ಬರ ಅಧ್ಯಯನಕ್ಕೆ ಮುಂದಿನ ವಾರ ಕರ್ನಾಟಕಕ್ಕೆ ಕೇಂದ್ರ ಅಧ್ಯಯನ ತಂಡ ಭೇಟಿ
ಚಿತ್ರ - ಪಿಟಿಐ
ಕಲಬುರಗಿ, ಅ.3: ರಾಜ್ಯದಲ್ಲಿನ ಬರ ಅಧ್ಯಯನಕ್ಕೆ ಮುಂದಿನ ವಾರದಲ್ಲಿ ಕೇಂದ್ರದಿಂದ ಮೂರು ತಂಡಗಳು ಅಗಮಿಸುತ್ತಿವೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಮಂಗಳವಾರ ಕಲಬುರಗಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ 7 ಜಿಲ್ಲೆಗಳಲ್ಲಿನ ಕೃಷಿ ಹಾಗೂ ಜಲಾನಯನ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ರಾಜ್ಯದಲ್ಲಿ ಒಟ್ಟು 40 ಲಕ್ಷ ಹೆಕ್ಟೇರ್ ಕೃಷಿ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಅಂದಾಜು 28 ಸಾವಿರ ಕೋಟಿ ರೂ. ನಷ್ಟ ಸಂಭವಿಸಿದೆ. 2023ರ ಮುಂಗಾರಿನಲ್ಲಿ 111 ಲಕ್ಷ ಟನ್ ಆಹಾರ ಧಾನ್ಯಗಳಲ್ಲಿ ಉತ್ಪಾದನೆ ಗುರಿ ಹೊಂದಲಾಗಿತ್ತು. ಬರಗಾಲದಿಂದ 58 ಲಕ್ಷ ಟನ್ ಉತ್ಪಾದನಾ ಹಾನಿ ಅಂದಾಜಿಸಲಾಗಿದೆ ಎಂದು ಚಲುವರಾಯಸ್ವಾಮಿ ಮಾಹಿತಿ ನೀಡಿದರು.
ರಾಜ್ಯದ 31 ಜಿಲ್ಲೆಗಳ 161 ತಾಲೂಕುಗಳು ತೀವ್ರ ಹಾಗೂ 34 ತಾಲೂಕುಗಳು ಸಾಧಾರಣ ಬರ ಎಂದು ಗುರುತಿಸಲಾಗಿದ್ದು, ಒಟ್ಟಾರೆ 195 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿದೆ ಎಂದು ಅವರು ತಿಳಿಸಿದರು.
ಬರದಿಂದ ಬಿತ್ತನೆಗೆ ಅಡ್ಡಿಯಾದ ರೈತರಿಗೆ 48 ಕೋಟಿ ರೂಪಾಯಿ ಪರಿಹಾರ ವಿತರಿಸಲಾಗುವುದು. ನೆಟೆರೋಗದಿಂದ ಸಂಕಷ್ಟಕ್ಕೆ ಸಿಲಿಕಿದ ರೈತರಿಗೆ ಒಟ್ಟಾರೆ 224 ಕೋಟಿ ರೂ.ಪರಿಹಾರ ಮಂಜೂರು ಮಾಡಿದ್ದು, 2 ಹಂತಗಳಲ್ಲಿ ಈವರೆಗೆ 148 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಕಲಬುರಗಿ ಜಿಲ್ಲೆಯ 1.58 ಲಕ್ಷ ರೈತರಿಗೆ ಒಟ್ಟು 116 ಕೋಟಿ ರೂ. ಪರಿಹಾರ ಒದಗಿಸಲಾಗಿದೆ ಎಂದು ಚಲುವರಾಯಸ್ವಾಮಿ ಹೇಳಿದರು.
ರಾಜ್ಯದಲ್ಲಿ ಜುಲೈನಲ್ಲಿ ಶೇ.29 ಅಧಿಕ ಮಳೆಯಾದರೂ, ಆಗಸ್ಟ್ ನಲ್ಲಿ ಶೇ.73 ಕೊರತೆಯಾಗಿದೆ. ಹಾಗಾಗಿ ಬೆಳೆ ನಷ್ಟ ಹೆಚ್ಚಾಗಿದೆ. ಕಲಬುರಗಿ ಜಿಲ್ಲೆಯಲ್ಲಿ ಮಳೆಯ ಕೊರತೆ ಕೇವಲ ಶೇ.5ರಷ್ಟು. ಆದರೆ ಸಕಾಲದಲ್ಲಿ ಮಳೆಯಾಗದ ಕಾರಣ ಬೆಳೆ ಹಾನಿಯಾಗಿದ್ದು ಜಿಲ್ಲೆಯ 11 ತಾಲೂಕುಗಳು ಬರ ಪೀಡಿತ ಎಂದು ಘೋಷಣೆ ಮಾಡಲಾಗಿದೆ ಎಂದು ಚಲುವರಾಯಸ್ವಾಮಿ ತಿಳಿಸಿದರು.
ಕೃಷಿ ಭಾಗ್ಯ ಯೋಜನೆ ಈ ವರ್ಷ ಪುನಾರಂಂಭಿಸಿದ್ದು, ಇಲಾಖೆಯಿಂದ 100 ಕೋಟಿ ರೂ. ಅನುದಾನ ದೊರೆಯಲಿದ್ದು, ಮುಂದಿನ ವರ್ಷದಿಂದ ಹೆಚ್ಚಿನ ಅನುದಾನ ಮೀಸಲಿರಿಸಲಾಗುವುದು. ನವೋದ್ಯಮ ಯೋಜನೆಯಡಿ ಹೊಸ ಎಫ್ಪಿಒ ಗಳಿಗೆ 5 ರಿಂದ 20 ಲಕ್ಷ ರೂಪಾಯಿವರೆಗೆ ಇದ್ದ ಸಾಲದ ನೆರವನ್ನು 20-50 ಲಕ್ಷ ರೂ.ಗಳಿಗೆ ಏರಿಕೆ ಮಾಡಲಾಗಿದೆ. ಇದಕ್ಕಾಗಿ 10 ಕೋಟಿ ರೂ. ಮೀಸಲಿರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು