ಎ.16,17ಕ್ಕೆ ಸಿಇಟಿ ಪರೀಕ್ಷೆ | ಜ.23ರಿಂದ ಅರ್ಜಿ ಸಲ್ಲಿಕೆ ಆರಂಭ
ಸಾಂದರ್ಭಿಕ ಚಿತ್ರ
ಬೆಂಗಳೂರು: 2025ನೆ ಸಾಲಿನ ಎಂಜಿನಿಯರಿಂಗ್, ಪಶುವೈದ್ಯಕೀಯ ಸೇರಿದಂತೆ ಇತರ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಎ.16 ಮತ್ತು 17ರಂದು ನಡೆಸಲಿದೆ. ಪರೀಕ್ಷೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಜ.23ರಿಂದ ಫೆ.21ರವರೆಗೆ ಅವಕಾಶ ನೀಡಲಾಗಿದೆ.
ಗುರುವಾರ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ ಪ್ರಕಟನೆ ಹೊರಡಿಸಿದ್ದು, ಎ.16ರಂದು ಬೆಳಿಗ್ಗೆ 10.30ಕ್ಕೆ ಭೌತವಿಜ್ಞಾನ, ಮಧ್ಯಾಹ್ನ 2.30ಕ್ಕೆ ರಸಾಯನ ವಿಜ್ಞಾನ ಹಾಗೂ ಎ.17ರಂದು ಬೆಳಿಗ್ಗೆ ಗಣಿತ ಮತ್ತು ಮಧ್ಯಾಹ್ನ ಜೀವವಿಜ್ಞಾನ ವಿಷಯಗಳ ಪರೀಕ್ಷೆಗಳು ನಡೆಯಲಿವೆ. ಎ.18ರಂದು ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ ಎಂದು ವಿವರಿಸಿದ್ದಾರೆ.
ಯೋಗ ಮತ್ತು ನ್ಯಾಚುರೋಪತಿ, ಬಿ-ಫಾರ್ಮ ಮತ್ತು ಫಾರ್ಮಾ-ಡಿ, ಕೃಷಿ ವಿಜ್ಞಾನ ಕೋರ್ಸ್ ಮತ್ತು ಬಿಎಸ್ಸಿ(ನರ್ಸಿಂಗ್) ಕೋರ್ಸ್ಗಳ ಪ್ರವೇಶಕ್ಕೂ ಸಿಇಟಿ ಪರೀಕ್ಷೆಯ ಅಂಕಗಳನ್ನು ಪರಿಗಣಿಸಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸಿಇಟಿ-2025ರ ಅರ್ಜಿಯು ಎಲ್ಲಾ ಕೋರ್ಸುಗಳಿಗೆ ಸಾಮಾನ್ಯ ಅರ್ಜಿಯಾಗಿರುವುದರಿಂದ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಪ್ರವೇಶಾತಿಗೂ ಅಭ್ಯರ್ಥಿಗಳು ಆನ್ಲೈನ್ ಮೂಲಕ ನೊಂದಾಯಿಸಿಕೊಂಡು, ಅರ್ಜಿ ಶುಲ್ಕ ಪಾವತಿಸುವುದು ಕಡ್ಡಾಯವಾಗಿರುತ್ತದೆ. ಅದೇ ರೀತಿ ಆರ್ಕಿಟೆಕ್ಚರ್, ಬಿಪಿಟಿ, ಬಿಪಿಒ, ಬಿಎಸ್ಸಿ ಅಲೈಡ್ ಹೆಲ್ತ್ ಸೈನ್ಸ್ ಕೋರ್ಸುಗಳ ಪ್ರವೇಶಾತಿಗೆ ಇದೇ ಅರ್ಜಿ ಅನ್ವಯವಾಗುತ್ತಿದ್ದು, ಆಸಕ್ತರು ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.
ಭದ್ರತೆಯ ದೃಷ್ಟಿಯಿಂದ ಸಿಇಟಿ ಅರ್ಜಿಯನ್ನು ಭರ್ತಿ ಮಾಡುವ ಮತ್ತು ದಾಖಲೆಗಳ ಪರಿಶೀಲನೆ ವಿಷಯದಲ್ಲಿ ಈ ಬಾರಿ ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರಿಂದ ಯಾರದ್ದೊ ಅರ್ಜಿಯನ್ನು ಇನ್ಯಾರೊ ಭರ್ತಿ ಮಾಡಲು ಸಾಧ್ಯವೇ ಇರುವುದಿಲ್ಲ. ಪ್ರತಿ ಹಂತದಲ್ಲಿ ಪ್ರಮಾಣಿಕರಿಸಿಯೇ ಮುಂದಿನ ಪ್ರಕ್ರಿಯೆ ನಡೆಸಲಾಗುತ್ತದೆ. ಇದರಿಂದ ಅಕ್ರಮಗಳಿಗೆ ತಡೆ ಹಾಕಿದಂತಾಗಲಿದೆ ಎಂದು ಅವರು ವಿವರಿಸಿದ್ದಾರೆ.
ಸಿಇಟಿಗೆ ಅರ್ಜಿ ಸಲ್ಲಿಸುವ ವಿಧಾನ:
► ಕೆಇಎ ವೆಬ್ಸೈಟ್ನಲ್ಲಿ ಲಾಗಿನ್ ಮಾಡುವಾಗ ಅಭ್ಯರ್ಥಿಗಳು ನಮೂದಿಸುವ ಮೊಬೈಲ್ ಸಂಖ್ಯೆಗೆ ಒಟಿಪಿ ಪ್ರಮಾಣೀಕರಿಸಿದ ನಂತರ ಅರ್ಜಿ ಭರ್ತಿ ಮಾಡಲು ಅವಕಾಶ ನೀಡಲಾಗುತ್ತದೆ. ಆದ್ದರಿಂದ ಅಭ್ಯರ್ಥಿಗಳು ಅವರದೇ ಮೊಬೈಲ್ ಸಂಖ್ಯೆಯನ್ನು ಮಾತ್ರ ನೀಡಬೇಕು. ಒಂದು ಮೊಬೈಲ್ ಸಂಖ್ಯೆಯನ್ನು ಒಬ್ಬ ಅಭ್ಯರ್ಥಿ ಮಾತ್ರ ಉಪಯೋಗಿಸಬಹುದು. ಮೊಬೈಲ್ ಸಂಖ್ಯೆ ಬದಲಾವಣೆ ಯಾವುದೇ ಹಂತದಲ್ಲಿ ಪರಿಗಣಿಸುವುದಿಲ್ಲ.
► ಆನ್ಲೈನ್ ಅರ್ಜಿಯಲ್ಲಿ ಅಭ್ಯರ್ಥಿಯು ನಮೂದಿಸುವ ಜಾತಿ / ಜಾತಿ ಆದಾಯ ಪ್ರಮಾಣ ಪತ್ರ ಮತ್ತು 371(ಜೆ) ಆರ್ಡಿ ಸಂಖ್ಯೆಯ ಆಧಾರದ ಮೇಲೆ ಅಭ್ಯರ್ಥಿಗಳ ಮೀಸಲಾತಿ ವಿವರಗಳನ್ನು ಪಡೆಯಲಾಗುವುದು.
► ಅದೇ ರೀತಿ ಸ್ಯಾಟ್(ಸ್ಟೂಡೆಂಟ್ಸ್ ಅಚೀವ್ಮೆಂಟ್ ಟ್ರ್ಯಾಕಿಂಗ್ ಸಿಸ್ಟಮ್) ಸಂಖ್ಯೆಯ ಆಧಾರದ ಮೇಲೆ ಅಭ್ಯರ್ಥಿಯ ವ್ಯಾಸಂಗದ ವಿವರಗಳನ್ನು ವೆಬ್ಸರ್ವೀಸ್ ಮೂಲಕ ಪಡೆಯಲಾಗುವುದು. ನಂತರ ಅಭ್ಯರ್ಥಿಗಳಿಗೆ ಕ್ಲೈಮ್ಸ್ ಸರ್ಟಿಫಿಕೇಟ್ ಡೌನ್ಲೋಡ್ ಮಾಡಿಕೊಳ್ಳಲು ಅವಕಾಶ ನೀಡಲಾಗುವುದು.
► ಕ್ಲೈಮ್ಸ್ ಸರ್ಟಿಫಿಕೇಟ್ ನಲ್ಲಿ ಸಕ್ಸಸ್ಪುಲಿ ವೇರಿಪೈಡ್ ಎಂದು ನಮೂದಿಸಿದ್ದರೆ ಅಂತಹ ಅಭ್ಯರ್ಥಿಗಳು ದಾಖಲೆ ಪರಿಶೀಲನೆಗೆ ಯಾವುದೇ ಕಚೇರಿಗೆ / ಕಾಲೇಜಿಗೆ ಹೋಗುವ ಅವಶ್ಯಕತೆ ಇರುವುದಿಲ್ಲ. ಸಿಇಟಿ ಫಲಿತಾಂಶದ ನಂತರ ವೆರಿಫಿಕೇಶನ್ ಸ್ಲಿಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
► ಕ್ಲೈಮ್ಸ್ ಸರ್ಟಿಫಿಕೇಟ್ ನಲ್ಲಿ ನಾಟ್ ವೈರಿಪೈಡ್ ಸೇರಿ ಬೇರೆ ಏನಾದರೂ ನಮೂದಾಗಿದ್ದರೆ, ಅಭ್ಯರ್ಥಿಗಳು ದ್ವಿತೀಯ ಪಿಯುಸಿ/12ನೇ ತರಗತಿಯನ್ನು ವ್ಯಾಸಂಗ ಮಾಡುತ್ತಿರುವ ಆಯಾ ಕಾಲೇಜಿಗೆ ಭರ್ತಿ ಮಾಡಿದ ಅರ್ಜಿಯನ್ನು ಮತ್ತು ಕ್ಲೇಮ್ಸ್ ಮಾಡಿರುವ ಎಲ್ಲ ಮೂಲ ದಾಖಲೆಗಳನ್ನು ಪ್ರಾಂಶುಪಾಲರಿಗೆ ತೋರಿಸಿ ಒಂದು ಸೆಟ್ ಪ್ರತಿಗಳನ್ನು ಕ್ಲೇಮ್ಸ್ ಸರ್ಟಿಫಿಕೇಟ್ ನೊಂದಿಗೆ ಸಲ್ಲಿಸುವುದು ಕಡ್ಡಾಯವಾಗಿದೆ. ಕಾಲೇಜಿನವರು ಕ್ಲೇಮ್ಸ್ ಸರ್ಟಿಫಿಕೇಟ್ ನೊಂದಿಗೆ ಪರಿಶೀಲನೆ ಮಾಡಿದ ನಂತರ ಅಭ್ಯರ್ಥಿಯ ವಿವರಗಳನ್ನು ಅನುಮೋದಿಸುತ್ತಾರೆ.
► ಪ್ರತಿ ಹಂತದ ಪ್ರಕ್ರಿಯೆ ಕುರಿತು ಅಭ್ಯರ್ಥಿಯ ಮೊಬೈಲ್ಗೆ ಸಂದೇಶ ಸ್ವೀಕೃತವಾಗುತ್ತದೆ.
► ಪ್ರಾಧಿಕಾರವು ರಾಜ್ಯದಲ್ಲಿರುವ ಎಲ್ಲಾ ಪಿಯುಸಿ ಕಾಲೇಜುಗಳಿಗೆ ಲಾಗಿನ್ ನೀಡಿ ಅಭ್ಯರ್ಥಿಗಳಿಂದ ಭರ್ತಿ ಮಾಡಿದ ಅರ್ಜಿಗಳನ್ನು ಪರಿಶೀಲಿಸಲು ಸೂಚಿಸಲಾಗಿದೆ. ಕಾಲೇಜಿನವರು ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ವಿವರಗಳನ್ನು ಪಡೆದು, ಪರಿಶೀಲನೆ ಮಾಡಲು ತತ್ರಾಂಶವನ್ನು ಸಿದ್ದಪಡಿಸಿದೆ.
► ಅಭ್ಯರ್ಥಿಗಳು ಬಿಇಒ ಕಚೇರಿಗೆ ಪರಿಶೀಲನೆಗೆ ಹೋಗುವ ಅವಶ್ಯಕತೆ ಇರುವುದಿಲ್ಲ.
► ವಿಶೇಷ ಕ್ಯಾಟಗರಿಗಳಾದ ಎನ್ಸಿಸಿ, ಕ್ರೀಡೆ, ಸೈನಿಕ, ಮಾಜಿ ಸೈನಿಕ, ಸಿಎಪಿಎಫ್, ಮಾಜಿ ಸಿಎಪಿಎಫ್, ಸ್ಕೌಟ್ಸ್ ಅಂಡ್ ಗೈಡ್ಸ್, ಆಂಗ್ಲೋ ಇಂಡಿಯನ್ಸ್ ಕೋಟದ ಅಡಿಯಲ್ಲಿ ಮೀಸಲಾತಿ ಬಯಸುವ ಅಭ್ಯರ್ಥಿಗಳಿಗೆ ಸಂಬಂಧಿಸಿದ ಪ್ರಮಾಣ ಪತ್ರಗಳನ್ನು ಕೆಇಎನಲ್ಲಿ ಖುದ್ದಾಗಿ ಸಲ್ಲಿಸಲು ಪ್ರತ್ಯೇಕವಾಗಿ ಪರೀಕ್ಷೆ ನಂತರ ದಿನಾಂಕಗಳನ್ನು ನೀಡಲಾಗುವುದು.
► ಈ ಬಾರಿ ವಿದ್ಯಾರ್ಥಿಗಳು ಯಾವುದೇ ದಾಖಲೆಗಳನ್ನು ಆನ್ಲೈನ್ನಲ್ಲಿ ಅಪಲೋಡ್ ಮಾಡುವ ಅಗತ್ಯವಿರುವುದಿಲ್ಲ.
ಡಿಪ್ಲೊಮಾ ಸಾಮಾನ್ಯ ಪ್ರವೇಶ ಪರೀಕ್ಷೆ(ಡಿಸಿಇಟಿ), ಪಿಜಿಸಿಇಟಿ ಮತ್ತು ಎಂ.ಫಾರ್ಮಾ ಕೋರ್ಸ್ಗಳ ಪ್ರವೇಶಕ್ಕೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಗಳ ದಿನಾಂಕಗಳನ್ನೂ ಪ್ರಕಟಿಸಲಾಗಿದೆ. ಆ ಪ್ರಕಾರ ಎಲ್ಲ ಸಂಬಂಧಪಟ್ಟ ಇಲಾಖೆಗಳೂ ಕೆಲಸ ಮಾಡಬೇಕಾಗುತ್ತದೆ ಎಂದು ಡಾ. ಎಂ.ಸಿ. ಸುಧಾಕರ್ ಸೂಚನೆ ನೀಡಿದ್ದಾರೆ.
ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಲ್ಯಾಟರಲ್ ಎಂಟ್ರಿ ಮೂಲಕ 2ನೇ ವರ್ಷ ಅಥವಾ 3ನೇ ಸೆಮಿಸ್ಟರ್ಗೆ ಸೇರಲು ಡಿಸಿಇಟಿ ಪರೀಕ್ಷೆ ಬರೆಯಬೇಕಾಗುತ್ತದೆ. ಅದಕ್ಕೆ ಅರ್ಜಿ ಸಲ್ಲಿಸಲು ಎಪ್ರಿಲ್ 24ರಿಂದ ಮೇ 10ರವರೆಗೆ ಅವಕಾಶ ನೀಡಲಾಗುತ್ತದೆ. ಈ ಪರೀಕ್ಷೆ ಮೇ.31ರಂದು ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಪಿಜಿಸಿಇಟಿ(ಎಂಇ, ಎಂಟೆಕ್, ಎಂ.ಆರ್ಕಿಟೆಕ್ಚರ್) ಕೋರ್ಸ್ಗಳ ಪ್ರವೇಶಕ್ಕೆ ಮೇ.31ರಂದು ಪರೀಕ್ಷೆ ನಡೆಸಲಾಗುತ್ತದೆ. ಇದಕ್ಕೆ ಅರ್ಜಿ ಸಲ್ಲಿಸಲು ಎ.24ರಿಂದ ಮೇ.10ರವರೆಗೆ ಅವಕಾಶ ನೀಡಲಾಗಿದೆ.
ಅದೇ ರೀತಿ ಎಂಸಿಎ ಮತ್ತು ಎಂಬಿಎ ಕೋರ್ಸ್ಗಳ ಪ್ರವೇಶಕ್ಕೆ ಜೂ.22ರಂದು ಪರೀಕ್ಷೆ ನಡೆಸಲಾಗುತ್ತದೆ. ಇದಕ್ಕೆ ಎ.24ರಿಂದ ಜೂನ್ 10ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಎಂ.ಫಾರ್ಮ ಮತ್ತು ಫಾರ್ಮಾ-ಡಿ ಕೋರ್ಸ್ಗಳ ಪ್ರವೇಶಕ್ಕೆ ಜೂ.22ರಂದು ಪರೀಕ್ಷೆ ನಡೆಸಲಾಗುತ್ತದೆ. ಎ.24ರಿಂದ ಜೂ.10ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಹುತೇಕ ಇದೇ ದಿನಾಂಕಗಳಂದೇ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಇದರಲ್ಲಿ ಯಾವ ಬದಲಾವಣೆಯೂ ಇರುವುದಿಲ್ಲ ಎಂದು ಡಾ. ಎಂ.ಸಿ. ಸುಧಾಕರ್ ತಿಳಿಸಿದ್ದಾರೆ.