಸಮಾಜದಲ್ಲಿ ಅಂತಹ ವಿಭಜನೆಗಳನ್ನು ಮುಂದುವರಿಸುತ್ತಿದೆ.ಜತೆಗೆ, ಜಾತಿ ತನ್ನ ಪ್ರಭಾವ ಮುಂದುವರೆಸಿದ್ದು ವಿಭಿನ್ನ ಜಾತಿ ಗುಂಪುಗಳ ಆರ್ಥಿಕ ಅವಕಾಶಗಳನ್ನು ಆವರಿಸಿಕೊಳ್ಳುತ್ತಿದೆ ಎಂದು ನುಡಿದರು.
ಸ್ವಾತಂತ್ರ್ಯ ಎಂದರೆ ವೈಯಕ್ತಿಕ ಕ್ರಿಯೆಗಳು ಮತ್ತು ನಿರ್ಧಾರಗಳಲ್ಲಿ ಸರಕಾರ ಮಧ್ಯಪ್ರವೇಶಿಸದಿರುವುದು ಎನ್ನುವ ಐತಿಹಾಸಿಕ ಅರ್ಥೈಸುವಿಕೆಗೆ ಇರುವ ಮಿತಿಯನ್ನು ಅರ್ಥಮಾಡಿಕೊಳ್ಳುವುದು ಮುಖ್ಯ ಎಂದ ಅವರು, ಯಾವುದೇ ಜ್ಞಾನ ಎಂಬುದು ಸೈದ್ಧಾಂತಿಕವಾಗಿ ತಟಸ್ಥವಲ್ಲ ಮತ್ತು ಅಧಿಕಾರದ ಉದ್ದೇಶ ಮೇಲೆ ಅನಿಶ್ಚಿತವಾಗಿ ಇರುವುದಿಲ್ಲ. ಸ್ವಾತಂತ್ರ್ಯ ನಮ್ಮ ಪರಿಕಲ್ಪನೆಯಲ್ಲಿನ ಪರಿವರ್ತನಶೀಲತೆಯನ್ನು ಗಮನಿಸಬಹುದು ಎಂದು ಉಲ್ಲೇಖಿಸಿದರು.
ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮಾತನಾಡಿ, ನಾವು ನಿರಂತರ ಕಲಿಕೆಗೆ ಮುಂದಾಗಬೇಕಿದೆ. ಕಾನೂನು ಆಡಳಿತ ಮೂಲಧಾತುವಾಗಿರುವ ಡಿಜಿಟಲ್ ವ್ಯವಸ್ಥೆಯನ್ನು ರೂಪಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಹೇಳಿದರು.