ಚೈತ್ರಾ ಕುಂದಾಪುರ ವಂಚನೆ ಪ್ರಕರಣ: ದೂರುದಾರ ಗೋವಿಂದ ಬಾಬು ಪೂಜಾರಿಗೆ ಸಿಸಿಬಿ ಬುಲಾವ್
ಬೆಂಗಳೂರು, ಸೆ.18: ಬಿಜೆಪಿ ವಿಧಾನ ಸಭಾ ಕ್ಷೇತ್ರದ ಟಿಕೆಟ್ ಕೊಡಿಸುವುದಾಗಿ ಹೇಳಿ 5 ಕೋಟಿ ರೂ. ವಂಚನೆ ಆರೋಪ ಸಂಬಂಧ ದೂರುದಾರ ಗೋವಿಂದ ಬಾಬು ಪೂಜಾರಿಗೆ ಮತ್ತೆ ವಿಚಾರಣೆಗೆ ಹಾಜರಾಗಲು ಸಿಸಿಬಿ ಪೊಲೀಸರು ಸೂಚಿಸಿದ್ದಾರೆ ಎನ್ನಲಾಗಿದೆ.
ಸಿಸಿಬಿ ತನಿಖಾಧಿಕಾರಿಗಳು ಗೋವಿಂದ ಪೂಜಾರಿಯ ಸಂಪೂರ್ಣ ಹಣದ ವಿವರ ಕಲೆ ಹಾಕುತ್ತಿದ್ದಾರೆ. ಹಣದ ಆದಾಯ ಮೂಲದ ಬಗ್ಗೆಯೂ ಮಾಹಿತಿ ಕೇಳಿದ್ದು, ಸಾಲ ಮಾಡಿ ಹಣ ಕೊಟ್ಟಿರುವೆ ಎಂದು ಈಗಾಗಲೇ ಗೋವಿಂದ ಪೂಜಾರಿ ತಿಳಿಸಿದ್ದಾರೆನ್ನಲಾಗಿದೆ.
ಸದ್ಯ ಅದರ ಬಗ್ಗೆಯೂ ಸಿಸಿಬಿ ಪೊಲೀಸರು ತನಿಖೆ ನಡೆಸಲಿದ್ದಾರೆ. ಬ್ಯಾಂಕ್ ನಿಂದ ಆ ಸಾಲದ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ನಗದು ರೂಪದಲ್ಲಿ ಹಣ ನೀಡಿರುವ ಹಿನ್ನೆಲೆ ಈ ಎಲ್ಲಾ ಮಾಹಿತಿ ನೀಡಿಬೇಕಿದೆ. ಎಲ್ಲಾ ದಾಖಲಾತಿಗಳನ್ನ ಸಲ್ಲಿಸುವಂತೆ ಸಿಸಿಬಿ ಪೊಲೀಸರು ಗೋವಿಂದ ಬಾಬುಗೆ ತಿಳಿಸಿದ್ದಾರೆ.
ಈ ಪ್ರಕರಣ ಸಂಬಂಧ ಈಗಾಗಲೇ ಮಹಜರು ಪ್ರಕ್ರಿಯೆ ನಡೆಸಲಾಗಿದೆ. ವಿಜಯನಗರದ ನಿವಾಸ, ಕೆಕೆ ಗೆಸ್ಟ್ ಹೌಸ್, ಗೋವಿಂದ ಬಾಬು ಪೂಜಾರಿ ಕಚೇರಿ ಸೇರಿ ಹಲವೆಡೆ ಮಹಜರು ನಡೆಸಲಾಗಿದೆ. ಸದ್ಯ ಐದು ಕೋಟಿ ಮೂಲದ ಹುಡುಕಾಟದಲ್ಲಿ ಸಿಸಿಬಿ ಇದೆ.