ಒಬ್ಬರನ್ನು ತುಳಿದು ರಾಜಕೀಯ ಮಾಡುವುದು ಕಾಂಗ್ರೆಸ್ನಲ್ಲಿಲ್ಲ : ಚೆಲುವರಾಯಸ್ವಾಮಿ

ಸಚಿವ ಚೆಲುವರಾಯಸ್ವಾಮಿ
ಬೆಂಗಳೂರು : ಒಬ್ಬರನ್ನು ತುಳಿದು ರಾಜಕೀಯ ಮಾಡುವುದು ಕಾಂಗ್ರೆಸ್ನಲ್ಲಿಲ್ಲ. ಇದು ನಡೆಯುವುದು ಬಿಜೆಪಿಯಲ್ಲಿ ಮಾತ್ರ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ತಿಳಿಸಿದ್ದಾರೆ.
ಸಚಿವರಾದ ಸತೀಶ್ ಜಾರಕಿಹೊಳಿ, ಕೆ.ಎನ್.ರಾಜಣ್ಣರನ್ನು ಹಣಿಯಲು ಬಿಜೆಪಿ ನಾಯಕ ಶ್ರೀರಾಮುಲು ಅವರನ್ನು ಕಾಂಗ್ರೆಸ್ಗೆ ತರಲು ಡಿ.ಕೆ.ಶಿವಕುಮಾರ್ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಜನಾರ್ದನ ರೆಡ್ಡಿಯವರ ಹೇಳಿಕೆ ವಿಚಾರವಾಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಪ್ರತಿಕ್ರಿಯಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ಯಾರೇ ಬಂದರು, ಯಾರನ್ನೂ ತುಳಿಯಲು ಸಾಧ್ಯವಿಲ್ಲ. ಸತೀಶ್ ಜಾರಕಿಹೊಳಿ ಪಕ್ಷದ ಹಿರಿಯ ನಾಯಕರು. ಶ್ರೀರಾಮುಲು ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್ಗೆ ಬರುತ್ತಾರೆ ಎಂಬ ಮಾತಿತ್ತು. ಕಾಂಗ್ರೆಸ್ ಪಕ್ಷದ ಸಿದ್ಧಾಂತ ಒಪ್ಪಿ ಯಾರೇ ಬಂದರೂ ರಾಜ್ಯ ನಾಯಕರು ಮತ್ತು ಪಕ್ಷದ ಹೈಕಮಾಂಡ್ ಚರ್ಚಿಸಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುತ್ತದೆ ಎಂದು ಚೆಲುವರಾಯಸ್ವಾಮಿ ಹೇಳಿದರು.
ಲೋಕಸಭೆ ಉಪಚುನಾವಣೆ ಸಂದರ್ಭದಲ್ಲಿ ಅನೇಕರು ಕಾಂಗ್ರೆಸ್ಗೆ ಬರುತ್ತಾರೆಂಬ ಸುದ್ದಿ ಇತ್ತು. ಆದಾದ ಮೇಲೆ ನಾವು ಮೂರೂ ಉಪಚುನಾವಣೆ ಗೆದ್ದ ಬಳಿಕ ಬಿಜೆಪಿ, ಜೆಡಿಎಸ್ನಿಂದ ಅನೇಕರು ಬರುವುದಕ್ಕೆ ಸಿದ್ಧರಿದ್ದಾರೆ. ಯಾರನ್ನು ಸೇರಿಸಿಕೊಳ್ಳಬೇಕು ಎಂದು ಪಕ್ಷದ ನಾಯಕರು, ಹೈಕಮಾಂಡ್ ತೀರ್ಮಾನ ಮಾಡುತ್ತದೆ. ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ. ನಮಗೆ ಯಾರ ಅವಶ್ಯಕತೆಯೂ ಇಲ್ಲ, ಪಕ್ಷದ ಸಿದ್ಧಾಂತ ಒಪ್ಪಿ ಬಂದರೆ ಸ್ವಾಗತ ಎಂದು ಚೆಲುವರಾಯಸ್ವಾಮಿ ಹೇಳಿದರು.
ಕಾಂಗ್ರೆಸ್ ಹೈಕಮಾಂಡ್ ಸ್ಟ್ರಾಂಗ್ ಇದೆ: ಜನಾರ್ದನ ರೆಡ್ಡಿ ಮೊದಲು ಅವರ ಪಕ್ಷ ಸರಿ ಮಾಡಿಕೊಳ್ಳಲಿ. ಮೊದಲು ಯತ್ನಾಳ್, ರಮೇಶ್ ಜಾರಕಿಹೊಳಿಯನ್ನು ಸರಿ ಮಾಡಿ, ಆಮೇಲೆ ಮಾತನಾಡಲಿ. ಅವರ ಪಕ್ಷದ ಬಣ ರಾಜಕೀಯವನ್ನು ನಿಲ್ಲಿಸಲು ಬಿಜೆಪಿ ಹೈಕಮಾಂಡ್ಗೆ ಸಾಧ್ಯವಾಗಿಲ್ಲ. ಕಾಂಗ್ರೆಸ್ನಲ್ಲಿ ಹೈಕಮಾಂಡ್ ಸ್ಟ್ರಾಂಗ್ ಇದೆ. ಅಲ್ಲದೇ ಎಐಸಿಸಿ ಭದ್ರವಾಗಿದೆ ಎಂದು ಸಚಿವ ಚೆಲುವರಾಯಸ್ವಾಮಿ ತಿಳಿಸಿದರು.