ಕರಾವಳಿ ಜಿಲ್ಲೆಗಳಿಗೆ ಪ್ರಮಾಣೀಕೃತ ಬಿತ್ತನೆ ಬೀಜ ಪೂರೈಕೆ : ಸಚಿವ ಚೆಲುವರಾಯಸ್ವಾಮಿ

ಬೆಂಗಳೂರು : ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿವಿ ಉತ್ಪಾದಿಸಿರುವ ಸಹ್ಯಾದ್ರಿ ಕೆಂಪು ಮುಕ್ತಿ ಭತ್ತದ ತಳಿ 40 ವರ್ಷಗಳ ಹಿಂದೆ ಕೇರಳದಿಂದ ಪರಿಚಯಸಲ್ಪಟ್ಟ ಎಂಓ-4 ಗಿಂತಲೂ ಹೆಚ್ಚು ಇಳುವರಿ ಹಾಗೂ ರೋಗನಿರೋಧಕ ಸಾಮರ್ಥ್ಯ ಹೊಂದಿದೆ. ಹೀಗಾಗಿ ಆ ಬಿತ್ತನೆ ಬೀಜ ಪೂರೈಕೆ ಮಾಡಲಾಗುವುದು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಸೋಮವಾರ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ಗುರುರಾಜ್ ಶೆಟ್ಟಿ ಗಂಟಿಹೊಳೆ ಗಮನ ಸೆಳೆಯುವ ಸೂಚನೆಯಡಿ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಅವರು, ಬರ ಸ್ಥಿತಿಯಿಂದ ಉತ್ಪಾದನೆ ಕೊರತೆಯಾದರೂ ಕರಾವಳಿಗೆ ಜಿಲ್ಲೆಗಳಿಗೆ 1,492 ಕ್ವಿಂಟಾಲ್ ಬಿತ್ತನೆಬೀಜ ಪೂರೈಸಿದೆ. ಜೊತೆಗೆ ಬೀಜ ನಿಗಮ ಹಾಗೂ ಕೃಷಿ ಮತ್ತು ತೋಟಗಾರಿಕೆ ವಿವಿ ಮೂಲಕ 959 ಕ್ವಿಂಟಾಲ್ ಪ್ರಮಾಣೀಕೃತ ಬಿತ್ತನೆ ಬೀಜ ಪೂರೈಸಿದೆ. ಹೀಗಾಗಿ ಬಿತ್ತನೆಬೀಜ ಪೂರೈಕೆಯಲ್ಲಿ ಕೊರತೆ ಉಂಟಾಗಿಲ್ಲ ಎಂದು ಹೇಳಿದರು.
ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ 1,492 ಕ್ವಿಂಟಾಲ್ ಪ್ರಮಾಣಿತ ಎಂಓ-4 ಭತ್ತದ ಬಿತ್ತನೆ ಬೀಜ ಪೂರೈಸಿದ್ದು ಇದರ ಜೊತೆಗೆ ಸ್ಥಳೀಯವಾಗಿ ಉತ್ಪಾದಿತ ಸಹ್ಯಾದ್ರಿ ಕೆಂಪುಮುಕ್ತಿ 730 ಕ್ವಿಂಟಾಲ್ ಹಾಗೂ 196.50 ಕ್ವಿಂಟಾಲ್ ಉಮಾ ತಳಿ 229 ಕ್ವಿಂಟಾಲ್ ಜ್ಯೋತಿ ತಳಿ ಬಿತ್ತನೆ ಬೀಜಗಳು ಸೇರಿದಂತೆ ಒಟ್ಟು 2,648 ಕ್ವಿಂಟಾಲ್‍ಗೂ ಅಧಿಕ ಬಿತ್ತನೆಬೀಜಗಳನ್ನು ರಾಜ್ಯ ಬೀಜ ನಿಗಮದಿಂದ ರೈತ ಸಂಪರ್ಕ ಕೇಂದ್ರಗಳ ಮೂಲಕ ಸರಬರಾಜು ಮಾಡಲಾಗಿದೆ ಎಂದು ಚಲುವರಾಯಸ್ವಾಮಿ ತಿಳಿಸಿದರು.
ಕರಾವಳಿ ಜಿಲ್ಲೆಗಳಿಗೆ ಸುಮಾರು 2,400 ಕ್ವಿಂಟಾಲ್ ಭತ್ತದ ಬಿತ್ತನೆ ಬೀಜ ಬೇಡಿಕೆ ಇತ್ತು, ಇದರಲ್ಲಿ 1492.21 ಕ್ವಿಂಟಾಲ್ ಒಔ-4 ಹಾಗೂ 959 ಕ್ವಿಂಟಾಲ್ ಸಹ್ಯಾದ್ರಿ ಕೆಂಪುಮುಕ್ತಿ ಬಿತ್ತನೆ ಬೀಜ ಸರಬರಾಜು ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.