ಚಾಮರಾಜನಗರ | ಸಾಮಾಜಿಕ ಬಹಿಷ್ಕಾರದ ಆರೋಪ; ಮನನೊಂದು ವ್ಯಕ್ತಿ ಆತ್ಮಹತ್ಯೆ
13 ಮಂದಿ ವಿರುದ್ಧ ಎಫ್ಐಆರ್
ವೈ.ಎಸ್.ಶಿವರಾಜು - ಮೃತ ವ್ಯಕ್ತಿ
ಚಾಮರಾಜನಗರ: ಸಾಮಾಜಿಕ ಬಹಿಷ್ಕಾರದಿಂದ ಮನನೊಂದು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಯಡವನಹಳ್ಳಿ ಗ್ರಾಮದಲ್ಲಿ ಶುಕ್ರವಾರ ವರದಿಯಾಗಿದೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಯಡವನಳ್ಳಿ ಗ್ರಾಮದ ವೈ.ಎಸ್.ಶಿವರಾಜು(45) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ ಎಂದು ಗುರುತಿಸಲಾಗಿದೆ.
ಘಟನೆ ಸಂಬಂಧ ಮೃತನ ಸಹೋದರ ಮಹೇಶ್ ಎಂಬುವರು ಬೇಗೂರು ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದು, ʼಸಾಮಾಜಿಕ ಬಹಿಷ್ಕಾರ ಹಾಕಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆʼ ಎಂದು ಆರೋಪಿಸಿದ್ದಾರೆ.
ಪ್ರಕರಣ ಸಂಬಂಧ ಯಡವನಹಳ್ಳಿ ಗ್ರಾಮದ ಯಜಮಾನರಾದ ಕೃಷ್ಣ, ಚಂದು, ರೇವನಾಯಕ, ಸಂತೋಷ್, ಸಂದೇಶ್, ವೆಂಕಟರಮಣ ನಾಯಕ, ನಿಂಗ ನಾಯಕ, ಚಿಕ್ಕಬೆಳ್ಳ ನಾಯಕ, ಆಲತ್ತೂರು ಮಹದೇವ ನಾಯಕ, ಡಿ.ಮಹದೇವಮ ನಾಯಕ, ದೇವನಾಯಕ, ಚಿನ್ನಸ್ವಾಮಿ ನಾಯಕ, ರಂಗಸ್ವಾಮಿ ನಾಯಕ ಎಂಬ 13 ಮಂದಿ ವಿರುದ್ಧ ಬೇಗೂರು ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಆತ್ಮಹತ್ಯೆಗೆ ಕಾರಣರಾದವರನ್ನು ಕೂಡಲೇ ಬಂಧಿಸುವಂತೆ ಗ್ರಾಮಸ್ಥರು ಮತ್ತು ಸಂಬಂಧಿಕರು ಬೇಗೂರು ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಡಿವೈಎಸ್ಪಿ ಲಕ್ಷ್ಮಯ್ಯ ಸ್ಥಳಕ್ಕೆ ಭೇಟಿ ನೀಡಿ ಆರೋಪಿಗಳನ್ನು ಬಂಧಿಸುತ್ತೇವೆ, ತನಿಖೆ ಕೈಗೊಂಡು ನ್ಯಾಯ ಕೊಡಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಟ್ಟರು.