ಎಷ್ಟೇ ಕೊಡುಗೆಗಳನ್ನು ನೀಡಿದರೂ ಒಂದು ಸಮುದಾಯದ ಜನರು ನಮ್ಮ ಕೈ ಹಿಡಿದಿಲ್ಲ: ತನ್ನ ಸೋಲಿಗೆ ಮುಸ್ಲಿಮರನ್ನು ದೂಷಿಸಿದ ನಿಖಿಲ್
ನಿಖಿಲ್ ಕುಮಾರಸ್ವಾಮಿ
ಬೆಂಗಳೂರು : ರಾಜ್ಯದ ಮೂರು ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ. ಅಲ್ಲದೆ, ತೀವ್ರ ಜಿದ್ದಾಜಿದ್ದಿನ ಕಣವಾಗಿದ್ದ ಚನ್ನಪಟ್ಟಣದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಯವರನ್ನು ಕಾಂಗ್ರೆಸ್ನ ಸಿ.ಪಿ.ಯೋಗೇಶ್ವರ್ ಸೋಲಿಸಿದ್ದಾರೆ.
ಈ ಸೋಲಿನ ಬಳಿಕ ಬಿಡದಿ ತೋಟದ ಮನೆಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ನಿಖಿಲ್ ಕುಮಾರಸ್ವಾಮಿ, ’ಹಿಂದಿನಿಂದಲೂ ನಮ್ಮ ಜೊತೆಗಿದ್ದ ಅಲ್ಪಸಂಖ್ಯಾತರು ಈ ಸಲ ನಮ್ಮ ಕೈ ಹಿಡಿಯಲಿಲ್ಲ’ ಎಂದು ಹೇಳುವ ಮೂಲಕ ತಮ್ಮ ಸೋಲಿಗೆ ಮತ್ತೆ ಮಸ್ಲಿಮರನ್ನು ಹೊಣೆಗಾರರನ್ನಾಗಿ ಮಾಡಿದ್ದಾರೆ.
‘ಬಹುಶಃ ಒಂದು ಸಮುದಾಯದ (ಮುಸ್ಲಿಮ್) ಮತಗಳು ಕಾಂಗ್ರೆಸ್ ಪರ ದೊಡ್ಡಮಟ್ಟದಲ್ಲಿ ಕ್ರೋಢಿಕರಣಗೊಂಡಿದೆ. ನಮ್ಮ ಪಕ್ಷ ಅವರ ಪರವಾಗಿ ನಿಂತರೂ, ಎಷ್ಟೇ ಕೊಡುಗೆಗಳನ್ನು ನೀಡಿದರೂ ಅವರು ನಮ್ಮ ಕೈ ಹಿಡಿದಿಲ್ಲ. ಈ ಸಲ ಅವರು ನಮ್ಮೊಂದಿಗೆ ನಿಲ್ಲದಿರುವುದು ಸಹ ಫಲಿತಾಂಶದ ಏರುಪೇರಿಗೆ ಕಾರಣವಿರಬಹುದುʼ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
'ನಾನು ಈ ರಾಮನಗರ ಜಿಲ್ಲೆಯ ಮಗ ಅಂತ ಭಾವಿಸುತ್ತೇನೆ. ಜನರ ಪ್ರೀತಿ ವಾತ್ಸಲ್ಯ ಸಿಕ್ಕಿದೆ. ಚನ್ನಪಟ್ಟಣದ ಫಲಿತಾಂತ ಆಘಾತ ತಂದಿದೆ. ಇದು ಬಯಸದೇ ಬಂದ ಚುನಾವಣೆ ನಿಮ್ಮ ಋಣ ತೀರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಎಲ್ಲರಿಗೂ ಧ್ವನಿಯಾಗಿ ಇರುತ್ತೇನೆ. ಪಕ್ಷದಿಂದ ನಿಖಿಲ್ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿಯಿಂದ ಪಕ್ಷ ಅಲ್ಲ ಈ ಸೋಲಿನಿಂದ ನಾನು ಎದೆಗುಂದಲ್ಲʼ ಎಂದು ಹೇಳಿದರು.