ಉಪಚುನಾವಣೆ | ಚನ್ನಪಟ್ಟಣ ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಹೇಳಿಕೆ ಸುತ್ತ ಚರ್ಚೆ
ಸಿ.ಪಿ.ಯೋಗೇಶ್ವರ್
ಬೆಂಗಳೂರು : ಮೂರು ಕ್ಷೇತ್ರಗಳ ಉಪಚುನಾವಣೆ ಫಲಿತಾಂಶಕ್ಕೂ ಮೊದಲೇ ರಾಮನಗರ ಜಿಲ್ಲೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದದಲ್ಲಿ ಯಾರೂ ಗೆಲುವು ಸಾಧಿಸಲಿದ್ದಾರೆ ಎಂಬ ಚರ್ಚೆ ಶುರುವಾಗಿದ್ದು, ಈ ಕುರಿತು ಚನ್ನಪಟ್ಟಣ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಹೇಳಿಕೆ ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.
‘ವಕ್ಫ್ ಸಚಿವ ಝಮೀರ್ ಅಹ್ಮದ್ ಖಾನ್ ನೀಡಿದ್ದ ಹೇಳಿಕೆಯಿಂದ ತನಗೆ ಲಾಭ-ನಷ್ಟ ಎರಡೂ ಆಗಿದೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಎನ್ಡಿಎ ಸಮಬಲದ ಹೋರಾಟ ನಡೆಸಿದ್ದೂ, ಯಾರೇ ಗೆದ್ದರೂ ಕೂದಲೆಳೆ ಅಂತರ ಇರಲಿದೆ. ತನಗೆ ಒಕ್ಕಲಿಗ ಸಮುದಾಯದ ಮತಗಳು ಕಡಿಮೆ ಬಂದಿರುವ ಸಾಧ್ಯತೆಗಳಿವೆ’ ಎಂದು ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಹೇಳಿಕೆ ನೀಡಿದ್ದರು.
ಆ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಮಾಜಿ ಸಂಸದ ಡಿ.ಕೆ.ಸುರೇಶ್, ‘ನಾವೆಲ್ಲರೂ ಚನ್ನಪಟ್ಟಣ ಕ್ಷೇತ್ರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆಂಬ ಆತ್ಮವಿಶ್ವಾಸದಲ್ಲಿದ್ದೇವೆ. ಯೋಗೇಶ್ವರ್ ಯಾವ ಆಯಾಮದಲ್ಲಿ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ಏನೇ ಆದರೂ ಗೆಲುವು ನಮ್ಮದೆ’ ಎಂದು ತಿಳಿಸಿದ್ದಾರೆ.
ಮಹತ್ವ ನೀಡುವ ಅಗತ್ಯವಿಲ್ಲ: ‘ಯೋಗೇಶ್ವರ್ ಹೇಳಿಕೆಯ ಬಗ್ಗೆ ಮಹತ್ವ ನೀಡುವ ಅಗತ್ಯವಿಲ್ಲ. ಚನ್ನಪಟ್ಟಣದಲ್ಲಿ ಎನ್ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಜಯಗಳಿಸಲಿದ್ದಾರೆ. ಕಾಂಗ್ರೆಸ್ನಲ್ಲಿ ಏನೇನು ಆಗಿದೆ ಎಂದು ಸ್ವತಃ ಯೋಗೇಶ್ವರ್ ಹೇಳಿದ್ದಾರೆ. ಝಮೀರ್ ಹೇಳಿಕೆಯಿಂದ ಏನಾಗಿದೆ ಎನ್ನುವುದು ಫಲಿತಾಂಶದ ದಿನ ಗೊತ್ತಾಗುತ್ತದೆ’ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ತಿಳಿಸಿದ್ದಾರೆ.
ಚನ್ನಪಟ್ಟಣ ಕ್ಷೇತ್ರ ಚುನಾವಣಾ ಪ್ರಚಾರದಲ್ಲಿ ಸಚಿವ ಝಮೀರ್ ಅಹ್ಮದ್ ಖಾನ್, ಕೇಂದ್ರ ಸಚಿವ ಕುಮಾರಸ್ವಾಮಿ ಕುರಿತು ಅವಹೇಳನಕಾರಿ ಭಾಷೆ ಬಳಕೆ ಮಾಡಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಝಮೀರ್ ಹೇಳಿಕೆಯ ಬಗ್ಗೆ ಪರ-ವಿರೋಧ ಚರ್ಚೆಯೂ ನಡೆದಿದ್ದು, ಆಕ್ಷೇಪಕ್ಕೂ ಕಾರಣವಾಗಿತ್ತು.