ಲಿಬಿಯಾಕ್ಕೆ ತೆರಳಲು ಪ್ರಯಾಣ ನಿರ್ಬಂಧ ಸಡಿಲ : ಡಾ.ಆರತಿ ಕೃಷ್ಣ
ಡಾ.ಆರತಿ ಕೃಷ್ಣ
ಬೆಂಗಳೂರು: ಭಾರತೀಯರು ಲಿಬಿಯಾ ದೇಶಕ್ಕೆ ತೆರಳಲು ಪ್ರಯಾಣ ನಿರ್ಬಂಧವನ್ನು ಭಾರತೀಯ ಸಚಿವಾಲಯವು ಸಡಿಲಗೊಳಿಸಿದೆ. ಕರ್ನಾಟಕದಿಂದ ಲಿಬಿಯಾ ದೇಶಕ್ಕೆ ಉದ್ಯೋಗಕ್ಕಾಗಿ ತೆರಳುವವರು ಯಾವುದೇ ನಿರ್ಬಂಧವಿಲ್ಲದೆ ತೆರಳಬಹುದು ಎಂದು ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ತಿಳಿಸಿದ್ದಾರೆ.
ಶುಕ್ರವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿರುವ ನಿರುದ್ಯೋಗಿ ಯುವಜನಾಂಗವು ಬದುಕನ್ನು ಕಟ್ಟಿಕೊಳ್ಳುವ ಕನಸಿನೊಂದಿಗೆ ಅನೇಕ ದೇಶಗಳಲ್ಲಿ ಪ್ರತಿಕೂಲ ಕೆಲಸದ ವಾತಾವರಣವಿದ್ದರೂ ಕೂಡ ಕೆಲಸವನ್ನರಸಿ ಹೋಗುತ್ತಿದ್ದಾರೆ ಎಂದು ಹೇಳಿದರು.
ಭಾರತೀಯರು ಆಫ್ರಿಕಾ ಖಂಡದಲ್ಲಿರುವ ಲಿಬಿಯಾ ದೇಶದಲ್ಲಿ ಪೆಟ್ರೋಲಿಯಂ ಉತ್ಪನ್ನದ ಕಂಪೆನಿಗಳಲ್ಲಿ ಕೆಲಸ ನಿರ್ವಹಿಸಲು ಅನೇಕ ವರ್ಷಗಳಿಂದ ನೆಲೆಸಿರುತ್ತಾರೆ. ಆದರೆ, 2011ರಲ್ಲಿ ನಡೆದ ಆಂತರಿಕ ರಾಜಕೀಯ ಸಂಘರ್ಷದಿಂದಾಗಿ ಸುಮಾರು 18 ಸಾವಿರಕ್ಕೂ ಹೆಚ್ಚು ಭಾರತೀಯರನ್ನು ವಾಪಸ್ಸು ಕರೆತರಲಾಗಿತ್ತು. 2014ರಲ್ಲಿ ಪರಿಸ್ಥಿತಿ ಇನ್ನಷ್ಟು ಉದ್ವಿಗ್ನಗೊಂಡಾಗ ಸುಮಾರು 4 ಸಾವಿರ ಜನರನ್ನು ಕರೆತರಲಾಗಿತ್ತು. ಆದರೆ, ತದನಂತರವೂ ಕೂಡ ಲಿಬಿಯಾದಲ್ಲಿ ಐಸಿಸ್ ಉಗ್ರರು ಮತ್ತು ಸರಕಾರದ ನಡುವೆ ಆಂತರಿಕ ಸಂಘರ್ಷ ಮುಂದುವರೆದಿತ್ತು ಎಂದು ಡಾ.ಆರತಿ ಕೃಷ್ಣ ಹೇಳಿದರು
2016ರಲ್ಲಿ ಎರಡೂ ಬಣಗಳ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಭಾರತೀಯ ಮೂಲದ ದಾದಿಯೊಬ್ಬರು ಮೃತಪಟ್ಟಿದ್ದರು. ಈ ಸಂದರ್ಭದಲ್ಲಿ ಭಾರತೀಯ ವಿದೇಶಾಂಗ ವ್ಯವಹಾರ ಸಚಿವಾಲಯವು 2016ರ ಮೇ23ರಂದು ಆದೇಶವನ್ನು ಹೊರಡಿಸಿ ಭಾರತೀಯರು ಯಾವುದೇ ಉದ್ದೇಶಗಳಿಗಾಗಿ ಲಿಬಿಯಾ ದೇಶಕ್ಕೆ ಪ್ರವಾಸ ಕೈಗೊಳ್ಳದಂತೆ ನಿರ್ಬಂಧವನ್ನು ಹೇರಿತ್ತು. ನಂತರದ ದಿನಗಳಲ್ಲಿ ಅಲ್ಲಿನ ಪ್ರಕ್ಷುಬ್ಧ ವಾತಾವರಣವು ತಿಳಿಗೊಂಡ ನಂತರ ಅಲ್ಲಿ ನೆಲೆಸಿದ ಭಾರತೀಯರು ವಿದೇಶಾಂಗ ವ್ಯವಹಾರ ಸಚಿವಾಲಯಕ್ಕೆ ಹಾಗೂ ರಾಜಕೀಯ ಮುಖಂಡರುಗಳ ಮೂಲಕ ಪ್ರಯಾಣ ನಿರ್ಬಂಧವನ್ನು ತೆರವುಗೊಳಿಸಲು ಮನವಿ ಮಾಡಿಕೊಂಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ ಎಂದು ಡಾ.ಆರತಿ ಕೃಷ್ಣ ತಿಳಿಸಿದರು
ಈ ನಡುವೆ ಅನಧಿಕೃತ ಮಾನವ ಸಂಪನ್ಮೂಲ ಸಂಸ್ಥೆಗಳು ಲಿಬಿಯಾ ದೇಶದ ಮೂಲಕ ವಿವಿಧ ದೇಶಗಳಿಗೆ ಅಕ್ರಮ ಮಾನವ ಕಳ್ಳಸಾಗಾಣಿಕೆ ವ್ಯವಹಾರವನ್ನು ಪ್ರಾರಂಭಿಸಿದ್ದರಿಂದಾಗಿ ವಿವಿಧ ದೇಶಗಳಲ್ಲಿನ ರಾಯಭಾರಿ ಕಚೇರಿಗಳು ಅನೇಕ ಭಾರತೀಯರ ಪಾಸ್ಪೋರ್ಟ್ಗಳನ್ನು ವಶಪಡಿಸಿಕೊಂಡಿದ್ದರು. ಇದರಿಂದಾಗಿ ಅನೇಕ ಭಾರತೀಯರು ಕೆಲಸ ಕಳೆದು ಕೊಂಡಿದ್ದಲ್ಲದೇ ತಮ್ಮ ಕುಟುಂಬಗಳಿಂದ ನೂರಾರು ದಿನಗಳು ದೂರವಾದ ಕಹಿ ನೆನಪುಗಳನ್ನು ಅನುಭವಿಸಿದ್ದಾರೆ ಎಂದು ಡಾ.ಆರತಿ ಕೃಷ್ಣ ಹೇಳಿದರು.
ಈ ನಡುವೆ ಅನೇಕ ಭಾರತೀಯರು ಅನಿವಾರ್ಯತೆಯ ಕಾರಣ ಲಿಬಿಯಾ ದೇಶದಲ್ಲಿ ಉಳಿದು ಕೆಲಸ ನಿರ್ವಹಿಸುತ್ತಿದ್ದರು. ಈ ಮಧ್ಯೆ ಭಾರತ ದೇಶಕ್ಕೆ ವಾಪಾಸ್ಸಾಗಿದ್ದ ಅನೇಕ ಜನರು ವಿಸಾ ಅವಧಿ ಮುಗಿಯುವ ಮುನ್ನ ಪುನಃ ಲಿಬಿಯಾ ದೇಶಕ್ಕೆ ವಾಪಾಸ್ಸಾಗುವ ಪ್ರಯತ್ನದಲ್ಲಿದ್ದರು. ಆದರೆ, ಪ್ರವಾಸ ನಿರ್ಬಂಧದ ಕಾರಣ ಕಾರ್ಯ ಸಾಧ್ಯವಾಗಿರಲಿಲ್ಲ ಎಂದು ಡಾ.ಆರತಿ ಕೃಷ್ಣ ತಿಳಿಸಿದರು.
ಈ ಹಿನ್ನೆಲೆಯಲ್ಲಿ ಅನೇಕ ಕರ್ನಾಟಕ ಮೂಲದ ಅನಿವಾಸಿ ಭಾರತೀಯರು ನಮ್ಮ ಕಚೇರಿಗೆ ಭೇಟಿ ನೀಡಿ ವಾಪಾಸ್ ಲಿಬಿಯಾ ದೇಶಕ್ಕೆ ತೆರಳಲು ಕೋರಿದ್ದರಿಂದ ಭಾರತೀಯ ವಿದೇಶಾಂಗ ವ್ಯವಹಾರ ಸಚಿವಾಲಯಕ್ಕೆ ಪ್ರವಾಸ ನಿರ್ಬಂಧವನ್ನು ತೆರವುಗೊಳಿಸಲು ಮನವಿ ಸಲ್ಲಿಸಿದ್ದೆ. ನಮ್ಮ ಮನವಿಯನ್ನು ಪರಿಗಣಿಸಿ ಭಾರತ ಸರಕಾರವು ಇತ್ತೀಚೆಗೆ ಪ್ರಯಾಣ ನಿರ್ಬಂಧವನ್ನು ಲಿಬಿಯಾಗೆ ತೆರಳುವ ಭಾರತೀಯರು ಅಲ್ಲಿನ ಭಾರತೀಯ ರಾಯಭಾರಿ ಕಚೇರಿಯ ಸಂಪರ್ಕದಲ್ಲಿರುವಂತೆ ಆದೇಶಿಸಿದೆ. ಇದರಿಂದಾಗಿ ಬಹಳ ದಿನಗಳಿಂದ ಸಂಕಷ್ಟದಲ್ಲಿದ್ದ ಅನೇಕ ಅನಿವಾಸಿ ಭಾರತೀಯರು ತಮ್ಮ ಭವಿಷ್ಯವನ್ನು ಮರುರೂಪಿಸಿಕೊಳ್ಳಲು ಅನುವು ಮಾಡಿದಂತಾಯಿತು ಎಂದು ಡಾ.ಆರತಿ ಕೃಷ್ಣ ಹೇಳಿದರು.
ಕರ್ನಾಟಕ ಮೂಲದ ಅನಿವಾಸಿ ಭಾರತೀಯ ಪೆಟ್ರೋಲಿಯಂ ಉತ್ಪನ್ನ ಕಂಪೆನಿಯ ಹಿರಿಯ ತಜ್ಞ ರಾಜರಾಂ ಮಾತನಾಡಿ, ಲಿಬಿಯಾಕ್ಕೆ ತೆರಳುವ ಪ್ರಯಾಣ ನಿರ್ಬಂಧವನ್ನು ತೆರವುಗೊಳಿಸಲು ಸುಮಾರು ವರ್ಷಗಳಿಂದ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಆದರೆ ಡಾ.ಆರತಿ ಕೃಷ್ಣರವನ್ನು ಸಂಪರ್ಕಿಸಿ ಮನವಿ ಮಾಡಿದ ಒಂದು ತಿಂಗಳೊಳಗೆ ಪ್ರಯಾಣ ನಿರ್ಬಂಧವನ್ನು ತೆರವುಗೊಳಿಸಿರುವುದಕ್ಕೆ ಅಭಿನಂದನೆಗಳು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅನಿವಾಸಿ ಭಾರತೀಯ ಸಮಿತಿಯ ಕಾರ್ಯದರ್ಶಿ ಲಕ್ಷ್ಮಮ್ಮ ಹಾಗೂ ಕರ್ನಾಟಕ ಮೂಲದ ಅನಿವಾಸಿ ಭಾರತೀಯರು ಉಪಸ್ಥಿತರಿದ್ದರು.