‘ಚನ್ನಪಟ್ಟಣ ಅಭ್ಯರ್ಥಿ ಘೋಷಣೆ’ಗೂ ಮೊದಲೇ ನಾಮಪತ್ರ ಸಲ್ಲಿಕೆಗೆ ಸಿ.ಪಿ.ಯೋಗೇಶ್ವರ್ ಸಿದ್ಧತೆ?
ಬೆಂಗಳೂರು : ರಾಮನಗರ ಜಿಲ್ಲೆಯ ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆ ಕಣ ರಂಗೇರುತ್ತಿದ್ದು, ಜೆಡಿಎಸ್-ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿ ಆಯ್ಕೆ ಗೊಂದಲದ ನಡುವೆಯೇ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ನಾಮಪತ್ರ ಸಲ್ಲಿಕೆಗೆ ಸಿದ್ಧತೆ ಮಾಡಿಕೊಂಡಿರುವುದು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.
ಈಗಾಗಲೇ ಮೂರು ಕ್ಷೇತ್ರಗಳ ಉಪಚುನಾವಣೆಗೆ ಅ.18ರಂದು ಅಧಿಸೂಚನೆ ಪ್ರಕಟಿಸಿದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಈ ಮಧ್ಯೆ ಅ.23(ಗುರುವಾರ) ಅಥವಾ 24ಕ್ಕೆ ನಾಮಪತ್ರ ಸಲ್ಲಿಸಲು ಸಿ.ಪಿ.ಯೋಗೇಶ್ವರ್ ತಯಾರಿ ನಡೆಸಿದ್ದು, ಅದಕ್ಕಾಗಿ ಎರಡು ಸೆಟ್ ಅಫಿಡವಿಟ್ ಸಿದ್ಧಪಡಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಶಿಗ್ಗಾಂವಿ ಮತ್ತು ಸಂಡೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿರುವ ಬಿಜೆಪಿಗೆ ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕಗ್ಗಂಟ್ಟಾಗಿದೆ. ಯೋಗೇಶ್ವರ್‌ಗೆ ಮೈತ್ರಿ ಟಿಕೆಟ್ ಸಿಕ್ಕರೆ ಬಿಜೆಪಿಯಿಂದ ಸ್ಪರ್ಧೆ, ಇಲ್ಲವೇ ಪಕ್ಷೇತರವಾಗಿ ಸ್ಪಧಿಸಲು ಕ್ರಮವಾಗಿ ಒಂದು ಬಿಜೆಪಿ ಅಭ್ಯರ್ಥಿ, ಮತ್ತೊಂದು ಪಕ್ಷೇತರ ಅಭ್ಯರ್ಥಿಯಾಗಿ ಅಫಿಡವಿಟ್ ಸಿದ್ಧಪಡಿಸಿಕೊಂಡಿರುವುದು ಎನ್‍ಡಿಎ ಮುಖಂಡರಿಗೆ ತೀವ್ರ ತಲೆನೋವು ತಂದಿದೆ.
ಈ ಬೆಳವಣಿಗೆಗಳ ನಡುವೆ ಚನ್ನಪಟ್ಟಣ ಕ್ಷೇತ್ರ ಜೆಡಿಎಸ್‍ಗೆ ಬಹುತೇಕ ಖಚಿತವಾಗಿದ್ದು, ಇದಕ್ಕೆ ಪುಷ್ಟಿ ನೀಡುವಂತೆ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಯಡಿಯೂರಪ್ಪ, ‘ಚನ್ನಪಟ್ಟಣ ಕ್ಷೇತ್ರವನ್ನು ಜೆಡಿಎಸ್ ಪ್ರತಿನಿಧಿಸುತ್ತಿದ್ದು, ಅವರಿಗೆ ಬಿಟ್ಟುಕೊಡುವುದು ಸೂಕ್ತ’ ಎಂದು ಇಂಗಿತ ವ್ಯಕ್ತಪಡಿಸಿದ್ದಾರೆ.