ಚೆಕ್ ಬೌನ್ಸ್ ಪ್ರಕರಣ: ಚಿತ್ರನಟ ನೀನಾಸಂ ಅಶ್ವತ್ಥ್ ಬಂಧನ
ಹಾಸನ, ಜು.9: ಹಸುಗಳ ಖರೀದಿ ಮಾಡುವ ವಿಚಾರದಲ್ಲಿ 1.50 ಲಕ್ಷ ರೂ. ಮೌಲ್ಯದ ಚೆಕ್ ಬೌನ್ಸ್ ಆಗಿರುವ ಪ್ರಕರಣಕ್ಕೆ ಸಂಬಂಧಿಸಿ ಕನ್ನಡ ಚಲನಚಿತ್ರ ನಟ ನೀನಾಸಂ ಅಶ್ವತ್ಥ್ ಅವರನ್ನ ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್, ಹಾಸನ ಮೂಲದ ರೋಹಿತ್ ಎಂಬುವರಿಂದ ಹಸುಗಳನ್ನು ಖರೀದಿ ಮಾಡಿ ಅವರಿಗೆ ೧ ಲಕ್ಷ 50 ಸಾವಿರ ರೂ.ಗಳ ಚೆಕ್ ನ್ನು ನೀನಾಸಂ ಅಶ್ವಥ್ ನೀಡಿದ್ದರು. ನಂತರ ರೋಹಿತ್ ಆ ಚೆಕ್ ನ್ನು ಬ್ಯಾಂಕ್ ಗೆ ಹಾಕಿದಾಗ ಬೌನ್ಸ್ ಆಗಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಹಾಸನದ ಜೆಎಮ್ಎಫ್ಸಿ ಕೋರ್ಟ್ನಲ್ಲಿ ಕೇಸ್ ಹಾಕಿದ್ದ ರೋಹಿತ್, ನ್ಯಾಯಾಲಯದಿಂದ ನಾಲ್ಕು ಬಾರಿ ಅರೆಸ್ಟ್ ವಾರೆಂಟ್ ಹೊರಡಿಸಿದ್ದರೂ ಕೋರ್ಟ್ಗೆ ಅಶ್ವತ್ಥ್ ಹಾಜರಾಗಿರಲಿಲ್ಲ. ಐದನೇ ಬಾರಿ ಅರೆಸ್ಟ್ ವಾರೆಂಟ್ ಬಂದ ಹಿನ್ನಲೆಯಲ್ಲಿ ಹಾಸನ ಬಡಾವಣೆ ಠಾಣೆ ಪೊಲೀಸರು ಅವರನ್ನು ಬಂಧಿಸಿ ಶನಿವಾರ ರಾತ್ರಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ಹಸುಗಳ ಖರೀದಿ ಬಗ್ಗೆ ನ್ಯಾಯಾಧೀಶರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಸದ್ಯ ಶೇ.25ರಷ್ಟು ಹಣ ಪಾವತಿಸುವಂತೆ ನ್ಯಾಯಾಲಯ ಸೂಚನೆ ನೀಡಿದ್ದು, ಅದರಂತೆ ನೀನಾಸಂ ಅಶ್ವತ್ಥ್ ಹಣ ಕೊಟ್ಟಿದ್ದಾರೆ. ಬಾಕಿ ಹಣ ಪಾವತಿಸಲು ನ್ಯಾಯಾಲಯವು ಅವರಿಗೆ ಸಮಯಾವಕಾಶ ನೀಡಿದ ಎಂದು ಹೇಳಿದರು..