‘ಚನ್ನಪಟ್ಟಣ’ ಎನ್ಡಿಎ ಅಭ್ಯರ್ಥಿಗೆ ಟಿಕೆಟ್: ಎರಡು ದಿನದಲ್ಲಿ ತೀರ್ಮಾನ ಎಂದ ಆರ್. ಅಶೋಕ್
"ಇದು ಜೆಡಿಎಸ್ನ ಕ್ಷೇತ್ರವೇ ಆಗಿದ್ದರಿಂದ ಅವರ ಸಲಹೆಯೇ ಪ್ರಮುಖ"
ಬೆಂಗಳೂರು: ರಾಮನಗರ ಜಿಲ್ಲೆಯ ಚನ್ನಪಟ್ಟಣ ಉಪಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿ ಸ್ಪರ್ಧೆ ಮಾಡಲಿದ್ದಾರೆ. ಇದು ಜೆಡಿಎಸ್ನ ಕ್ಷೇತ್ರವೇ ಆಗಿದ್ದರಿಂದ ಅವರ ಸಲಹೆಯೇ ಪ್ರಮುಖ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಹೇಳಿದರು.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಗೇಶ್ವರ್ ಮನವೊಲಿಸಲು ನಾನು ಯತ್ನಿಸಿದ್ದೆ. ಚನ್ನಪಟ್ಟಣ ಕ್ಷೇತ್ರದ ಟಿಕೆಟ್ ಸಂಬಂಧ ಇನ್ನೂ ಅಂತಿಮ ನಿರ್ಧಾರ ಆಗಿಲ್ಲ. ಯೋಗೇಶ್ವರ್ ಗೆ ಟಿಕೆಟ್ ನೀಡಬೇಕೆಂದು ಹಿರಿಯ ನಾಯಕರಿಗೆ ಮನವಿ ಮಾಡಿದ್ದೇವೆ. ಈ ಹಿಂದೆ ಕ್ಷೇತ್ರದಲ್ಲಿ ಎಚ್.ಡಿ.ಕುಮಾರಸ್ವಾಮಿ ಶಾಸಕರಾಗಿದ್ದು, ಅವರ ತೀರ್ಮಾನ ಪ್ರಮುಖವಾಗಿರುತ್ತದೆ. ಯೋಗೇಶ್ವರ್ ದುಡುಕಿ ತಪ್ಪು ತೀರ್ಮಾನ ಕೈಗೊಳ್ಳುತ್ತಾರೆಂದು ನನಗೆ ಅನ್ನಿಸುತ್ತಿಲ್ಲ. ಕ್ಷೇತ್ರದಲ್ಲಿ ಎನ್ಡಿಎ ಅಭ್ಯರ್ಥಿಗೆ ಟಿಕೆಟ್ ಸಿಗಬಹುದು ಎಂದರು.
ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಈಗಾಗಲೇ ಸ್ಪರ್ಧೆ ಮಾಡಲ್ಲ ಎಂದು ಹೇಳಿದ್ದಾರೆ. ಸೀಟು ಅವರದ್ದೇ ಆಗಿರುವುದರಿಂದ ಹಾಗೂ ಎನ್ಡಿಎ ಮಿತ್ರಪಕ್ಷ ಆಗಿರುವುದರಿಂದ ಜೆಡಿಎಸ್ನವರ ಸಲಹೆ ಪ್ರಮುಖವಾಗಿರುತ್ತದೆ. ಇನ್ನು ಎರಡು ದಿನದಲ್ಲಿ ಎಲ್ಲವೂ ತೀರ್ಮಾನವಾಗಲಿದೆ ಎಂದು ಅಶೋಕ್ ನುಡಿದರು.
ಡಿ.ಕೆ.ಶಿವಕುಮಾರ್ ಸಹೋದರ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದಾರೆ. ಅವರು ಯಾರನ್ನೋ ಕರೆದುಕೊಂಡು ಬರುತ್ತೇನೆಂದು ಹೇಳಬಹುದು. ಆದರೆ, ಅಂತಿಮವಾಗಿ ಜನರು ತೀರ್ಮಾನಿಸುತ್ತಾರೆ. ಕಾಂಗ್ರೆಸ್ ಸರಕಾರ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ, ರೈತರಿಗೆ ಪರಿಹಾರ ನೀಡಿಲ್ಲ. ಪ್ರವಾಹ ಹಾನಿ ನಿರ್ವಹಣೆ ಮಾಡಿಲ್ಲ. ಜನರು ಸರಕಾರದ ವಿರುದ್ಧವಾಗಿ ನಿಂತಿದ್ದಾರೆ. ಅದರ ಉಪಯೋಗವನ್ನು ನಾವು ಪಡೆಯುತ್ತೇವೆ ಎಂದು ಅವರು ತಿಳಿಸಿದರು.