ಚಂದ್ರಯಾನ 3 ಯಶಸ್ವಿ: ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ ಸಹಿತ ಹಲವು ಗಣ್ಯರು
ಬೆಂಗಳೂರು: ಭಾರತೀಯ ಬಾಹ್ಯಾಕಾಶ ವಿಜ್ಞಾನದ ಮುನ್ನಡೆಯ ಪ್ರತೀಕ, ದೇಶದ ಹೆಮ್ಮೆಯ ಇಸ್ರೋದ ಚಂದ್ರಯಾನ ಸರಣಿಯ ಮೂರನೇ ಯಾನದ ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವ ಮೇಲ್ಮೈನಲ್ಲಿ ಇಳಿದಿದೆ. ಈ ಮೂಲಕ ಭಾರತ ಐತಿಹಾಸಿಕ ಸಾಧನೆ ಮಾಡಿದೆ.
ಇಸ್ರೋ ವಿಜ್ಞಾನಿಗಳ ಈ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ʼʼದೇಶದ ವಿಜ್ಞಾನಿಗಳ ನಿರಂತರ ಪ್ರಯತ್ನ ಮತ್ತು ದಶಕಗಳ ಪರಿಶ್ರಮ ಇಂದು ಫಲನೀಡಿದೆ. ಚಂದ್ರನ ದಕ್ಷಿಣ ಧೃವದಲ್ಲಿ ಚಂದ್ರಯಾನ-3ರ ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿ ಇಳಿಯುವ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಸಾಧನೆಯನ್ನು ಜಗತ್ತು ಬೆರಗುಗಣ್ಣಿನಿಂದ ನೋಡುವಂತೆ ಮಾಡಿದೆ. ಪ್ರತಿಯೊಬ್ಬ ಭಾರತೀಯನಿಗೂ ಇದು ಹೆಮ್ಮೆಯ ಕ್ಷಣ. ಇಂಥದ್ದೊಂದು ಅಸಾಧಾರಣ ಸಾಧನೆಗೈದ ನಾಡಿನ ವಿಜ್ಞಾನಿಗಳಿಗೆ ಅಭಿನಂದನೆಗಳುʼʼ ಎಂದು ಬರೆದುಕೊಂಡಿದ್ದಾರೆ.
-------------------------------------------------------------
‘ಇಡೀ ವಿಶ್ವವೇ ಬೆರಗು ಗಣ್ಣುಗಳಿಂದ ಕಾತರಿಸುತ್ತಿದ್ದ ಐತಿಹಾಸಿಕ ಸಾಧನೆಯ ಮಾಡಿದ ಇಸ್ರೋ ವಿಜ್ಞಾನಿಗಳ ಸಾಧನೆಗೆ ಅಭಿನಂದನೆಗಳು. ಇದೊಂದು ಐತಿಹಾಸಿಕ ಮೈಲುಗಲ್ಲಾಗಿದೆ, ದೇಶದ ಹೆಮ್ಮೆಯ ಇಸ್ರೋ ಸಂಸ್ಥೆಯ ವಿಜ್ಞಾನಿಗಳು ನಮ್ಮ ದೇಶದ ಹಿರಿಮೆಯನ್ನು ಎತ್ತಿ ಹಿಡಿದಿದ್ದಾರೆ. ಮುಂದಿನ 14 ದಿನಗಳ ಕಾಲ ಚಂದ್ರನ ಮೇಲ್ಮೈನ ಅಧ್ಯಯನ ಮಾಡುವಲ್ಲಿ ಯಶಸ್ವಿಯಾಗಲಿ’
-ಎನ್.ಎಸ್.ಬೋಸರಾಜು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ
........................
‘ಎಲ್ಲ ಭಾರತೀಯರಿಗೆ ಹೆಮ್ಮೆಯ ಕ್ಷಣ. ಇಸ್ರೋ ತಂಡ ಹಾಗೂ ಈ ಸಾಧನೆಯನ್ನು ಸಾಧಿಸಲು ಅವಿರತವಾಗಿ ಶ್ರಮಿಸಿದ ಪ್ರತಿಯೊಬ್ಬರಿಗೂ ಅಭಿನಂದನೆಗಳು. ಇದು ಭಾರತದ ಬಾಹ್ಯಾಕಾಶ ಸಂಶೋಧನಾ ಹಾದಿಯ ಪ್ರಮುಖ ಮೈಲಿಗಲ್ಲು. ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿದ ಮೊದಲ ದೇಶ ಭಾರತ’
-ಯು.ಟಿ.ಖಾದರ್, ವಿಧಾನಸಭೆ ಸ್ಪೀಕರ್
............................
‘ಚಂದ್ರಯಾನ-3 ಯಶಸ್ವಿಯಾಗಿದೆ. ಕೋಟ್ಯಂತರ ಭಾರತೀಯರು ಸಂತಸ, ಹೆಮ್ಮೆ ಪಡುವಂತಾಗಿದೆ. ಐತಿಹಾಸಿಕ ಸಾಧನೆ ಮೆರೆದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು, ತಂತ್ರಜ್ಞರ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಅವರ ಈ ಸಾಧನೆ ನಮ್ಮೆಲ್ಲ ಯುವ ವಿಜ್ಞಾನಿಗಳಿಗೆ ಸ್ಪೂರ್ತಿಯಾಗಿದೆ’
-ಎಂ.ಬಿ.ಪಾಟೀಲ್, ಬೃಹತ್ ಕೈಗಾರಿಕೆ ಸಚಿವ
......................
‘ಇದೊಂದು ಐತಿಹಾಸಿಕ ಘಟನೆ ಜಗತ್ತಿನ ಇತರ ಯಾವುದೇ ದೇಶಕ್ಕೆ ಆಗದಂತಹ ಒಂದು ವಿಷಯವನ್ನು ಭಾರತದ ಬಾಹ್ಯಾಕಾಶ ಸಂಸ್ಥೆ ಇಂದು ವ್ಯವಸ್ಥಿತವಾಗಿ ನೇರ ಪ್ರಸಾರದಲ್ಲಿ ಇಡೀ ಜಗತ್ತಿಗೆ ತೋರಿಸಿದೆ. ಚಂದ್ರನ ದಕ್ಷಿಣ ದ್ರುವದ ಮೇಲೆ ಹೆಜ್ಜೆ ಇಟ್ಟ ಪ್ರಪಂಚದ ಪ್ರಪ್ರಥಮ ದೇಶ ಎಂಬ ಹೆಗ್ಗಳಿಕೆಗೆ ಭಾರತ ಭಾಜನವಾಗಿದ್ದು, ವಿಜ್ಞಾನಿಗಳ ಹಲವಾರು ವರ್ಷಗಳ ಶ್ರಮದ ಫಲವಾಗಿ ಇಂದು ಭಾರತ ಐತಿಹಾಸಿಕ ಸಾಧನೆ ಮಾಡಿದೆ. ಈ ಮೂಲಕ ಅಂತರಿಕ್ಷ ಸಂಶೋಧನೆಯ ಕ್ಷೇತ್ರದಲ್ಲಿ ಹೊಸ ಯುಗಕ್ಕೆ ನಾಂದಿ ಹಾಡಿದೆ’
-ಬಸವರಾಜ ಹೊರಟ್ಟಿ, ಪರಿಷತ್ ಸಭಾಪತಿ
.......................
‘ಚಂದ್ರಯಾನ-3ರ ಯಶಸ್ಸಿಗಾಗಿ ನಮ್ಮ ಭಾರತೀಯರ ಸಂತಸದಲ್ಲಿ ನಾನು ಭಾಗಿಯಾಗಿದ್ದೇನೆ. ಇಸ್ರೋ ವಿಶ್ವ ದರ್ಜೆಯ ಸಂಸ್ಥೆಯಾಗಿದೆ. ಇದು ದಶಕಗಳಿಂದ ನಮಗೆ ಹೆಮ್ಮೆ ತಂದಿದೆ. ಅವರ ಅಮೋಘ ಸಾಧನೆಗಳು ನಮ್ಮನ್ನು ವಿಶ್ವದ ಅಗ್ರಸ್ಥಾನದಲ್ಲಿರಿಸಿದೆ. ದೇವರು ನಮ್ಮ ದೇಶ ಹಾಗೂ ವಿಜ್ಞಾನಿಗಳನ್ನು ಆಶೀರ್ವದಿಸಲಿ’
-ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ
........................
‘ಇಸ್ರೋ ಭಾರತದ ಹೆಮ್ಮೆಯ ಸಂಸ್ಥೆ. ಈ ಹಿಂದೆ ಹಲವಾರು ಮೈಲಿಗಲ್ಲುಗಳನ್ನು ಸಾಧಿಸಿದೆ. ಈಗ ಚಂದ್ರಯಾನದ ಯಶಸ್ಸು ಇಡೀ ವಿಶ್ವವೇ ಭಾರತವನ್ನು ಮತ್ತೊಮ್ಮೆ ಕೊಂಡಾಡುವಂತೆ ಮಾಡಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಇಳಿಸಿದ ಜಗತ್ತಿನ ಮೊದಲ ದೇಶವಾಗಿ ಭಾರತಕ್ಕೆ ಇಸ್ರೋ ಹೆಮ್ಮೆ ತಂದು ಕೊಟ್ಟಿದೆ. ಚಂದ್ರನ ಮೇಲೆ ಲ್ಯಾಂಡರ್ ಇಳಿಸುವ ಮೂಲಕ ಭಾರತ ಬಾಹ್ಯಾಕಾಶ ಲೋಕದ ಲೀಡರ್ ಎನ್ನುವುದನ್ನು ತೋರಿಸಿಕೊಟ್ಟಿದೆ’
-ಲಕ್ಷ್ಮಿ ಹೆಬ್ಬಾಳ್ಕರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ
....................
‘ಇದೊಂದು ಇಡೀ ಭಾರತೀಯರ ಹೆಮ್ಮೆ, ಇಸ್ರೋ ಸಾಧನೆ ಅವಿಸ್ಮರಣೀಯ. ಚಂದ್ರ ಯಾನ 3 ಯಶಸ್ವಿಯಾಗಿ ಹಾಗೂ ಸುರಕ್ಷಿತವಾಗಿ ಚಂದ್ರನ ಅಂಗಳ ಸ್ಪರ್ಶಿಸಿದೆ. ಮುಂದಿನ ಸಂಶೋಧನೆಗಳು ಇಡೀ ಜಗತ್ತಿಗೆ ಬೆಳಕು ಚೆಲ್ಲುವಂತಾಗಲಿ. ಇಸ್ರೋದ ಈ ಸಾಧನೆಯಲ್ಲಿ ನೂರಾರು ವಿಜ್ಞಾನಿಗಳು, ತಂತ್ರಜ್ಞರ ದಣಿವರಿಯದ ಶ್ರಮ ಅಡಗಿದೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಅಂಚೆ ಚಿಟ್ಟನಹಳ್ಳಿ ಗ್ರಾಮದ ಯುವಕ ರವಿ ಪಿ.ಗೌಡ ಹಿರಿಯ ವಿಜ್ಞಾನಿಯಾಗಿ ಈ ಸಾಧಕರ ತಂಡದಲ್ಲಿ ಸೇವೆ ಸಲ್ಲಿಸಿರುವುದು ನಮೆಲ್ಲರಿಗೂ ಅಭಿಮಾನ ತರುವ ವಿಚಾರ’
-ಎನ್.ಚಲುವರಾಯಸ್ವಾಮಿ, ಕೃಷಿ ಸಚಿವ
......................
‘ಈವರೆಗೆ ಯಾವುದೇ ದೇಶ ಚಂದ್ರನ ಅಂಗಳದ ದಕ್ಷಿಣ ಧ್ರುವದಲ್ಲಿ ತನ್ನ ವ್ಯೋಮ ನೌಕೆ ಇಳಿಸುವಲ್ಲಿ ಯಶಸ್ವಿಯಾಗಿರಲಿಲ್ಲ. ಆ ‘ವಿಕ್ರಮ’ ಸಾಧಿಸಿ ಲ್ಯಾಂಡರ್ ಅನ್ನು ಚಂದ್ರಮನ ಮೇಲೆ ಇಳಿಸಿದ ಭಾರತದ ಬಾಹ್ಯಾಕಾಶ ವಿಜ್ಞಾನಿಗಳಿಗೆ ಮತ್ತು ಇಸ್ರೋಗೆ ನನ್ನ ಅನಂತ ಅಭಿನಂದನೆಗಳು. ಚಂದ್ರಾನ್ವೇಷಣೆ ಯಶಸ್ವಿಯಾಗಲಿ. ಇದರಿಂದ ಇಡೀ ಮಾನವ ಕುಲಕ್ಕೇ ಒಳಿತಾಗಲಿ ಎಂದು ಹಾರೈಸುತ್ತೇನೆ’
-ಈಶ್ವರ್ ಖಂಡ್ರೆ, ಅರಣ್ಯ ಸಚಿವ
........................
‘ಜಗತ್ತಿನಲ್ಲಿಯೇ ಪ್ರಥಮವಾಗಿ ರೋವರ್ (ವಿಕ್ರಮ ಲ್ಯಾಂಡರ್)ಅನ್ನು ಚಂದ್ರನ ದಕ್ಷಿಣ ಧ್ರುವದ ಮೇಲೆ ಯಶಸ್ವಿಯಾಗಿ ಇಳಿಸುವ ಮೂಲಕ ಚಂದ್ರಯಾನ-3 ಮಹಾನ್ ಸಾಹಸವನ್ನು ಇಸ್ರೋ ಪೂರೈಸಿದೆ. ಆ ಮೂಲಕ ಖಗೋಳ ಸಂಶೋಧನೆಗೆ ನಿರ್ಣಾಯಕ ತಿರುವು ಕೊಟ್ಟಿದೆ. ಇಸ್ರೋ ವಿಜ್ಞಾನಿಗಳ ಈ ಸಾಧನೆಯನ್ನು ಕೇವಲ ಪದಗಳಿಂದ ಬಣ್ಣಿಸಿದರೆ ಸಾಲದು. ಹಗಲಿರುಳು ಶ್ರಮಿಸಿದ ಅವರ ಯಶಸ್ಸನ್ನು, ಅರ್ಪಣಾ ಮನೋಭಾವವನ್ನು ಹೃದಯಪೂರ್ವಕವಾಗಿ ಕೊಂಡಾಡಿ ಗೌರವಿಸೋಣ. ಅಮೆರಿಕ, ರಷ್ಯಾ, ಚೀನಾ ನಂತರ ಚಂದ್ರನ ಮೇಲೆ ರೋವರ್ ಇಳಿಸಿದ ಈ ಸಾಧನೆ ಐತಿಹಾಸಿಕ’
-ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ