ಮುಸ್ಲಿಮರ ಕುರಿತ ಚಂದ್ರಶೇಖರನಾಥ ಸ್ವಾಮೀಜಿ ಹೇಳಿಕೆ ಸರಿಯಲ್ಲ : ಜಿ.ಪರಮೇಶ್ವರ್
"ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಯಾರೂ ಮಾತನಾಡಬಾರದು"
ಡಾ.ಜಿ.ಪರಮೇಶ್ವರ್
ಬೆಂಗಳೂರು : ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ ಅವರ ವಿವಾದಾತ್ಮಕ ಹೇಳಿಕೆ ಸರಿಯಲ್ಲ. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಯಾರು ಮಾತನಾಡಬಾರದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂವಿಧಾನದ ಆಶಯಗಳು, ಸಂವಿಧಾನದಲ್ಲಿ ಪ್ರತಿಯೊಂದು ಸಮುದಾಯಗಳಿಗೆ ಮತ್ತು ಧರ್ಮಗಳಿಗೆ ಕೊಟ್ಟಿರುವ ಹಕ್ಕು ಮತ್ತು ಅವಕಾಶಗಳನ್ನು ಅವರು ಸರಿಯಾಗಿ ನೋಡಿಕೊಂಡಿಲ್ಲ. ಸಂವಿಧಾನದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಅದಕ್ಕೆ ವ್ಯತಿರಿಕ್ತವಾಗಿ ನಾವು ಮಾಡುವುದು ಸರಿಯಲ್ಲ. ಅಲ್ಲದೆ, ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಯಾರೂ ಮಾತನಾಡಬಾರದು ಎಂದು ಹೇಳಿದರು.
ಎರಡು ಗ್ಯಾರಂಟಿ ಯೋಜನೆ ನಿಲ್ಲಿಸುವಂತೆ ಶಾಸಕ ಗವಿಯಪ್ಪ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಗ್ಯಾರಂಟಿ ಯೋಜನೆಗಳ ಬಗ್ಗೆ ಪಕ್ಷ ಮತ್ತು ಸರಕಾರ ತೀರ್ಮಾನ ತೆಗೆದುಕೊಂಡಿದೆ. ಯಾರಿಗೂ ಗೊತ್ತಿಲ್ಲದೇ ಕದ್ದು ಮುಚ್ಚಿ ತೆಗೆದುಕೊಂಡಿರುವ ತೀರ್ಮಾನವೇನಲ್ಲ ಎಂದು ಅವರು ತಿಳಿಸಿದರು.
ಚುನಾವಣೆಗೂ ಮೊದಲೇ ಪ್ರಣಾಳಿಕೆಯಲ್ಲಿ ತಿಳಿಸಲಾಗಿತ್ತು. ಗ್ಯಾರಂಟಿ ಯೋಜನೆಗಳ ವಿಚಾರದಲ್ಲಿ ಜನಸಮುದಾಯ ನಮ್ಮನ್ನು ನಂಬಿ ಮತ ಚಲಾಯಿಸಿರಬಹುದು. ಹೀಗಾಗಿ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡುವುದು ನಮ್ಮ ಕರ್ತವ್ಯ. ನಮ್ಮನಮ್ಮ ಅಭಿಪ್ರಾಯಗಳು ಬೇರೆ ಇರಬಹುದು. ನಾವು ಕೊಟ್ಟಿರುವ ಮಾತನ್ನು ಉಳಿಸಿಕೊಳ್ಳಬೇಕು. ಯಾವುದೇ ಶಾಸಕರು ತಮ್ಮ ಕ್ಷೇತ್ರಕ್ಕೆ ಅನುದಾನ ಕೇಳುವುದರಲ್ಲಿ ತಪ್ಪಿಲ್ಲ ಎಂದು ಹೇಳಿದರು.
ಅದು ಅಲ್ಲದೆ, ಕೇಂದ್ರ ಸರಕಾರವು ನಮಗೆ ಬರಬೇಕಾದ ಹಣವನ್ನು ಸರಿಯಾಗಿ ಹಣ ನೀಡುತ್ತಿಲ್ಲ. ಒತ್ತಾಯ ಮಾಡಿ ಹಣ ತಂದು, ಸಂಪನ್ಮೂಲ ಕ್ರೂಢೀಕರಣವನ್ನು ಜಾಸ್ತಿ ಮಾಡಲಾಗಿದೆ. ಹಣಕಾಸಿನ ಸ್ಥಿತಿಗತಿಯನ್ನು ಸರಿದೂಗಿಸಲು ಮುಖ್ಯಮಂತ್ರಿಗಳು ಸಚಿವ ಸಂಪುಟದಲ್ಲಿ ಎರಡು ಬಾರಿ ನಮಗೆಲ್ಲ ಹೇಳಿದ್ದಾರೆ. ಯಾವುದು ತೊಂದರೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.