ಕಾನೂನು ಬಾಹಿರ ಚಟುವಟಿಕೆಗಳ ಮೇಲೆ ಸಿಸಿಬಿ ದಾಳಿ: ಲಕ್ಷಾಂತರ ರೂ. ನಗದು, ಸ್ವತ್ತು ವಶ
ಬೆಂಗಳೂರು: ಕಾನೂನು ಬಾಹಿರವಾಗಿ ವಿದೇಶಿ ಸಿಗರೇಟ್ ಮಾರಾಟ, ಅಕ್ರಮ ಸಿಲಿಂಡರ್ ರಿಫಿಲ್ಲಿಂಗ್ ಹಾಗೂ ಇಸ್ಪೀಟ್ ಅಡ್ಡೆಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ಲಕ್ಷಾಂತರ ರೂ. ನಗದು ಹಾಗೂ ಸಿಗರೇಟ್, ಸಿಲಿಂಡರ್ ಗಳನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ವರದಿಯಾಗಿದೆ.
ವಿದೇಶಿ ಸಿಗರೇಟ್ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಕೋಣನಕುಂಟೆ ಠಾಣೆ ವ್ಯಾಪ್ತಿಯ ಭುವನೇಶ್ವರಿನಗರದಲ್ಲಿರುವ ಅಂಗಡಿ ಮತ್ತು ಪುಟ್ಟೇನಹಳ್ಳಿ ಠಾಣೆ ವ್ಯಾಪ್ತಿಯ ಇಂದ್ರಪ್ರಸ್ಥ ಕಟ್ಟಡದಲ್ಲಿರುವ ಎರಡು ಅಂಗಡಿಗಳ ಮೇಲೆ ದಾಳಿ ನಡೆಸಿ, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಉತ್ತರ ಭಾರತ ಮೂಲದ ಪರಸ್ಮಲ್(40) ಮತ್ತು ಮೊಂಟುಸಿಂಗ್(45) ಬಂಧಿತರು. ಆರೋಪಿಗಳಿಂದ 4 ಲಕ್ಷ ರೂ. ಮೌಲ್ಯದ ವಿದೇಶಿ ಸಿಗರೇಟ್‍ಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳು ವಿದೇಶಗಳಿಂದ ಅಕ್ರಮವಾಗಿ ಸಿಗರೇಟ್‍ಗಳನ್ನು ತರಿಸಿ, ನಗರದಲ್ಲಿ ಮಾರುತ್ತಿದ್ದರು. ಈ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಗೃಹ ಬಳಕೆ ಸಿಲಿಂಡರ್ ಗಳನ್ನು ಅಕ್ರಮವಾಗಿ ರಿಫಿಲ್ಲಿಂಗ್ ಮಾಡಿ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಕೋರಮಂಗಲದಲ್ಲಿರುವ ಶರಬೀಶ್ ಎಂಟರ್ ಪ್ರೈಸಸ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಈ ಸಂಬಂಧ ಹರೀಶ್ ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಯಿಂದ 14 ಲಕ್ಷ ರೂ. ಮೌಲ್ಯದ ವಿವಿಧ ಕಂಪೆನಿಯ 135 ಅಡುಗೆ ಸಿಲಿಂಡರ್ ಗಳು, ಎರಡು ರೀಫಿಲ್ಲಿಂಗ್ ರಾಡ್‍ಗಳು, ಒಂದು ತೂಕದ ಯಂತ್ರ, ಈಚರ್ ವಾಹನ ವಶಕ್ಕೆ ಪಡೆಯಲಾಗಿದೆ.
ಆರೋಪಿ ಹರೀಶ್, ಸರಕಾರದಿಂದ ಯಾವುದೇ ಅನುಮತಿ ಪಡೆಯದೆ ಲಿಯೋ, ಎಂವಿಆರ್, ಜ್ಯೋತಿ, ಅಗ್ನಿ ಸೂರ್ಯ ಗ್ಯಾಸ್ ಕಂಪೆನಿಗಳ ಸಿಲಿಂಡರ್ ಗಳನ್ನು ಅನಧಿಕೃತವಾಗಿ ದಾಸ್ತಾನು ಮಾಡಿ ರಿಫಿಲ್ಲಿಂಗ್ ಮಾಡುತ್ತಿದ್ದ. ಖಚಿತ ಈ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಜೂಜಾಟ ನಡೆಯುತ್ತಿದ್ದ ನಗರದ 2 ಕ್ಲಬ್‍ಗಳ ಮೇಲೆ ಸಿಸಿಬಿ ದಾಳಿ ನಡೆಸಿ 70ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿ, ಲಕ್ಷಾಂತರ ರೂ. ನಗದು ವಶಕ್ಕೆ ಪಡೆದುಕೊಂಡಿದೆ.
ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕೋಣನಕುಂಟೆ ಕಲ್ಚರಲ್ ಅಸೋಸಿಯೇಷನ್ ಕ್ಲಬ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, 26 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ಬಳಿಯಿದ್ದ 1 ಲಕ್ಷ ರೂ. ನಗದು ಜಪ್ತಿ ಮಾಡಿಕೊಳ್ಳಲಾಗಿದೆ. ಪುಲಕೇಶಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಯಂಗ್ ಮ್ಯಾನ್ ಇಂಡಿಯನ್ ಅಸೋಸಿಯೇಷನ್ ಆವರಣದಲ್ಲಿರುವ ಇಂಡಿಯನ್ ಪೋರ್ಕ್ ಅಸೋಸಿಯೇಷನ್ ಮೇಲೆ ದಾಳಿ ನಡೆಸಿ, 46 ಮಂದಿ ಆರೋಪಿಗಳನ್ನು ಬಂಧಿಸಿ 2.29 ಲಕ್ಷ ರೂ. ನಗದು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದ್ದಾರೆ.