ʼಮುಡಾ ಹಗರಣʼ ಪ್ರಕರಣವನ್ನು ಸಿಬಿಐಗೆ ಕೊಡಿ : ಛಲವಾದಿ ನಾರಾಯಣಸ್ವಾಮಿ ಆಗ್ರಹ
"ಭ್ರಷ್ಟಾಚಾರ ಅಪರಾಧವಲ್ಲ ಎಂಬ ಮನಸ್ಥಿತಿಗೆ ಕಾಂಗ್ರೆಸ್ ಪಕ್ಷ ಬಂದಂತಿದೆ"
ಬೆಂಗಳೂರು : ʼಮೈಸೂರು ಮುಡಾ ನಿವೇಶನ ಹಂಚಿಕೆ ಹಗರಣವನ್ನು ಸಿಬಿಐಗೇ ಕೊಡಬೇಕು. ಹಾಗಿದ್ದರೆ ಮಾತ್ರ ಸತ್ಯಾಂಶ ಹೊರಬರಲು ಸಾಧ್ಯʼ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಪ್ರತಿಪಾದಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ತನಿಖೆಯನ್ನು ಸಿಬಿಐಗೆ ಕೊಡದೆ ಇದ್ದಲ್ಲಿ ಕೇಸನ್ನು ಸಂಪೂರ್ಣವಾಗಿ ಮುಚ್ಚಿ ಹಾಕುವ ವ್ಯವಸ್ಥೆ ನಡೆಯುತ್ತಿದೆ ಎಂಬ ಅನುಮಾನವಿದೆ ಎಂದು ತಿಳಿಸಿದರು.
ಕಾಂಗ್ರೆಸ್ಸಿನವರಿಗೆ ಮಾನವೀಯತೆ ಇದ್ದರೆ ವಾಲ್ಮೀಕಿ ಜಯಂತಿಯನ್ನು ಪಶ್ಚಾತ್ತಾಪ ದಿನ ಎಂದು ಆಚರಣೆ ಮಾಡಬೇಕಿತ್ತು ಎಂದ ಅವರು, ಮುಖ್ಯಮಂತ್ರಿಗಳು ತಕ್ಷಣ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು. ಎಲ್ಲ ಕಡತಗಳನ್ನು ಹೆಲಿಕಾಪ್ಟರ್‌ನಲ್ಲಿ ತುಂಬಿಕೊಂಡು ಬಂದವರನ್ನೂ ತನಿಖೆಗೆ ಒಳಪಡಿಸಿ ಎಂದು ಒತ್ತಾಯಿಸಿದರು.
ವಾಲ್ಮೀಕಿ ನಿಗಮವನ್ನು ತಿಂದು ತೇಗಿದವರು :
ʼಭ್ರಷ್ಟಾಚಾರ ಅಪರಾಧವಲ್ಲ ಎಂಬ ಮನಸ್ಥಿತಿಗೆ ಮುಖ್ಯಮಂತ್ರಿಗಳು ಮತ್ತು ಕಾಂಗ್ರೆಸ್ ಪಕ್ಷ ಬಂದ ಹಾಗಿದೆ. ಕುರಿಗಳನ್ನು ಕಾಯಲು ತೋಳನನ್ನು ಕಾಂಗ್ರೆಸ್ ಪಕ್ಷದ ಸರಕಾರ ನೇಮಿಸಿದಂತಿದೆ. ಇವತ್ತು ಇಷ್ಟೊಂದು ಭ್ರಷ್ಟಾಚಾರ ನಡೆಯುತ್ತಿದ್ದರೂ ಜೈಲಿನಿಂದ ಬಂದವರು ವಿಜೃಂಭಿಸಿ ಬರುತ್ತಿದ್ದಾರೆ. ನಿನ್ನೆ ತಾನೇ ವಾಲ್ಮೀಕಿ ಜಯಂತಿ ನಡೆದಿದೆ. ಸಿದ್ದರಾಮಯ್ಯನವರು ವಾಲ್ಮೀಕಿ ಜಯಂತಿ ಮಾಡುವಾಗ ನನಗೇ ನಾಚಿಕೆ ಅನಿಸಿತ್ತು. ವಾಲ್ಮೀಕಿ ನಿಗಮವನ್ನು ತಿಂದು ತೇಗಿದವರು ವಾಲ್ಮೀಕಿ ಜಯಂತಿ ಮಾಡುವುದು ಎಷ್ಟು ಸರಿʼ ಎಂದು ಪ್ರಶ್ನಿಸಿದರು.
ʼಇಂದು ಬೆಳಿಗ್ಗೆ ಮುಡಾ ಕಚೇರಿ, ತಾಲ್ಲೂಕು ಕಚೇರಿ ಮತ್ತು ದೇವರಾಜು ಅವರ ಮನೆಗೆ ಈ.ಡಿ. ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮೂರು ಬಾರಿ ಮುಡಾ ಕಡತಗಳನ್ನು ಕೇಳಿದ್ದರೂ ಅಧಿಕಾರಿಗಳು ತಿರಸ್ಕರಿಸಿದ್ದೇ ಇದಕ್ಕೆ ಕಾರಣʼ ಎಂದು ವಿವರಿಸಿದರು.
ʼಈ ಹಗರಣದಲ್ಲಿ ಸತ್ಯ ಹೊರಗಡೆ ಬರುವುದು ರಾಜ್ಯ ಸರಕಾರಕ್ಕೆ ಬೇಕಾಗಿಲ್ಲ. ಮುಡಾ ನಿವೇಶನಗಳನ್ನು ಅವಶ್ಯಕತೆ ಇಲ್ಲದಿದ್ದರೂ ವಾಪಸ್ ಕೊಡಲಾಗಿದೆ. ಅಧ್ಯಕ್ಷರಾಗಿದ್ದ ಮರಿಗೌಡರನ್ನು ಎತ್ತಂಗಡಿ ಮಾಡಿಸಲಾಗಿದೆ. ಅಲ್ಲಿನ ಅಧಿಕಾರಿಗಳನ್ನು ಬೇರೆ ಬೇರೆ ಇಲಾಖೆಗಳಿಗೆ ಕಳುಹಿಸಲಾಗಿದೆ. ಮುಡಾದಲ್ಲಿ ಅಪಾರವಾದ ಭ್ರಷ್ಟಾಚಾರ ನಡೆದಿದೆ ಎಂಬುದನ್ನು ಇದೆಲ್ಲವೂ ತೋರಿಸುತ್ತದೆʼ ಎಂದು ವಿಶ್ಲೇಷಿಸಿದರು.