ರಾಜಧಾನಿ ಬೆಂಗಳೂರಿಗೆ ಕಾವೇರಿ ನೀರು ಕಾಯ್ದಿರಿಸಲಾಗುವುದು: ಡಿಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರು: ರಾಜಧಾನಿ ಬೆಂಗಳೂರಿಗೆ ಕಾವೇರಿಯಿಂದ ಬಳಕೆ ಮಾಡಿಕೊಳ್ಳಲು ಅಗತ್ಯ ನೀರು ಕಾಯ್ದಿರಿಸಲಾಗುವುದು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮಂಗಳವಾರ ವಿಧಾನಸಭೆಯ ಪ್ರಶ್ನೋತ್ತರದ ಅವಧಿಯಲ್ಲಿ ಬಿಜೆಪಿ ಸದಸ್ಯ ಸಿ.ಕೆ.ರಾಮಮೂರ್ತಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 2017ರಿಂದ ಕೊಳಗೇರಿಗೆ ಉಚಿತವಾಗಿ ನೀರು ಪೂರೈಸಲಾಗುತ್ತಿದೆ. ಜಯನಗರದಲ್ಲಿ ನಿರ್ಮಾಣವಾಗಿರುವ ಫ್ಲಾಟ್‍ಗಳಿಗೆ ಕೊಳವೆ ಬಾವಿಗಳಿಂದ ನೀರು ಪೂರೈಸಲಾಗುತ್ತಿದೆ ಎಂದರು.
ಅದೇ ರೀತಿ, ಕಾವೇರಿಯಿಂದ ಆರು ಟಿಎಂಸಿ ನೀರನ್ನು ಹೆಚ್ಚುವರಿಯಾಗಿ ಕಾಯ್ದಿರಿಸಲಾಗಿದೆ. ಒಟ್ಟು ನೀರಿನ ಮೀಸಲು ಪ್ರಮಾಣದಿಂದ 1.5 ಟಿಎಂಸಿ ಹೆಚ್ಚುವರಿಯಾಗಿ ಉಳಿಯಲಿದೆ ಎಂದ ಅವರು, ಶಾಸಕರ ಪ್ರದೇಶಾಭಿವೃದ್ಧಿಗೆ ಐದು ಕೋಟಿ ರೂಪಾಯಿಗಳನ್ನು ನೀಡುತ್ತೇನೆ. ಅದನ್ನು ಖರ್ಚು ಮಾಡಿ ಜಯನಗರ ಕೊಳಗೇರಿ ಪ್ರದೇಶಕ್ಕೆ ಉಚಿತ ನೀರಿನ ಸಂಪರ್ಕ ಕಲ್ಪಿಸಿ ಎಂದು ಡಿ.ಕೆ.ಶಿವಕುಮಾರ್ ಸಲಹೆ ನೀಡಿದರು.
ಶಾಸಕರು ಆಗಬಹುದು ಎಂದು ಒಪ್ಪಿಕೊಂಡರು. ಮಧ್ಯಪ್ರವೇಶಿಸಿದ ವಿಪಕ್ಷ ನಾಯಕ ಆರ್.ಅಶೋಕ್, ಜಾಣತನದಿಂದ ಉತ್ತರ ಹೇಳಬೇಡಿ, ರಾಮಮೂರ್ತಿ ಹೊಸದಾಗಿ ಶಾಸಕರಾಗಿದ್ದಾರೆ. ಶಾಸಕರ ಪ್ರದೇಶಾಭಿವೃದ್ದಿಗೆ ನೀಡುವ ಅನುದಾನ ಬೇರೆ, ಅದನ್ನು ನೀರಿನ ಸಂಪರ್ಕಕ್ಕೆ ಬಳಕೆ ಮಾಡಿಕೊಳ್ಳುವುದು ಹೇಗೆ ಸಾಧ್ಯ. ಶಾಸಕರನ್ನು ದಾರಿ ತಪ್ಪಿಸಬೇಡಿ. ನೀರಿನ ಸಂಪರ್ಕಕ್ಕೆ ತಗುಲುವ ವೆಚ್ಚವನ್ನು ಬಿಬಿಎಂಪಿಯಿಂದ ಪ್ರತ್ಯೇಕವಾಗಿ ಭರಿಸಲಿ ಎಂದು ಆಗ್ರಹಿಸಿದರು. ಅಶೋಕ್ ಅವರ ಮಧ್ಯ ಪ್ರವೇಶಕ್ಕೆ ಡಿ.ಕೆ.ಶಿವಕುಮಾರ್ ನಕ್ಕು ಸುಮ್ಮನಾದರು.
ಆನಂತರ, ವಿಪಕ್ಷದ ಉಪನಾಯಕ ಅರವಿಂದ ಬೆಲ್ಲದ್, ಬೆಂಗಳೂರಿನಲ್ಲಿ ಟ್ಯಾಂಕರ್ ಗಳಲ್ಲಿ ಪೂರೈಸಲು ಸಾಕಷ್ಟು ನೀರು ಲಭ್ಯ ಇದೆ. ಆದರೆ ಜನರಿಗೆ ಪೂರೈಸಲು ನೀರು ಸಿಗುತ್ತಿಲ್ಲ. ಈ ವಿಚಾರವೇ ಅರ್ಥವಾಗುತ್ತಿಲ್ಲ. ಡಿ.ಕೆ.ಶಿವಕುಮಾರ್ ಪ್ರಭಾವಿಯಾಗಿದ್ದಾರೆ. ಟ್ಯಾಂಕರ್ ಲಾಬಿಯನ್ನು ಮಟ್ಟ ಹಾಕಲಿ ಎಂದು ಸಲಹೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಬೆಂಗಳೂರಿನ ನೀರಿನ ವಿಚಾರದಲ್ಲಿ ಏನೇಲ್ಲೇ ನಡೆಯುತ್ತದೆ ಎಂದು ಅಕ್ಕಪಕ್ಕ ಕುಳಿತ ಆರ್.ಅಶೋಕ್ ಮತ್ತು ಸುರೇಶ್ ಕುಮಾರ್ ರನ್ನು ಕೇಳಿ ತಿಳಿದುಕೊಳ್ಳಲಿ. ಅಲ್ಲದೆ, ಬೆಂಗಳೂರಿನ ನೀರಿನ ಬೇಡಿಕೆಯನ್ನೂ ಈಡೇರಿಸಲು ನಾವು ಮೇಕೆದಾಟು ಯೋಜನೆ ರೂಪಿಸಿದ್ದೇವೆ. ಅದರ ಅಂಗೀಕಾರಕ್ಕೆ ಬಿಜೆಪಿ ಸದಸ್ಯರು ಸಹಕಾರ ನೀಡಲಿ ಎಂದು ಮನವಿ ಮಾಡಿದರು.