ಚೈತ್ರಾ ಕುಂದಾಪುರ ವಂಚನೆ ಪ್ರಕರಣ | ಮುಧೋಳದಲ್ಲಿ ಕಾರು ಪತ್ತೆ, ಸಿಸಿಬಿ ವಶಕ್ಕೆ
ಬಾಗಲಕೋಟೆ: ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್ ನೀಡುವುದಾಗಿ ನಂಬಿಸಿ ಕೋಟ್ಯಂತರ ರೂ. ವಂಚಿಸಿದ ಪ್ರಕರಣದ ಚೈತ್ರಾ ಕುಂದಾಪುರ ತಮ್ಮ ವಂಚನೆಯ ಹಣದಿಂದ ಖರೀದಿಸಿದ್ದಾರೆ ಎನ್ನಲಾಗಿರುವ ಕಾರು ಬಾಗಲಕೋಟೆ ಜಿಲ್ಲೆಯಲ್ಲಿ ಮುಧೋಳ ತಾಲೂಕಿನಲ್ಲಿ ಪತ್ತೆಯಾಗಿರುವುದು ವರದಿಯಾಗಿದೆ.
ಮುಧೋಳ ತಾಲೂಕಿನಲ್ಲಿರುವ ಕಿರಣ್ ಎಂಬುವರು ಡ್ರೈವಿಂಗ್ ಸ್ಕೂಲ್ ನಡೆಸುತ್ತಿದ್ದು, ಆತನಿಗೆ ಕಾರನ್ನು ಮಹಾರಾಷ್ಟ್ರದ ಸೊಲ್ಲಾಪುರದಿಂದ ಕಾರನ್ನು ತಂದು ಕೆಲ ದಿನಗಳ ಮಟ್ಟಿಗೆ ಕಿರಣ್ ಅವರ ಮನೆಯಲ್ಲೇ ಇಟ್ಟುಕೊಳ್ಳುವಂತೆ ಚೈತ್ರಾ ಸೂಚಿಸಿದ್ದರು ಎನ್ನಲಾಗಿದೆ. ಹಾಗಾಗಿ, ಆತ ಸೊಲ್ಲಾಪುರದಿಂದ ಕಾರನ್ನು ತಂದು, ಮುಧೋಳದಲ್ಲಿರುವ ತನ್ನ ಮನೆಯ ಮುಂದೆ ನಿಲ್ಲಿಸಿಕೊಂಡಿದ್ದ ಎನ್ನಲಾಗಿದೆ.
ಪ್ರಕರಣ ತನಿಖೆ ನಡೆಸುತ್ತಿರುವ ಪೊಲೀಸರು, ಮುಧೋಳದಲ್ಲಿರುವ ಕಾರನ್ನು ಪತ್ತೆ ಹಚ್ಚಿ, ಅದನ್ನು ಜಪ್ತಿ ಮಾಡಿದ್ದಾರೆ. ಕಿರಣ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ʼʼಯಾವುದೇ ಹಣದ ವ್ಯವಹಾರ ನಡೆದಿಲ್ಲʼʼ
ʼʼಮುಧೋಳಕ್ಕೆ ಬಂದಿದ್ದಾಗ ನಮ್ಮ ಮನೆಗೂ ಚೈತ್ರಾಳನ್ನು ಕರೆಸಿದ್ದೆ. ಅದು ಬಿಟ್ಟರೆ ನನ್ನ, ಚೈತ್ರಾ ಕುಂದಾಪುರ ಮಧ್ಯೆ ಯಾವುದೇ ಹಣದ ವ್ಯವಹಾರ ನಡೆದಿಲ್ಲ. ಎಲ್ಲಾ ವಿಚಾರಗಳ ಬಗ್ಗೆ ಸಿಸಿಬಿ ಪೊಲೀಸರು ಮಾಹಿತಿ ಕೇಳಿದರು. ನಾನು ಯಾವುದೇ ತನಿಖೆಗೂ ಸಿದ್ಧ. ಇಂತಹ ಕೆಲಸ ಮಾಡುತ್ತಾರೆ ಅಂತಾ ಗೊತ್ತಿದ್ದರೆ ಅವರ ಸಹವಾಸ ಮಾಡುತ್ತಿರಲಿಲ್ಲʼʼ ಎಂದು ಕಿರಣ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾನೆ.