ಬಿಜೆಪಿ ಟಿಕೆಟ್ ಕೊಡಿಸುವುದಾಗಿ 185 ಕೋಟಿ ರೂ. ಅವ್ಯವಹಾರ, 17ಕ್ಕೂ ಹೆಚ್ಚು ಮಂದಿಗೆ ವಂಚಿಸಿದ ಚೈತ್ರಾ ಕುಂದಾಪುರ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಗಂಭೀರ ಆರೋಪ
“ವಂಚನೆ ತಂಡದಲ್ಲಿರುವ ಎಲ್ಲರೂ ಬಿಜೆಪಿ ಮತ್ತು ಆರೆಸ್ಸೆಸ್ ಕಾರ್ಯಕರ್ತರು”
ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಸುದ್ದಿಗೋಷ್ಠಿ
ಮೈಸೂರು: ಚೈತ್ರಾ ಕುಂದಾಪುರ ಅವರಿಂದ ಒಟ್ಟು 17ಕ್ಕೂ ಹೆಚ್ಚು ಜನರು ಮೋಸ ಹೋಗಿದ್ದಾರೆ. 23 ಮಂದಿಗೆ ಟಿಕೆಟ್ ಕೊಡಿಸಿ ಅವರಿಂದ ಹಣ ಪಡೆದಿದ್ದಾರೆ. 40 ಜನರು ಈ ಟಿಕೆಟ್ ಪಡೆಯುವ ವ್ಯವಹಾರದಲ್ಲಿ ಭಾಗಿಯಾಗಿದ್ದಾರೆ. 185 ಕೋಟಿ ರೂ. ವ್ಯವಹಾರ ನಡೆದಿದೆ. ಟಿಕೆಟ್ ನೀಡಿ ಕೋಟ್ಯಂತರ ರೂ. ಪಡೆಯಲಾಗಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದ್ದಾರೆ.
ನಗರದ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 9 ಜನರ ತಂಡದಿಂದ ಮೋಸ ಮಾಡಲಾಗಿದೆ. ಇವರೆಲ್ಲಾ ಬಿಜೆಪಿ ಹಾಗೂ ಆರೆಸ್ಸೆಸ್ ಕಾರ್ಯಕರ್ತರು. ಇನ್ನೆರಡು ದಿನಗಳಲ್ಲಿ ಚೈತ್ರಾ ಕುಂದಾಪುರ ಪಡೆದಿರುವ ಹಣವನ್ನು ಯಾರಿಗೆ ಕೊಟ್ಟಿದ್ದಾರೆ ಎಂಬುದನ್ನು ಪೊಲೀಸರು ಬಹಿರಂಗಪಡಿಸಲಿದ್ದಾರೆ ಎಂದು ತಿಳಿಸಿದರು.
ಚೈತ್ರಾ ಕುಂದಾಪುರ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಆರಗ ಜ್ಞಾನೇಂದ್ರ ಜೊತೆ ನೇರ ಸಂಪರ್ಕ ಹೊಂದಿದ್ದಾರೆ. ಸಿ.ಟಿ.ರವಿ, ಬಿ.ಎಸ್.ಯಡಿಯೂರಪ್ಪ, ಸೂಲಿಬೆಲೆ ಜೊತೆ ಈಕೆಯ ಸಂಬಂಧ ಏನು ಎಂಬುದನ್ನು ಸ್ಪಷ್ಟಪಡಿಸಬೇಕು. ಪಿಎಸ್ಐ ಹಗರಣಕ್ಕೂ ಚೈತ್ರಾಗೂ ಸಂಬಂಧವಿದೆಯಾ ಎಂಬುದರ ಬಗ್ಗೆ ತನಿಖೆಯಾಗಬೇಕು ಎಂದು ಹೇಳಿದರು.
ಚೈತ್ರಾ ಪಿಎಸ್ಐ ಹಗರಣದಲ್ಲಿ ಹಾಗೂ ನಾಲ್ಕಕ್ಕೂ ಹೆಚ್ಚು ಹಗರಣದಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಇದೆ. ಚೈತ್ರಾಗೆ ಜೈಲಿನಲ್ಲಿರುವ ಕೆಲವರ ಸಂಪರ್ಕ ಇದೆ. ಈ ಬಗ್ಗೆ ನಮ್ಮ ಸರಕಾರದಿಂದ ಪ್ರಾಮಾಣಿಕ ತನಿಖೆ ಮಾಡಿಸುತ್ತೇವೆ ಎಂದು ಲಕ್ಷ್ಮಣ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮೈಸೂರು ಭಾಗದ ಇಬ್ಬರು ರಾಜಕಾರಣಿಗಳು ಚೈತ್ರಾ ಕುಂದಾಪುರ ಮೂಲಕ ಹಣ ಕೊಟ್ಟು ಬಿಜೆಪಿ ಟಿಕೆಟ್ ಪಡೆದಿದ್ದಾರೆ. ಆ ಇಬ್ಬರು ಕೂಡ ಮೈಸೂರು ಗ್ರಾಮಾಂತರ ಭಾಗದವರು. ಶೀಘ್ರದಲ್ಲೇ ಎಲ್ಲರ ಹೆಸರನ್ನು ಬಹಿರಂಗ ಪಡಿಸುತ್ತೇವೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯ್ಕುಮಾರ್, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ರಾಮು, ಮಾಧ್ಯಮ ವಕ್ತಾರ ಕೆ.ಮಹೇಶ, ಗಿರೀಶ್ ಉಪಸ್ಥಿತರಿದ್ದರು.
ಚೈತ್ರಾ ಕುಂದಾಪುರ ಹೇಳಿಕೆ ಆಧಾರದ ಮೇಲೆ ಚಕ್ರವರ್ತಿ ಸೂಲಿಬೆಲೆ, ಆರಗ ಜ್ಞಾನೇಂದ್ರರನ್ನೂ ಬಂಧಿಸಬೇಕು. ಪಿಎಸ್ಐ ನೇಮಕಾತಿ ಹಗರಣ ಕುಲಪತಿ ನೇಮಕಾತಿ ಹಗರಣವನ್ನು ಇದರ ವ್ಯಾಪ್ತಿಗೆ ತರಬೇಕು. ಬಿಜೆಪಿ ಸರಕಾರದ ಅವಧಿಯ ಲೋಕಸೇವಾ ಆಯೋಗದ ಸದಸ್ಯರ ನೇಮಕಾತಿಯಲ್ಲೂ ಅವ್ಯವಹಾರವಾಗಿದೆ. ತನಿಖೆ ಮಾಡಿದರೆ ದೊಡ್ಡ ಹಗರಣ ಬಯಲಿಗೆ ಬರಲಿದೆ. ಈ ಸಂಬಂಧ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ನಿವೃತ್ತ ನ್ಯಾಯಾಧೀಶರ ಮೂಲಕ ತನಿಖೆ ನಡೆಸುವಂತೆ ಮನವಿ ಮಾಡುತ್ತೇವೆ.
-ಡಾ.ಬಿ.ಜೆ.ವಿಜಯ್ ಕುಮಾರ್, ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ