ಬರಪರಿಹಾರ ನೀಡದೆ ಕಟುಕನಂತೆ ವರ್ತಿಸುತ್ತಿರುವ ಕೇಂದ್ರ ಬಿಜೆಪಿ ಸರ್ಕಾರ: ಸಿದ್ದರಾಮಯ್ಯ
ಬೆಂಗಳೂರು: ಬರಪರಿಹಾರ ಬಿಡುಗಡೆಗೆ ಕೇಂದ್ರ ಸರ್ಕಾರದ ಆರ್ಥಿಕ ದುಸ್ಥಿತಿ ಕಾರಣ ಎಂದು ಬಸವರಾಜ ಬೊಮ್ಮಾಯಿ ಅವರು ಹೇಳಬೇಕಾಗಿತ್ತು, ಬಾಯಿ ತಪ್ಪಿ ಕೇಂದ್ರ ಸರ್ಕಾರದ ಬದಲಿಗೆ ರಾಜ್ಯ ಸರ್ಕಾರ ಎಂದು ಹೇಳಿದಂತೆ ಕಾಣುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ರಾಜ್ಯ ಸರ್ಕಾರ ಬರ ಪರಿಹಾರ ಬಿಡುಗಡೆಗೆ ತಾಂತ್ರಿಕ ಕಾರಣಗಳ ನೆಪ ಹೇಳುತ್ತಿದೆ ಎಂಬ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಆರೋಪಕ್ಕೆ ಪತ್ರಿಕಾ ಹೇಳಿಕೆ ಮೂಲಕ ಮುಖ್ಯಮಂತ್ರಿಗಳು ತಿರುಗೇಟು ನೀಡಿದ್ದಾರೆ.
ರಾಜ್ಯ ಬಿಜೆಪಿಯಲ್ಲಿ ಮೂಲೆಗುಂಪಾಗಿರುವ ಬೊಮ್ಮಾಯಿ ಅವರಿಗೆ ತನ್ನ ಅಸ್ತಿತ್ವವನ್ನು ತೋರಿಸಲು ಇಂತಹ ಹುಸಿ ಆರೋಪಗಳು ಅನಿವಾರ್ಯವಾಗಿರಬಹುದು. ಆದರೆ ರಾಜ್ಯದ ರೈತರು ಬರಗಾಲದ ಬವಣೆಯಿಂದ ತತ್ತರಿಸಿಹೋಗಿದ್ದಾರೆ. ಬರಪರಿಹಾರದ ಕೆಲಸಗಳಿಗಾಗಿ 18,177 ಕೋಟಿ ರೂಪಾಯಿ ನೀಡಲು ಮೂರು ತಿಂಗಳುಗಳಿಂದ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಾ ಬಂದಿದ್ದೇವೆ. ಪತ್ರ ಬರೆದಿದ್ದೇವೆ, ಇಲ್ಲಿಯ ವರೆಗೆ ನಯಾಪೈಸೆ ಹಣ ನೀಡಿಲ್ಲ. ಕೇಂದ್ರ ಸರ್ಕಾರದ ಇಂತಹ ಕಠಿಣ ನಿಲುವಿಗೆ ಕಾರಣ ಒಂದೋ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ದ್ವೇಷದ ರಾಜಕಾರಣ ಇರಬಹುದು, ಇಲ್ಲದೆ ಇದ್ದರೆ ಕೇಂದ್ರ ಸರ್ಕಾರದ ಆರ್ಥಿಕ ದುಸ್ಥಿತಿ ಕಾರಣವಾಗಿರಬಹುದು. ಅದೇನು ಎನ್ನುವುದನ್ನು ಬೊಮ್ಮಾಯಿಯವರೇ ರಾಜ್ಯದ ಜನತೆಗೆ ಸ್ಪಷ್ಟೀಕರಣ ನೀಡಬೇಕು ಎಂದು ಹೇಳಿದ್ದಾರೆ.
ಮಳೆಗಾಲ ಕಳೆದುಹೋಗಿ ರಾಜ್ಯ ಬೇಸಿಗೆ ಕಾಲಕ್ಕೆ ಕಾಲಿಡುತ್ತಿದೆ. ಕಳೆದ ಆರು ತಿಂಗಳಿಂದ ಬರಪೀಡಿತ ಪ್ರದೇಶದ ರೈತರು ಕಡುಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಬರಪೀಡಿತ ರೈತ ಕುಟುಂಬಕ್ಕೆ ತಲಾ ಎರಡು ಸಾವಿರ ರೂಪಾಯಿ ನಗದಿನ ಜೊತೆ ಸಾಧ‍್ಯ ಇರುವ ಎಲ್ಲ ನೆರವನ್ನು ರಾಜ್ಯ ಸರ್ಕಾರ ನೀಡುತ್ತಿದೆ. ಅನ್ನಭಾಗ್ಯವೂ ಸೇರಿದಂತೆ ನಮ್ಮ ಗ್ಯಾರಂಟಿ ಯೋಜನೆಗಳಿಂದಾಗಿ ಜನತೆ ಕಷ್ಟ-ನಷ್ಟದ ನಡುವೆಯೂ ಉಸಿರಾಡುವಂತಾಗಿದೆ. ಹೀಗಿದ್ದರೂ ಕಟುಕನಂತೆ ವರ್ತಿಸುತ್ತಿರುವ ಕೇಂದ್ರದ ಬಿಜೆಪಿ ಸರ್ಕಾರ ಬರಪರಿಹಾರ ನೀಡದೆ ಸತಾಯಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರ ಸರ್ಕಾರದ ರಾಜ್ಯ ವಿರೋಧಿ ನೀತಿಯಿಂದಾಗಿ ತೆರಿಗೆ ಹಂಚಿಕೆಯಲ್ಲಿಯೂ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ. ಜಿಎಸ್‌ಟಿ ಪಾವತಿಯಲ್ಲಿ ಕರ್ನಾಟಕ ರಾಜ್ಯ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿ ಇದ್ದರೂ ತೆರಿಗೆ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ಮಾಡುತ್ತಿರುವ ಅನ್ಯಾಯ ಈಗ ಜಗಜ್ಜಾಹೀರಾಗಿದೆ. ಸ್ಥಳೀಯ ಸಂಸ್ಥೆಗಳು, ವಿಪತ್ತು ನಿರ್ವಹಣೆ ಮತ್ತು ಆರೋಗ್ಯ ಕ್ಷೇತ್ರಗಳಿಗೆ 2021-22ರಿಂದ 2023-24ರ ವರೆಗಿನ ಮೂರು ವರ್ಷಗಳ ಅವಧಿಗೆ 29,110 ಕೋಟಿ ರೂಪಾಯಿ ಬಿಡುಗಡೆ ಮಾಡಬೇಕಾಗಿತ್ತು, ಬಿಡುಗಡೆಗೊಳಿಸಿದ್ದು ಕೇವಲ 11,449 ಕೋಟಿ ರೂಪಾಯಿ ಮಾತ್ರ ಎಂದು ಹೇಳಿದ್ದಾರೆ.
ವಿಪತ್ತು ನಿರ್ವಹಣೆಗೆ ಅನುದಾನದ ರೂಪದಲ್ಲಿ ಕೇಂದ್ರ ಸರ್ಕಾರವೇ ನಿಗದಿಗೊಳಿಸಿರುವ ಮಾನದಂಡಗಳನ್ನು ಆಧರಿಸಿ ಹದಿನೈದನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ರೂ.4,369 ಕೋಟಿ ನೀಡಬೇಕಾಗಿತ್ತು. ಆದರೆ ಕಳೆದ ಮೂರು ವರ್ಷಗಳಲ್ಲಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ನೀಡಿರುವುದು ಕೇವಲ ರೂ.1,803 ಕೋಟಿ ಮಾತ್ರ. ಆರು ತಿಂಗಳುಗಳ ಹಿಂದೆ ಬಸವರಾಜ ಬೊಮ್ಮಾಯಿ ಅವರೇ ಮುಖ್ಯಮಂತ್ರಿಯಾಗಿದ್ದರು. ಆದರೆ ಕರ್ನಾಟಕಕ್ಕೆ ಕೇಂದ್ರ ಸರ್ಕಾರದಿಂದ ಆಗುತ್ತಿರುವ ಅನ್ಯಾಯದ ವಿರುದ್ದ ಸೊಲ್ಲೆತ್ತುವ ಧೈರ್ಯ ಮಾಡದೆ ರಾಜ್ಯದ ರೈತರಿಗೆ ದ್ರೋಹ ಎಸಗಿದ್ದರು. ಇವರಿಗೆ ನಮ್ಮ ಸರ್ಕಾರದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವ ನೈತಿಕತೆ ಎಲ್ಲಿದೆ? ಎಂದು ಪ್ರಶ್ನಿಸಿದ್ದಾರೆ.
ಬಿ.ಎಸ್. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರು ತಮ್ಮ ಅಧಿಕಾರಾವಧಿಯ ನಾಲ್ಕು ವರ್ಷಗಳ ಆಳ್ವಿಕೆಯಲ್ಲಿ ದುರಾಡಳಿತ ಮತ್ತು ಭ್ರಷ್ಟಾಚಾರದಿಂದಾಗಿ ಕರ್ನಾಟಕ ರಾಜ್ಯವನ್ನು ದಿವಾಳಿ ಸ್ಥಿತಿಗೆ ತಂದಿಟ್ಟಿದ್ದರು. ಸಾವಿರಾರು ಕೋಟಿ ರೂಪಾಯಿಗಳ ಬಾಕಿ ಬಿಲ್ ಗಳನ್ನು ನಾವು ಪಾವತಿ ಮಾಡಬೇಕಾಗಿದೆ. ಈಗ ತಮ್ಮ ಪಾಪದ ಹೊರೆಯನ್ನು ನಮ್ಮ ಸರ್ಕಾರದ ಹೆಗಲಿಗೆ ಹೊರಿಸಲು ಬೊಮ್ಮಾಯಿಯವರು ಒದ್ದಾಡುತ್ತಿದ್ದಾರೆ. ರಾಜ್ಯದ ಜನತೆಗೆ ಸತ್ಯ ತಿಳಿದಿದೆ ಎಂದಿದ್ದಾರೆ.
ಕನ್ನಡಿಗರು ಕೇಂದ್ರ ಸರ್ಕಾರಕ್ಕೆ 1 ರೂಪಾಯಿ ತೆರಿಗೆ ಪಾವತಿಸಿದರೆ ಕರ್ನಾಟಕದ ಅಭಿವೃದ್ಧಿಗಾಗಿ ವಾಪಾಸ್ ಸಿಗುತ್ತಿರುವುದು ಕೇವಲ 15 ಪೈಸೆ. ಕನ್ನಡಿಗರು ಬೆವರು ಸುರಿಸಿ ದುಡಿದ ದುಡ್ಡನ್ನು ಉತ್ತರದ ರಾಜ್ಯಗಳಿಗೆ ಹಂಚಿಕೆ ಮಾಡಲಾಗುತ್ತಿದೆ. ಆರ್ಥಿಕ ವರ್ಷ ಆರಂಭವಾಗಿ 6 ತಿಂಗಳು ಕಳೆದರೂ ಕೇಂದ್ರ ಸರ್ಕಾರದ ಸಹಯೋಗದ 61 ಯೋಜನೆಗಳಿಗೆ ಸಂಬಂಧಿಸಿದಂತೆ 23 ಇಲಾಖೆಗಳಿಗೆ ನಯಾಪೈಸೆ ಅನುದಾನ ಬಿಡುಗಡೆಯಾಗಿರಲಿಲ್ಲ. ಈ ಅನ್ಯಾಯವನ್ನು ಪ್ರಶ್ನಿಸುವ ಎದೆಗಾರಿಕೆ ಬಸವರಾಜ ಬೊಮ್ಮಾಯಿ ಅವರಿಗಿಲ್ಲ. ಇದಕ್ಕಾಗಿ ತಮ್ಮ ವೈಫಲ್ಯವನ್ನು ಮುಚ್ಚಿಡಲು ಬಿಜೆಪಿ ನಾಯಕರು ನಮ್ಮ ಸರ್ಕಾರದ ವಿರುದ್ಧ ಹುಸಿ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.