ಕೇಂದ್ರದ ತಪ್ಪು ನೀತಿಗಳೇ ಬೆಲೆ ಏರಿಕೆಗೆ ಕಾರಣ: ಮುಖ್ಯಮಂತ್ರಿ ಸಿದ್ದರಾಮಯ್ಯ
"ಬಿಜೆಪಿಗೆ ನಮ್ಮ ಸರಕಾರವನ್ನು ಪ್ರಶ್ನಿಸುವ ನೈತಿಕತೆ ಇಲ್ಲ"

ಬೆಳಗಾವಿ: ಕೇಂದ್ರದ ಬಿಜೆಪಿಯ ತಪ್ಪು ನೀತಿಗಳಿಂದಾಗಿ ಅಗತ್ಯ ಸಾಮಾಗ್ರಿಗಳ ಬೆಲೆ ಏರಿಕೆ ಹೆಚ್ಚಿದ್ದು, ಬಿಜೆಪಿಯವರು ನಮ್ಮ ಸರಕಾರವನ್ನು ಪ್ರಶ್ನಿಸುವ ಯಾವುದೇ ನೈತಿಕತೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶನಿವಾರ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಸೇರಿದಂತೆ ಅವಶ್ಯಕ ವಸ್ತುಗಳ ಬೆಲೆ ಏರಲು ಕೇಂದ್ರದ ಬಿಜೆಪಿ ಸರಕಾರದವರೇ ಕಾರಣ. ರಾಜ್ಯ ಸರಕಾರ ಹೆಚ್ಚಿಸಿರುವ ಹಾಲಿನ ದರದಿಂದ ರೈತರಿಗೆ ಲಾಭ ಹೋಗುತ್ತದೆ. ಪೆಟ್ರೋಲ್ ಹಾಗೂ ಡೀಸೆಲ್‍ನ ಕಚ್ಚಾತೈಲದ ಬೆಲೆಯ ಮೇಲೆ ದರ ನಿಗದಿಯಾಗುತ್ತದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕಾಲದಲ್ಲಿ ಒಂದು ಬ್ಯಾರೆಲ್ ಕಚ್ಚಾ ತೈಲಕ್ಕೆ 120 ಡಾಲರ್ ಇದ್ದಿದ್ದು, ಈಗ 65 ಡಾಲರ್ ಗೆ ಇಳಿದಿದೆ. ಅಂದು ಅಡುಗೆ ಅನಿಲ ಬೆಲೆ 400 ರೂ. ಇದ್ದು, 800ರೂ.ಗಳಿಗೂ ಮೀರಿದೆ. ಆದರೂ ಪೆಟ್ರೋಲ್ ಡೀಸೆಲ್ ಬೆಲೆಯನ್ನು ಕೇಂದ್ರ ಸರಕಾರ ಹೆಚ್ಚಿಸಿರುವ ಬಗ್ಗೆ ಜನರು ಪ್ರಶ್ನೆ ಕೇಳಬೇಕಿದೆ ಎಂದು ಅವರು ಹೇಳಿದರು.
ಸರಕಾರ ಆರ್ಥಿಕ ದಿವಾಳಿಯಾಗಿದೆ ಎಂಬ ಬಿಜೆಪಿ ಆರೋಪದಲ್ಲಿ ಹುರುಳಿಲ್ಲ. ಬಿಜೆಪಿಯವರ ಕಾಲದಲ್ಲಿ ಅನುದಾನವಿಲ್ಲದಿದ್ದರೂ, ಕಾಮಗಾರಿಗಳಿಗೆ ಮಂಜೂರಾತಿ ನೀಡಿ, ಟೆಂಡರ್ ಪ್ರಕ್ರಿಯೆ ಕೈಗೊಂಡಿದ್ದರು. ಈಗ ನಮಗೆ ಪಾಠ ಹೇಳುತ್ತಿದ್ದು, ಆರ್ಥಿಕ ದಿವಾಳಿಯಾಗಿದ್ದರೆ, ಅದಕ್ಕೆ ಬಿಜೆಪಿಯವರೇ ಕಾರಣ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.
ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಶೆಟ್ಟರ್ ಸರಕಾರದ ಅವಧಿಯಲ್ಲಿಯೇ ರಾಜ್ಯದ ಆರ್ಥಿಕತೆ ಕುಸಿದಿತ್ತು. ನಾವು ಹಿಂದಿನ ವರ್ಷಕ್ಕಿಂತ ಈ ಸಾಲಿನ ಬಜೆಟ್‍ನ ಪ್ರಮಾಣ ಸುಮಾರು 38 ಸಾವಿರ ಕೋಟಿ ರೂ.ಗಳಷ್ಟು ಹೆಚ್ಚಿಸಲಾಗಿದೆ. ಇದು ನಮ್ಮ ಸರಕಾರದ ಆರ್ಥಿಕ ದಿವಾಳಿತನವೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಮೋದಿಯವರು ಅಧಿಕಾರಕ್ಕೆ ಬರುವ ಮುಂಚೆ ದೇಶದ ಮೇಲೆ 53,11,000 ಕೋಟಿ ರೂ.ಸಾಲವಿತ್ತು. ಆದರೆ ಈಗ 200 ಲಕ್ಷ ಕೋಟಿ ರೂ.ಗೆ ಸಾಲ ಹೆಚ್ಚಿದೆ. ದೇಶದ ಸಾಲ ಮೊತ್ತ ನಾಲ್ಕು ಪಟ್ಟು ಹೆಚ್ಚಲು ನರೇಂದ್ರ ಮೋದಿಯವರೇ ಕಾರಣ ಎಂದು ಸಿದ್ದರಾಮಯ್ಯ ದೂರಿದರು.