‘ಬರ’ ಘೋಷಣೆಗೆ ಇರುವ ಮಾನದಂಡ ಬದಲಾಯಿಸಿ: ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ಒತ್ತಾಯ
ಬೆಂಗಳೂರು, ಸೆ. 16: ‘ಬರ’ ಘೋಷಣೆ ಮತ್ತು ಪರಿಹಾರಕ್ಕೆ ಸಂಬಂಧಿಸಿದ ಕೇಂದ್ರದ ಮಾನದಂಡಗಳ ಸಮಸ್ಯೆಗಳ ಕಾರಣದಿಂದಾಗಿಯೇ ಬರ ಘೋಷಣೆ ವಿಳಂಬವಾಗಿದೆ. ಮಾನದಂಡಗಳ ಬದಲಾವಣೆ ಮಾಡದಿದ್ದರೆ ಬರಪೀಡಿತ ಪ್ರದೇಶದದಲ್ಲಿ ಪರಿಹಾರದ ನಿಟ್ಟಿನಲ್ಲಿ ನೊಂದ ಜನರಿಗೆ ನೆರವಾಗಲು ಸಾಧ್ಯವಾಗದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಶನಿವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ‘ಬರ ಘೋಷಣೆಗೆ ಅಗತ್ಯವಾಗಿರುವ ಮಾನದಂಡಗಳನ್ನು ಮರುಪರಿಶೀಲಿಸಬೇಕಾದ ಅನಿವಾರ್ಯತೆಯನ್ನು ವಿವರಿಸಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಗೆ ಹಿಂದೆಯೇ ಪತ್ರ ಬರೆದಿದ್ದರೂ ಕೇಂದ್ರದಿಂದ ಇಲ್ಲಿಯ ವರೆಗೆ ಉತ್ತರ ಬಂದಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಮಾನದಂಡಗಳ ಪರಿಷ್ಕರಣೆಗಾಗಿ ಕೇಂದ್ರದ ಮೇಲೆ ಒತ್ತಡಹೇರಬೇಕಾಗಿರುವ ರಾಜ್ಯ ಬಿಜೆಪಿ ನಾಯಕರು ಆ ಕೆಲಸವನ್ನು ಮಾಡದೆ ರಾಜ್ಯದ ಬರ ಪರಿಸ್ಥಿತಿಯ ರಾಜಕೀಯ ಲಾಭ ಪಡೆಯುವ ದುರುದ್ದೇಶದಿಂದ ಸರ್ಕಾರದ ವಿರುದ್ದ ಆಧಾರರಹಿತ ಆರೋಪ ಮಾಡುತ್ತಿದ್ದಾರೆ. ರಾಜ್ಯವು ವೈವಿಧ್ಯಮಯವಾದ 14 ಕೃಷಿ-ಹವಾಮಾನ ವಲಯಗಳನ್ನು ಹೊಂದಿದ್ದು, ಪ್ರತಿಯೊಂದು ವಲಯವೂ ತನ್ನದೇ ಆದ ಸವಾಲುಗಳನ್ನು ಹೊಂದಿದೆ’ ಎಂದು ಅವರು ತಿಳಿಸಿದ್ದಾರೆ.
‘ಆಗಸ್ಟ್-ಸೆಪ್ಟೆಂಬರ್ ಅವಧಿಯಲ್ಲಿ ಮಳೆ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ, ಮುಂಗಾರು ಆರಂಭದಲ್ಲಿ ಮಳೆ ಕೊರತೆಯ ಕಾರಣಕ್ಕೆ ಬಿತ್ತನೆ ಪ್ರಮಾಣ ಇಳಿಕೆಯಾಗಿರುತ್ತದೆ. ಪರಿಣಾಮ ಬೆಳೆಯಲ್ಲಿ ಕೊರತೆಯುಂಟಾಗಿ ಕೃಷಿ ಆಧರಿತ ಬರದ ಸನ್ನಿವೇಶ ಉದ್ಭವಿಸುತ್ತದೆ. ಅದರೆ, ಇದೇ ವೇಳೆ ಸುಧಾರಿಸಿದ ಮಳೆಯ ಮಾರುತಗಳಿಂದಾಗಿ ಹವಾಮಾನ ಮತ್ತು ಜಲಶಾಸ್ತ್ರೀಯ ಬರ ಕಾಣದೆ ಹೋಗಬಹುದು. ಈ ಸೂಕ್ಷ್ಮವನ್ನು ಬರ ಘೋಷಣೆಗೆ ಕಡ್ಡಾಯವಾಗಿರುವ ಮಾನದಂಡಗಳು ಒಳಗೊಳ್ಳಬೇಕಾಗಿದೆ’ ಎಂದು ಅವರು ತಿಳಿಸಿದ್ದಾರೆ.
‘ಹವಾಮಾನ ಇಲಾಖೆಯು ದೇಶಾದ್ಯಂತ ಶೇ.10ರಷ್ಟು ಮಳೆಯ ಕೊರತೆಯನ್ನೂ ಬರದ ವರ್ಷ ಎಂದು ತೀರ್ಮಾನಿಸಿ ಘೋಷಿಸುತ್ತದೆ. ಆದರೆ, ಮಾನದಂಡಗಳ ಪ್ರಕಾರ ಬರ ಘೋಷಣೆ ಮಾಡಬೇಕಾದರೆ ಮಳೆಯ ವ್ಯತ್ಯಯ ಸೂಚ್ಯಂಕವು ಶೇ.60ಕ್ಕಿಂತ ಹೆಚ್ಚಿರಬೇಕು ಎನ್ನಲಾಗಿದೆ. ನಾವು ಈ ಎರಡರ ನಡುವಿನ ಅಂತರವನ್ನು ಗಣನೆಗೆ ತೆಗೆದುಕೊಳ್ಳಬೇಕಾಗಿದೆ. ಮಳೆಯ ವ್ಯತ್ಯಯ ಸೂಚ್ಯಂಕವು ಶೇ.20ರಿಂದ ಶೇ.59ರ ವರೆಗೆ ಇದ್ದರೂ ಅದು ಬರ ಘೋಷಣೆಗೆ ಅಗತ್ಯವಾದ ಕ್ರಿಯಾಕಾರಣ (ಟ್ರಿಗರ್) ಅಂಶವೆಂದು ಪರಿಗಣಿಸಬೇಕು’ ಎಂದು ಅವರು ಮಾಹಿತಿ ನೀಡಿದ್ದಾರೆ.
‘ಬರ ನಿರ್ವಹಣೆಯ ಕೈಪಿಡಿಯಲ್ಲಿರುವ ಮಾನದಂಡಗಳನ್ನು ಅನ್ವಯಿಸುವಾಗ, ಅದನ್ನು ಭೌಗೋಳಿಕವಾಗಿ, ಕೃಷಿ ಚಟುವಟಿಕೆ ಹಾಗೂ ಬೆಳೆಯ ವೈವಿಧ್ಯತೆ ಹಿನ್ನೆಲೆಯಲ್ಲಿ ಹೆಚ್ಚು ಹೊಂದಿಕೆಯಾಗುವಂತೆ, ಹೆಚ್ಚು ರೈತಸ್ನೇಹಿಯಾಗುವಂತೆ ಅಳವಡಿಸಬೇಕಿದೆ. ಈ ನಿಟ್ಟಿನಲ್ಲಿ ಪ್ರಸಕ್ತ ಇರುವ ಮಾನದಂಡಗಳಿಗೆ ಸೂಕ್ತ ಮಾರ್ಪಾಡುಗಳನ್ನು ಮಾಡಬೇಕಿದ್ದು, ಅವುಗಳ ಮರುಪರಿಶೀಲನೆಗೆ ಇದು ಸೂಕ್ತ ಸಮಯ’ ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.