ರಾಜ್ಯ ಸರಕಾರದ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕೇಂದ್ರ ಸಚಿವರಿಗೆ ಪತ್ರ : ಛಲವಾದಿ ನಾರಾಯಣಸ್ವಾಮಿ
ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರಕಾರದ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕೇಂದ್ರ ಸರಕಾರದ ಕಾನೂನು ಸಚಿವರಿಗೆ ಪತ್ರ ಬರೆಯುತ್ತಿದ್ದೇನೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರಕಟಿಸಿದರು.
ಶನಿವಾರ ಇಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರವು ಈಚೆಗೆ ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಾಕಿದವರು, ಕಲ್ಲು ತೂರಿದವರು, ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಬಂದು ಗಲಭೆ ಮಾಡಿದ 100-150ಜನ ಕ್ರಿಮಿನಲ್‍ಗಳ ಮೇಲಿನ ಕೇಸುಗಳನ್ನು ಹಿಂಪಡೆದಿದೆ. ಈ ಮೂಲಕ ಒಂದು ಸಮುದಾಯವನ್ನು ಓಲೈಕೆ ಮಾಡಲು ತುಷ್ಟೀಕರಣ ರಾಜಕೀಯ ಮಾಡಿದೆ ಎಂದು ಖಂಡಿಸಿದರು.
ಇದು ಸರಕಾರ ಮಾಡಿದ ಅಕ್ಷಮ್ಯ ಅಪರಾಧ. ಸಂಘಟಿತ ಅಪರಾಧ ಮಾಡಿದವರ ಕೇಸ್ ವಾಪಸ್ ಪಡೆಯುವ ಮೂಲಕ ಇನ್ನೊಂದು ಸಂಘಟಿತ ಅಪರಾಧವನ್ನು ಸಚಿವ ಸಂಪುಟ ಮಾಡಿದೆ. ಇದರ ಬಗ್ಗೆ ‘ತುಷ್ಟೀಕರಣ ರಾಜಕೀಯ’ ಎಂದು ಜನರ ಗಮನ ಸೆಳೆಯುತ್ತೇವೆ. ಕೇಸ್ ವಾಪಸಾತಿಯ ಸಂಬಂಧ ಹೈಕೋರ್ಟ್ ಮೆಟ್ಟಿಲೇರಲಿದ್ದೇವೆ. ಅಲ್ಲಿ ನಮ್ಮ ಪಕ್ಷದಿಂದ ಆಕ್ಷೇಪ ಸಲ್ಲಿಸುತ್ತೇವೆ ಎಂದು ತಿಳಿಸಿದರು.
ಕೇಸು ದಾಖಲಾಗುತ್ತಿದ್ದಂತೆ ಬಿಜೆಪಿ ಶಾಸಕ ಮುನಿರತ್ನ ಬಂಧನ ಆಗಿದೆ. ಆದರೆ, ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಬಂಧಿಸದೆ ಬಿಟ್ಟಿದ್ದು, ಶಾಸಕರನ್ನು ರಕ್ಷಣೆಯಲ್ಲಿ ಸರಕಾರ ನಿರತವಾಗಿದೆ. ನಮ್ಮ ಶಾಸಕರು ಮಾತ್ರ ತಪ್ಪಿತಸ್ಥರು, ಅವರೆಲ್ಲ ಸತ್ಯಹರಿಶ್ಚಂದ್ರರ ಮಕ್ಕಳು. ಶಾಸಕ ಚನ್ನಾರೆಡ್ಡಿ ಮೇಲೆ ಎಫ್‍ಐಆರ್ ಆಗಿ 3 ತಿಂಗಳಾಗಿದೆ ಎಂದು ಟೀಕಿಸಿದರು.