ಸಿಇಟಿ-2024 ಫಲಿತಾಂಶ ಪ್ರಕಟ
2.74 ಲಕ್ಷ ಎಂಜಿನಿಯರಿಂಗ್, 2.15ಲಕ್ಷ ಬಿ.ಎಸ್ಸಿ(ಕೃಷಿ), 2.19 ಲಕ್ಷ ಅಭ್ಯರ್ಥಿಗಳು ವೆಟರ್ನರಿ ಕೋರ್ಸುಗಳಿಗೆ ಪ್ರವೇಶ ಪಡೆಯಲು ಅರ್ಹ
ಸಾಂದರ್ಭಿಕ ಚಿತ್ರ
ಬೆಂಗಳೂರು: ಎಂಜಿನಿಯರಿಂಗ್ ಸೇರಿದಂತೆ ವೃತ್ತಿಪರ ಕೋರ್ಸುಗಳ ಪ್ರವೇಶಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ನಡೆಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯ(ಸಿಇಟಿ-2024) ಫಲಿತಾಂಶವು ಶನಿವಾರದಂದು ಪ್ರಕಟಗೊಂಡಿದೆ.
ಸದ್ಯದ ಫಲಿತಾಂಶದ ಆಧಾರದಲ್ಲಿ 2,74,595 ಅಭ್ಯರ್ಥಿಗಳು ಎಂಜಿನಿಯರಿಂಗ್, 2,15,965 ಅಭ್ಯರ್ಥಿಗಳು ಬಿ.ಎಸ್ಸಿ(ಕೃಷಿ), 2,19,887 ವಿದ್ಯಾರ್ಥಿಗಳು ವೆಟರ್ನರಿ ಕೋರ್ಸುಗಳಿಗೆ ಪ್ರವೇಶ ಪಡೆಯಲು ಅರ್ಹರಾಗಿದ್ದಾರೆ. ಆದರೆ, ಅಭ್ಯರ್ಥಿಗಳ ಮೂಲ ಪ್ರಮಾಣಪತ್ರಗಳ ಪರಿಶೀಲನೆ ಮುಗಿಯುವವರೆಗೂ ಈ ಅರ್ಹತೆ ತಾತ್ಕಾಲಿಕ ಸ್ವರೂಪದ್ದಾಗಿರುತ್ತದೆ.
ಎಂಜಿನಿಯರಿಂಗ್ ಜತೆಗೆ ವೆಟರ್ನರಿ, ಕೃಷಿ ವಿಜ್ಞಾನ, ಫಾರ್ಮಸಿ, ನ್ಯಾಚುರೋಪಥಿ, ಯೋಗ ಮತ್ತು ಬಿ.ಎಸ್ಸಿ(ನರ್ಸಿಂಗ್ ) ಕೋರ್ಸುಗಳಿಗೆ ರಾಜ್ಯದ 737 ಕ್ಷೇತ್ರಗಳಲ್ಲಿ ಎ.18 ಮತ್ತು 19ರಂದು ಸಿಇಟಿ ಪರೀಕ್ಷೆಯನ್ನು ನಡೆಸಲಾಗಿತ್ತು. ಒಟ್ಟು 3,49,653 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಅಂತಿಮವಾಗಿ 3,10,314 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು.
ಸಿಇಟಿ ಪರೀಕ್ಷೆಯಲ್ಲಿ ಎಲ್ಲ ನಾಲ್ಕು ವಿಷಯಗಳಲ್ಲೂ ಪಠ್ಯಕ್ಕೆ ಹೊರತಾದ 50 ಪ್ರಶ್ನೆಗಳನ್ನು ಕೇಳಲಾಗಿತ್ತು. ವಿಷಯ ತಜ್ಞರ ನಿರ್ದೇಶನದ ಮೇರೆಗೆ ಈ ಪ್ರಶ್ನೆಗಳನ್ನು ಮೌಲ್ಯಮಾಪನದ ಸಂದರ್ಭದಲ್ಲಿ ಪರಿಗಣಿಸದೆ ಕೈಬಿಡಲಾಗಿದೆ. ಜತೆಗೆ ಭೌತಶಾಸ್ತ್ರ ಮತ್ತು ಗಣಿತದಲ್ಲಿ ತಲಾ 1 ಕೃಪಾಂಕ ನೀಡಲಾಗಿದೆ. ಪರಿಷ್ಕೃತ ಕೀ ಉತ್ತರಗಳ ಆಧಾರದ ಮೇಲೆ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ವಿದ್ಯಾರ್ಥಿಗಳು ಪ್ರಾಧಿಕಾರದ ಜಾಲತಾಣ http://kea.kar.nic.inನಲ್ಲಿ ಫಲಿತಾಂಶವನ್ನು ನೋಡಬಹುದು.
ಅಂಕ ದಾಖಲಿಸಿದವರ ಫಲಿತಾಂಶಕ್ಕೆ ತಡೆ: ಇದುವರೆಗೂ ಕೆಲವು ಅಭ್ಯರ್ಥಿಗಳು ತಮ್ಮ ಸಿಇಟಿ ಅರ್ಜಿಯಲ್ಲಿ ಜನ್ಮ ದಿನಾಂಕ, ದ್ವಿತೀಯ ಪಿಯುಸಿ ಅಂಕಗಳನ್ನು ನಮೂದಿಸಿಲ್ಲ. ಇಂಥವರ ಫಲಿತಾಂಶವನ್ನು ಸದ್ಯಕ್ಕೆ ತಡೆ ಹಿಡಿಯಲಾಗಿದೆ. ಇಂತಹ ಅಭ್ಯರ್ಥಿಗಳು ಪ್ರಾಧಿಕಾರದಪೋರ್ಟಲ್ನಲ್ಲಿ ಅಗತ್ಯ ವಿವರಗಳನ್ನು ತುಂಬಿದ ತಕ್ಷಣ ಫಲಿತಾಂಶವನ್ನು ಪ್ರಕಟಿಸಲಾಗುವುದು. ಆದುದರಿಂದ ಈ ಅಭ್ಯರ್ಥಿಗಳು ಆತಂಕಕ್ಕೆ ಒಳಗಾಗಬೇಕಾಗಿಲ್ಲ.
ಕೌನ್ಸೆಲಿಂಗ್: ಯುಜಿ ನೀಟ್ ಪರೀಕ್ಷೆಯ ಫಲಿತಾಂಶ ಮತ್ತು ಎಂಸಿಸಿ ಕೌನ್ಸೆಲಿಂಗ್ ವೇಳಾಪಟ್ಟಿಯನ್ನು ಗಣನೆಗೆ ತೆಗೆದುಕೊಂಡು, ಬಳಿಕ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಜಂಟಿ ಕೌನ್ಸೆಲಿಂಗ್ ನಡೆಸಲಿರುವ ದಿನಾಂಕಗಳನ್ನು ಪ್ರಕಟಿಸಲಾಗುವುದು.
`ನಾಟಾ’ ಬಳಿಕ ರ್ಯಾಂಕ್ ಪಟ್ಟಿ: ಆರ್ಕಿಟೆಕ್ಚರ್ ಕೋರ್ಸಿಗೆ ಪ್ರವೇಶ ಬಯಸಿರುವ ಅಭ್ಯರ್ಥಿಗಳಿಗೆ `ನಾಟಾ’(ಎನ್ಎಟಿಎ) ಪರೀಕ್ಷೆಯಲ್ಲಿ ಗಳಿಸಲಿರುವ ಅಂಕಗಳನ್ನು ಪರಿಗಣಿಸಿ ರಾಂಕಿಂಗ್ ಘೋಷಿಸಲಾಗುವುದು. ಬಿಪಿಟಿ, ಬಿಪಿಒ, ಬಿ.ಎಸ್ಸಿ(ಅಲೈಡ್ ಹೆಲ್ತ್ ಸೈನ್ಸಸ್) ಕೋರ್ಸುಗಳಿಗೆ ಸಂಬಂಧಿಸಿದ ಫಲಿತಾಂಶಕ್ಕೂ ಇದೇ ಸೂತ್ರವನ್ನು ಅನುಸರಿಸಲಾಗುವುದು.
ಅಭ್ಯರ್ಥಿಗಳು ಓಎಂಆರ್ ಉತ್ತರ ಪತ್ರಿಕೆಯಲ್ಲಿ ನಮೂದಿಸಿರುವ ಉತ್ತರಗಳನ್ನು ಮತ್ತು ಸರಿಯಾದ ಉತ್ತರಗಳನ್ನು ಪ್ರಾಧಿಕಾರದ ಜಾಲತಾಣದಲ್ಲಿ ಪ್ರಕಟಿಸಲಾಗುವುದು. ವಿದ್ಯಾರ್ಥಿಗಳು ಇವುಗಳನ್ನು ತಮಗೆ ಪರೀಕ್ಷಾ ದಿನದಂದೇ ನೀಡಿರುವ ಓಎಂಆರ್ ಉತ್ತರ ಪತ್ರಿಕೆಗಳ ಜತೆ ತಾಳೆ ಮಾಡಿ ನೋಡಿಕೊಳ್ಳಬಹುದು.
ಅಭ್ಯರ್ಥಿಗಳಿಗೆ ಮತ್ತು ಅವರ ಪೋಷಕರಿಗೆ ಸೀಟು ಹಂಚಿಕೆಯ ನಿಯಮಗಳು ಮತ್ತು ನಿಬಂಧನೆಗಳ ಬಗ್ಗೆ ಅರಿವು ಮೂಡಿಸಲು. ಸೀಟು ಹಂಚಿಕೆಯ ಮಾಹಿತಿ ಪುಸ್ತಕವನ್ನು ಕೌನ್ಸಿಲಿಂಗ್ ವೇಳಾಪಟ್ಟಿಯೊಂದಿಗೆ ಪ್ರಾಧಿಕಾರದ ವೆಬ್ಸೈಟಿನಲ್ಲಿ ಶೀಘ್ರದಲ್ಲಿ ಪ್ರಕಟಿಸಲಾಗುವುದು.
ಎಲ್ಲ ಕೋರ್ಸುಗಳಿಗೆ ಸರಕಾರವು ನೀಡುವ ಸೀಟ್ ಮ್ಯಾಟ್ರಿಕ್ಸ್ ಮತ್ತು ನಿಗದಿಪಡಿಸುವ ಶುಲ್ಕದ ವಿವರಗಳನ್ನು ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಾಧಿಕಾರದ ವೆಬ್ಸೈಟಿನಲ್ಲಿ ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು.
ರ್ಯಾಂಕ್ ಪಟ್ಟಿ ಪ್ರಕಟ: ಎಂಜಿನಿಯರಿಂಗ್ ಜತೆಗೆ ವೆಟರ್ನರಿ, ಕೃಷಿ ವಿಜ್ಞಾನ, ಫಾರ್ಮಸಿ, ನ್ಯಾಚುರೋಪಥಿ, ಯೋಗ ಮತ್ತು ಬಿ.ಎಸ್ಸಿ(ನರ್ಸಿಂಗ್) ವಿಭಾಗಗಳಲ್ಲಿ ಮೊದಲ ಹತ್ತು ರ್ಯಾಂಕ್ ಪಡೆದವರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಎಂಜಿನಿಯರಿಂಗ್ ವಿಭಾಗದಲ್ಲಿ ಹರ್ಷ ಕಾರ್ತಿಕೇಯ ವುಂಟುಕುರಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.
ನ್ಯಾಚುರೋಪಥಿ, ಯೋಗ ವಿಜ್ಞಾನದಲ್ಲಿ ಮತ್ತು ಕೃಷಿ ವಿಜ್ಞಾನ ವಿಭಾಗದಲ್ಲಿ ನಿಹಾರ್ ಎಸ್.ಆರ್., ವೆಟರ್ನರಿ ವಿಭಾಗ ಮತ್ತು ಫಾರ್ಮಸಿ ವಿಭಾಗ ಮತ್ತು ಬಿ.ಎಸ್ಸಿ(ನಸಿರ್ಂಗ್) ವಿಭಾಗದಲ್ಲಿ ಕಲ್ಯಾಣ್ ವಿ. ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.
"ಈ ವರ್ಷ ದ್ವಿತೀಯ ಪಿಯುಸಿಗೆ ಎರಡು ಪರೀಕ್ಷೆಗಳನ್ನು ಮಾಡಿದ್ದು, ಅವುಗಳಲ್ಲಿ ಅತೀ ಹೆಚ್ಚು ಅಂಕ ಪಡೆದಿರುವುದನ್ನೇ ರಾಂಕ್ ಪಟ್ಟಿಗೆ ಪರಿಗಣಿಸಲಾಗಿದೆ"
-ಎಚ್. ಪ್ರಸನ್ನ, ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ