‘ನಂದಿನಿ’ ದೋಸೆ, ಇಡ್ಲಿ ಹಿಟ್ಟು ಲೋಕಾರ್ಪಣೆಗೊಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು : ‘ನಂದಿನಿ’ ವತಿಯಿಂದ ಪ್ರಥಮ ಬಾರಿಗೆ ಗ್ರಾಹಕರಿಗೆ ಒದಗಿಸಲು ತಯಾರಿಸಿರುವ ‘ನಂದಿನಿ ವೇ ಪ್ರೊಟೀನ್’ ಆಧಾರಿತ ಇಡ್ಲಿ ಮತ್ತು ದೋಸೆ ಹಿಟ್ಟನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ನಗರದಲ್ಲಿ ಲೋಕಾಪರ್ಣೆಗೊಳಿಸಿದ್ದಾರೆ.
ಈ ಸಂದರ್ಭದಲ್ಲಿ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಕೆಎಂಎಫ್ ಅಧ್ಯಕ್ಷ ಭೀಮಾ ನಾಯಕ್, ಕೆಎಂಎಫ್‍ನ ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
‘ಕನ್ನಡಿಗರ ಹೆಮ್ಮೆಯ ಬ್ರ್ಯಾಂಡ್ ಕೆಎಂಎಫ್‍ನ ನಂದಿನಿ ಉತ್ಪನ್ನಗಳು ದೇಶವ್ಯಾಪಿ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡಿದೆ. ರಾಷ್ಟ್ರ ರಾಜಧಾನಿ ದಿಲ್ಲಿಗೂ ನಂದಿನಿ ಹಾಲು ತಲುಪುತ್ತಿದೆ. ದೂರದ ರಾಜಸ್ಥಾನ, ಮಧ್ಯಪ್ರದೇಶ ರಾಜ್ಯಗಳ ಪ್ರಮುಖ ನಗರಗಳಲ್ಲೂ ನಂದಿನಿ ಹಾಲಿಗೆ ಬೇಡಿಕೆ ಬರುತ್ತಿದೆ. ತಿರುಪತಿಯ ಲಡ್ಡು ಪ್ರಸಾದವನ್ನು ನಂದಿನಿ ತುಪ್ಪದಿಂದ ಸಿದ್ಧಪಡಿಸಲಾಗುತ್ತಿದೆ. ನಂದಿನಿ ಉತ್ಪನ್ನಗಳಿಗೆ ಭಾರೀ ಬೇಡಿಕೆ ವ್ಯಕ್ತವಾಗುತ್ತಿದ್ದು, ಕನ್ನಡಿಗರ ಬ್ರ್ಯಾಂಡ್ ಹೆಮ್ಮರವಾಗಿ ಬೆಳೆಯುತ್ತಿದೆ. ರಾಜ್ಯದ ಜನರ ಬಹುದಿನಗಳ ಅಪೇಕ್ಷೆಯಂತೆ ಇದೀಗ ನಂದಿನಿ ದೋಸೆ ಹಾಗೂ ಇಡ್ಲಿ ಹಿಟ್ಟು ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ವೇ ಪ್ರೊಟೀನ್ ಆಧಾರಿತ ಉತ್ಕೃಷ್ಟ ಗುಣಮಟ್ಟದ ಹಿಟ್ಟು ಕೈಗೆಟುಕುವ ದರದಲ್ಲಿ ಗ್ರಾಹಕರಿಗೆ ಲಭ್ಯವಿದ್ದು, ಬೆಳಗಿನ ಉಪಾಹಾರವು ಗರಿಗರಿ ದೋಸೆ, ಸವಿಸವಿ ಇಡ್ಲಿಯೊಂದಿಗೆ ರುಚಿ ಮತ್ತು ಆರೋಗ್ಯವನ್ನು ವೃದ್ಧಿಗೊಳಿಸಲಿದೆ’
-ಸಿದ್ದರಾಮಯ್ಯ, ಮುಖ್ಯಮಂತ್ರಿ
ವಿಶೇಷತೆಗಳು ಏನೇನು?: ‘ನಗರ ಪ್ರದೇಶಗಳಲ್ಲಿ ಹೆಚ್ಚಿನ ಜನರು ತಮ್ಮ ಕೆಲಸದ ಒತ್ತಡದಲ್ಲಿ ದೈನಂದಿನ ಆಹಾರವನ್ನು ಮನೆಯಲ್ಲೇ ತಯಾರಿಸಲು ಸಮಯದ ಅಭಾವದಿಂದ ಕಡಿಮೆ ಸಮಯದಲ್ಲಿ ಸಿದ್ಧ ಪಡಿಸಬಹುದಾದ ಆಹಾರಗಳ ಮೊರೆ ಹೊಗುತ್ತಿರುವುದರಿಂದ, ಆರೋಗ್ಯಕರ ಇಡ್ಲಿ, ದೋಸೆ ಹಿಟ್ಟನ್ನು ಗ್ರಾಹಕರಿಗೆ ಒದಗಿಸಲು ತೀರ್ಮಾನಿಸಿ ಪ್ರಪ್ರಥಮ ಬಾರಿಗೆ ಇಡ್ಲಿ, ದೋಸೆ ಹಿಟ್ಟಿನಲ್ಲಿ ಶೇ.5ರಷ್ಟು ‘ಪ್ರೋಟೀನ್’ ಅಂಶವನ್ನು ಮಿಶ್ರಣಗೊಳ್ಳಿಸಿ, ಉತೃಷ್ಟ ಗುಣಮಟ್ಟದ ಉತ್ಪನ್ನವನ್ನು ಬಿಡುಗಡೆ ಮಾಡಲಾಗಿದೆ’
ಎಷ್ಟು ಬೆಲೆಗೆ ದೊರೆಯುತ್ತೆ: ಬೆಂಗಳೂರು ನಗರದಲ್ಲಿ ಪ್ರಾಯೋಗಿಕವಾಗಿ ನಂದಿನಿ ಬ್ರ್ಯಾಂಡ್‍ನ ಇಡ್ಲಿ, ದೋಸೆ ಹಿಟ್ಟನ್ನು ಎರಡು ವಿವಿಧ ಪ್ಯಾಕ್‍ಗಳಲ್ಲಿ 450 ಗ್ರಾಂಗೆ 40 ರೂ. ಹಾಗೂ 900 ಗ್ರಾಂಗೆ 80 ರೂ. ಮಾರಾಟ ದರ ವನ್ನು ನಿಗದಿಪಡಿಸಿ, ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ. ನಂತರ ಮಾರುಕಟ್ಟೆಯಲ್ಲಿ ಗ್ರಾಹಕರ ಪ್ರತಿಕ್ರಿಯೆಯನ್ನು ಗಮನಿಸಿ ಬೇರೆ ನಗರಗಳಿಗೂ ನಂದಿನಿ ಇಡ್ಲಿ, ದೋಸೆ ಹಿಟ್ಟಿನ ಮಾರಾಟವನ್ನು ವಿಸ್ತರಿಸುವ ಕ್ರಮವಹಿಸಲಾಗುತ್ತದೆ’ ಎಂದು ಕೆಎಂಎಫ್ ಮಾಹಿತಿ ನೀಡಿದೆ.